ಬೆಂಗಳೂರು ಗ್ರಾಮಾಂತರ

'ಧಾವಂತ ಬದುಕಿಗೆ ನಗೆಯೇ ಮದ್ದು'

Published On :

ಬೆಂಗಳೂರು: ಎಲ್ಲೆಲ್ಲೂ ಶೋಕದ ಬದುಕು ತುಂಬಿರುವಾಗ ಅದಕ್ಕೆ ಏಕೈಕ ಮದ್ದು ಎಂದರೆ ಹಾಸ್ಯ ಸಾಹಿತ್ಯ ಮಾತ್ರ. ಹಾಸ್ಯ ಅನಿವಾರ್ಯ ಎನ್ನುವುದು ನಮಗೆ ಇತ್ತೀಚೆಗಷ್ಟೆ ಅರ್ಥವಾಗಿದೆ. ಅದಕ್ಕೆ ಕಾರಣ  ವೇಗದ ಹಾಗೂ ಧಾವಂತ ಬದುಕು ಎಂದು ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅಭಿಪ್ರಾಯಪಟ್ಟರು.
ರಿಸರ್ವ್ ಬ್ಯಾಂಕ್ ಕನ್ನಡ ಸಂಘ ನಗರದ ಯುವನಿಕಾದಲ್ಲಿ ಏರ್ಪಡಿಸಿದ್ದ 'ವಸಂತೋತ್ಸವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯಯುತ ನಗು, ಮಾತಿನಿಂದ ನಮ್ಮ ದೇಹದೊಳಗೆ ಹೆಚ್ಚಿನ ಆಕ್ಸಿಜನ್ ರವಾನೆಯಾಗುತ್ತದೆ. ಇದರಿಂದ ನಮ್ಮ ಆರೋಗ್ಯದ ಜತೆಗೆ ಆಯಸ್ಸು ವೃದ್ಧಿಸುತ್ತದೆ. ದೂರದರ್ಶನಗಳಂತಹ ಆಧುನಿಕ ತಂತ್ರಜ್ಞಾನಗಳ ಮಧ್ಯೆ ನಗುವಿನ ಜತೆಗೆ ಮನೆಗೆ ಆಗಮಿಸಿದ ಅತಿಥಿಗಳ ಕುಶಲೋಪರಿ ಕೇಳುವ ಪದ್ಧತಿಯೂ ಇಲ್ಲವಾಗುತ್ತಿದೆ ಎಂದರು.
ಹಾಸ್ಯಕ್ಕೆ ಸುಭದ್ರತೆ ಬೇಕು: ಸತ್ಯವನ್ನು ಎಂದಿಗೂ ಮುಚ್ಚಿಡಬೇಕಾಗಿಲ್ಲ. ಸತ್ಯ ಎಲ್ಲರಿಗೂ ಗೋಚರಿಸುತ್ತದೆ. ಸತ್ಯವನ್ನು ಪ್ರಿಯವಾದ ಮಾರ್ಗದಲ್ಲಿ ಹೇಳಬೇಕು. ಹಾಸ್ಯಕ್ಕೆ ಸುಭದ್ರತೆ ಬೇಕು. ಎಲ್ಲಾ ಕಡೆಯಲ್ಲೂ ಎಲ್ಲಾ ರೀತಿಯ ಹಾಸ್ಯ ಮಾಡುವ ಹಾಗಿಲ್ಲ. ಸಮಯ ಸಂದರ್ಭಕ್ಕನುಗುಣವಾಗಿ ಹಾಸ್ಯ ಇರಬೇಕು ಎಂದು ಹೇಳಿದರು.
ಪ್ರತಿಭೆಗಳನ್ನು ಸಕಾಲದಲ್ಲಿ ಗೌರವಿಸಿ. ಕೆಲವು ಪ್ರಶಸ್ತಿಗಳನ್ನು ಕೆಲ ವಯಸ್ಸಿನಲ್ಲೇ ನೀಡಬೇಕು. ಪ್ರಶಸ್ತಿ ಅವರಲ್ಲಿ ಆ ಕ್ಷೇತ್ರದ ಬಗೆಗಿನ ಉತ್ಸಾಹವನ್ನು ಹೆಚ್ಚಿಸಬೇಕು. ಅವರ ಇನ್ನಷ್ಟು ಸಾಧನೆಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಮಾ ಶಂಕರ್, ನಮ್ಮ ನಡುವೆ ನಗು ಮರೆತು ಹೋಗುತ್ತಿದೆ. ಇದಕ್ಕೆ ನಮ್ಮ ಜೀವನಶೈಲಿ ಕಾರಣ. ನಗೆ ಕಾರ್ಯಕ್ರಮಗಳು ದೈನಂದಿನ ಬದುಕಲ್ಲಿ ಒಂದಿಷ್ಟು ಬದಲಾವಣೆ ತರುತ್ತವೆ ಎಂದು ಹೇಳಿದರು.
ನಾರಾಯಣ ರಾಯಚೂರ್ ಸ್ವಾಗತಿಸಿ, ಜೆ.ಎನ್. ಸುರೇಶ್ ವಂದಿಸಿದರು. ಟಿ.ಎನ್.ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಹಾಸ್ಯಪಟು ಗಂಗಾವತಿ ಪ್ರಾಣೇಶ್ 'ವಸಂತ- ಹಾಸ್ಯ' ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.