ಬೆಂಗಳೂರು ಗ್ರಾಮಾಂತರ

ವೋಟಿನ ಹಕ್ಕಿಗಾಗಿ ಅಂಗವಿಕಲ ಧರಣಿ

Published On :

ಸೂಲಿಬೆಲೆ: ಗುರುತಿನ ಚೀಟಿಯಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ 82 ವರ್ಷದ ಅಂಗವಿಕಲ ವೃದ್ಧರೊಬ್ಬರಿಗೆ ಮತದಾನ ಮಾಡಲು ನಿರಾಕರಿಸಿದ್ದನ್ನು ಖಂಡಿಸಿ ತನಗೆ ಹಕ್ಕು ಚಲಾಯಿಸಲು ಅವಕಾಶ ಕೊಡುವಂತೆ ಒತ್ತಾಯಿಸಿ 3 ಗಂಟೆ ಮತಕೇಂದ್ರದಲ್ಲಿಯೇ ಧರಣಿ ಮಾಡಿದ ಘಟನೆ ಸೂಲಿಬೆಲೆ ಮತಗಟ್ಟೆ ಸಂಖ್ಯೆ 55ರಲ್ಲಿ ನಡೆದಿದೆ.
ಏನಾಯಿತು?: ಸೂಲಿಬೆಲೆ ಮತಗಟ್ಟೆ ಸಂಖ್ಯೆ 55ರ ವ್ಯಾಪ್ತಿಗೆ ಒಳಪಡುವ ಜನತಾ ಕಾಲೋನಿಯ ಅಂಗವಿಕಲ ವೃದ್ಧ ಸಾಬೀರ್ ಸಾಬಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದಾರೆ. ಗುರುತಿನ ಚೀಟಿ ತೋರಿಸಿದ ನಂತರ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದು, ಮತದಾನಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ಸಾಬೀರ್, ನಾನು 82 ವರ್ಷದಲ್ಲಿ ಆನೇಕ ಬಾರಿ ಮತದಾನ ಮಾಡಿದ್ದಾನೆ. ಚುನಾವಣಾಧಿಕಾರಿಗಳು ಗುರುತಿನ ಚೀಟಿ ನೀಡಿದ್ದು, ತನಗೆ ಅವಕಾಶ ನೀಡುವವರೆಗೂ ಮತಕೇಂದ್ರ ಬಿಟ್ಟು ಕದಲುವದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಆಗ ಅಧಿಕಾರಿಗಳು ಈತನ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ಈ ವೇಳೆ ಮತಗಟ್ಟೆ ಪರಿಶೀಲನೆಗೆ ಬಂದ ಜಿಲ್ಲಾ ಎಸ್ಪಿ ಪ್ರಕಾಶ್ ಬಳಿ ಸಾಬೀರ್, ಮತದಾನದ ಹಕ್ಕಿನ ಬಗ್ಗೆ ಬಿನ್ನಹಿಸಿಕೊಂಡರು. ಆದರೆ, ಇದಕ್ಕೆ ಕೇರ್ ಮಾಡದ ಎಸ್ಪಿ, ನಿನಗೆ ಅನ್ಯಾಯವಾಗಿದ್ದರೆ ಚುನಾವಣಾಧಿಕಾರಿಗೆ ದೂರು ನೀಡು, ಮತ ಕೇಂದ್ರದಲ್ಲಿ ಧರಣಿ ಕುಳಿತಿದ್ದು ತಪ್ಪು. ಇಲ್ಲಿಂದ ಹೊರ ಹೋಗಲಿಲ್ಲವೆಂದರೆ ಬಂಧಿಸಿ ಕರೆದುಕೊಂಡು ಹೋಗಬೇಕಾದೀತು ಎಂದು ಗದರಿಸಿದ್ದಾರೆ.
ಸುದ್ದಿಗಾರರ ಮೇಲೆ ಸಿಡಿಮಿಡಿ: ಆ ಬಳಿಕವೂ ಸಾಬೀರ್ ಎಷ್ಟು ವಿನಂತಿಸಿದರೂ ಎಸ್ಪಿ ಮನಸು ಕರಗಲಿಲ್ಲ. ಈ ವೇಳೆ ಘಟನೆಯನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರನ್ನು ಕಂಡು ನೀವ್ಯಾರು? ಇಲ್ಲಿಗೆ ಯಾರ ಅನುಮತಿ ಮೇಲೆ ಬಂದಿರಿ ಎಂದು ಸಿಡಿಮಿಡಿಗೊಂಡರು. ಕೊನೆಗೂ ಎಸ್ಪಿ ಸಾಹೇಬರು 82 ವರ್ಷದ ವೃದ್ಧನನ್ನು ಬಲವಂತವಾಗಿ ಅಲ್ಲಿಂದ ಖಾಲಿ ಮಾಡಿಸಿದರು. ಮತದಾನ ಹಕ್ಕಿನಿಂದ ವಂಚಿತನಾದ ವೃದ್ಧ ನಿರಾಸೆಯಿಂದ ಹೊರ ಹೋದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.