ಬೆಂಗಳೂರು ಗ್ರಾಮಾಂತರ

ರಾಜಕೀಯ ಪಕ್ಷಗಳ ಜಗಳದಲ್ಲಿ ಬಡವಾದ ರೈತ

Published On :

ಕನ್ನಡಪ್ರಭ ವಾರ್ತೆ  ಚಿಕ್ಕಬಳ್ಳಾಪುರ   ಮೇ 7
ರಾಜಕೀಯ ವೈಷಮ್ಯದಿಂದ ದುಷ್ಕರ್ಮಿಗಳು ರೇಷ್ಮೆ ಹುಳುಗಳಿಗೆ ವಿಷವುಣಿಸಿ ರೈತರೊಬ್ಬರಿಗೆ ಸುಮಾರು 1.5 ಲಕ್ಷ ನಷ್ಟವನ್ನುಂಟು ಮಾಡಿರುವ ಘಟನೆ ಇಲ್ಲಿ ಮಂಗಳವಾರ ನಡೆದಿದೆ.
ವಿಧಾನಸಭಾ ಚುನಾವಣೆಗೆ ತಮ್ಮ ಪರವಾಗಿ ಪ್ರಚಾರ ಕೈಗೊಳ್ಳಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯವೆಸಗಲಾಗಿದೆ ಎಂದು ರೇಷ್ಮೆಹುಳು ಸಾಕಣೆಕಾರ ವೆಂಕಟೇಶ್ ಆರೋಪಿಸಿದ್ದಾರೆ.  
ಘಟನೆ ಹಿನ್ನೆಲೆ: ವೆಂಕಟೇಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಹಿಪ್ಪು ನೇರಳೆ ಸೊಪ್ಪನ್ನು ಕತ್ತರಿಸಿ ತಮ್ಮ ತೋಟದ ಮನೆಯ ಆವರಣದಲ್ಲಿಟ್ಟು ಕೊಂಡಿದ್ದರು.
ಈ ನಡುವೆ ಊಟಕ್ಕೆಂದು ಜಾತವಾರ ಗ್ರಾಮದ ತಮ್ಮ ಮನೆಗೆ ತೆರಳಿದಾಗ ದುಷ್ಕರ್ಮಿಗಳು ರೇಷ್ಮೆ ಸೊಪ್ಪಿನ ಮೇಲೆ ರಾಸಾಯಾನಿಕ ವಿಷ ಸಿಂಪಡಿಸಿ ಪರಾರಿಯಾಗಿದ್ದಾರೆ. ಇದನ್ನು ಗಮನಿಸದ ವೆಂಕೆಟೇಶ್ ಇದೇ ಸೊಪ್ಪನ್ನು ಚಂದ್ರಕಿ ಮತ್ತು ರೇಷ್ಮೆ ಹುಳು ತಟ್ಟೆಗಳಿಗೆ ಹಾಕಿದ ಹಿನ್ನೆಲೆಯಲ್ಲಿ ಬಹುತೇಕ ಹುಳುಗಳು ಮೃತಪಟ್ಟಿವೆ. ಕೆಲವು ನಿತ್ರಾಣಗೊಂಡು ಉಪಯೋಗಕ್ಕೆ ಬಾರದಂತಾಗಿವೆ.
ರೇಷ್ಮೆ ಹುಳುಗಳ ವಿಚಿತ್ರ ವರ್ತನೆಯನ್ನು ಗಮನಿಸಿದ ರೈತ ಸೊಪ್ಪನ್ನು ಗಮನಿಸಿದಾಗ ರಾಸಾಯನಿಕ ವಿಷ ಸಿಂಪಡಿಸಿರುವುದು ಗಮನಕ್ಕೆ ಬಂದಿದೆ. ಈ ವಿಷಯ ತಿಳಿದಿಕೊಂಡು ಸ್ಥಳಕ್ಕಾಗಮಿಸಿದ ಶಾಸಕ ಕೆ.ಪಿ.ಬಚ್ಚೇಗೌಡ ವೆಂಕಟೇಶ್ ಅವರನ್ನು ಸಮಾಧಾನಪಡಿಸಿ, ದುಷ್ಕರ್ಮಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಶಾಸಕರ ಟೀಕೆ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ವೆಂಕಟೇಶ್ ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಯಾರೇ ಆಗಲಿ ನೇರವಾಗಿ ಹೋರಾಟವನ್ನು ನಡೆಸಬೇಕೇ ಹೊರತು ಇಂಥ ನೀಚ ಕೆಲಸಕ್ಕೆ ಕೈ ಹಾಕಬಾರದು. ಮೂಕಜೀವಿಗಳನ್ನು ಕೊಂದ ಪಾಪ ತಗುಲುತ್ತದೆ ಎಂದು ಬಚ್ಚೇಗೌಡ ಕಿಡಿಕಾರಿದರು.
ವೆಂಕಟೇಶ್ 'ಈ ಹಿಂದೆ ಇಂಥ ಘಟನೆಗಳು ಗ್ರಾಮದಲ್ಲಿ ಎಂದೂ ನಡೆದಿರಿಲಿಲ್ಲ. ಕೆಲವರು ಬಂದು ಚುನಾವಣೆಯಲ್ಲಿ ತಮಗೆ ಬೆಂಬಲ ಕೊಡಬೇಕೇ ಹೊರತು, ಜೆಡಿಎಸ್ ಪರ ಪ್ರಚಾರ ಕೈಗೊಳ್ಳಬಾರದು ಎಂದು ತಾಕೀತು ಮಾಡಿದ್ದರು. ಆದರೆ, ನಾನು ಅವರ ಮಾತನ್ನು ನಿರಾಕರಿಸಿದ ಕಾರಣ ಈ ಕೃತ್ಯವೆಸಗಲಾಗಿದೆ' ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.