ಬೆಂಗಳೂರು ಗ್ರಾಮಾಂತರ

ಮತ ಗಳಿಕೆಯಲ್ಲೂ ಜೆಡಿಎಸ್ ಮೇಲುಗೈ

Published On :

ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ  ರಾಮನಗರ  ಮೇ11
ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲಿ ಸ್ಥಾನ ಗಳಿಕೆಯ ಜತೆಗೆ ಒಟ್ಟಾರೆ ಮತ ಗಳಿಕೆಯಲ್ಲೂ ಜೆಡಿಎಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷದ್ದು ನಂತರದ ಸ್ಥಾನ. ಆಡಳಿತ ಪಕ್ಷವಾಗಿದ್ದ ಬಿಜೆಪಿಗಿಂತ ಕೆಜೆಪಿ ಮತ ಗಳಿಕೆ ಅಧಿಕವಾಗಿದೆ. ಬಿಎಸ್ಸಾರ್ ಕಾಂಗ್ರೆಸ್ ಮೂರಂಕಿ ದಾಟಿಲ್ಲ.
ಜಿಲ್ಲೆಯಲ್ಲಿ ಜೆಡಿಎಸ್ 2, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ತಲಾ 1 ಸ್ಥಾನ ಪಡೆದಿವೆ. 4 ಕ್ಷೇತ್ರಗಳ ಪೈಕಿ ಒಟ್ಟಾರೆ ಕ್ರಮಬದ್ಧ ಮತಗಳು 663761 ಆಗಿವೆ. ಈ ಪೈಕಿ ಜೆಡಿಎಸ್ 300468(ಶೇ. 45.27)  ಮತ್ತು ಕಾಂಗ್ರೆಸ್ 226652(ಶೇಕಡ 34.74) ಮತಗಳನ್ನು ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ 74194(ಶೇ. 10.53) ಅಧಿಕ ಮತಗಳೊಂದಿಗೆ ಅಗ್ರಸ್ಥಾನಿಯಾಗಿದೆ.
ಜೆಡಿಎಸ್ ಮತಗಳು: ಜೆಡಿಎಸ್‌ಗೆ ರಾಮನಗರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಕಾರಣಕ್ಕೆ ಅತಿ ಹೆಚ್ಚು ಅಂದರೆ 83447 ಮತಗಳು ಲಭಿಸಿವೆ. ನಂತರದ ಸ್ಥಾನದಲ್ಲಿ ಮಾಗಡಿಯ ವಿಜೇತ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಇದ್ದಾರೆ. ಅವರು ಪಡೆದ ಮತಗಳು 74821. ಪರಾಜಿತರಾದ ಚನ್ನಪಟ್ಟಣದ ಅನಿತಾ ಕುಮಾರಸ್ವಾಮಿ 73635, ಕನಕಪುರದಲ್ಲಿ ಪಿಜಿಆರ್ ಸಿಂಧ್ಯಾ 68583 ಮತ ಪಡೆದಿದ್ದಾರೆ.
ಡಿಕೆಶಿ ಸಿಂಹಪಾಲು: ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವ ಮತಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಏಕೈಕ ವಿಜೇತರಾಗಿರುವ ಕನಕಪುರದ ಡಿ.ಕೆ.ಶಿವಕುಮಾರ್ ಅವರದ್ದೇ ಸಿಂಹಪಾಲು.
ಅವರಿಗೆ 100007 ಮತಗಳು ಲಭಿಸಿವೆ. ಚನ್ನಪಟ್ಟಣದಲ್ಲಿ ಸಾದತ್ ಆಲಿಖಾನ್ ಪಡೆದಿರುವ 8134 ಮತಗಳು ಜಿಲ್ಲೆಯ ಮಟ್ಟಿಗೆ ಪಕ್ಷಕ್ಕೆ ಅತಿ ಕಡಿಮೆ ಮತಗಳಾಗಿವೆ. ರಾಮನಗರದಲ್ಲಿ ಮರಿದೇವರು 58049 ಮತ್ತು ಮಾಗಡಿಯಲ್ಲಿ ಎ.ಮಂಜುನಾಥ್ 60462 ಮತ ಗಳಿಸಿದ್ದಾರೆ.
ಇದು “Ñæç¬OÚ’«Ú ಸಾಧನೆ: ಚನ್ನಪಟ್ಟಣ ಒಂದು ಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷ 80099 ಮತ ಪಡೆದುಕೊಂಡಿದೆ. ಈ ಮತಗಳು ಪಕ್ಷಕ್ಕಿಂತ ಅಭ್ಯರ್ಥಿ ಹೆಸರಿನ ಮೇಲೆಯೇ ಬಂದಿವೆ.
 ಚನ್ನಪಟ್ಟಣದಲ್ಲಿ ಯೋಗೇಶ್ವರ್ ವ್ಯಕ್ತಿಗತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆಯೇ ಹೊರತು ಪಕ್ಷವನ್ನು ನೆಚ್ಚಿಕೊಂಡಿಲ್ಲ. ಹಿಂದೆ ಪಕ್ಷೇತರ, ಕಾಂಗ್ರೆಸ್, ಬಿಜೆಪಿಯಲ್ಲೂ ಗೆದ್ದಿದ್ದರು.
ಜೇಡ್ರಳ್ಳಿಯಿಂದ ಕೆಜೆಪಿ: ಮಾಗಡಿ ಕ್ಷೇತ್ರದ ಅಭ್ಯರ್ಥಿ ಜೇಡ್ರಳ್ಳಿ ಕೃಷ್ಣಪ್ಪ ಅವರಿಂದಾಗಿಯೇ ಈ ಜಿಲ್ಲೆಯಲ್ಲಿ ಕೆಜೆಪಿ ಮತಗಳು ಏರಿಕೆ ಕಂಡಿವೆ. 4 ಕ್ಷೇತ್ರಗಳಿಂದ ಕೆಜೆಪಿ ಪಡೆದುಕೊಂಡ ಒಟ್ಟಾರೆ ಮತಗಳು 28341. ಈ ಪೈಕಿ ಜೇಡ್ರಳ್ಳಿ ಒಬ್ಬರ ಪಾಲು 27143. ಉಳಿದ 3 ಅಭ್ಯರ್ಥಿಗಳ ಮತಗಳು 1198 ಮಾತ್ರವೇ. ಕನಕಪುರದಲ್ಲಿ ಮಧು 357, ಚನ್ನಪಟ್ಟಣದಲ್ಲಿ ನಾಗರಾಜು 373 ಮತ್ತು ರಾಮನಗರದಲ್ಲಿ ಎಸ್.ಆರ್. ನಾಗರಾಜು 468 ಮತ ಗಳಿಸಿದ್ದಾರೆ.
ಬಿಎಸ್ಸಾರ್ ದಯನೀಯ ಸ್ಥಿತಿ: ಜಿಲ್ಲೆಯ ಚನ್ನಪಟ್ಟಣ, ಮಾಗಡಿಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಸ್ಪರ್ಧೆ ಇರಲಿಲ್ಲ. ರಾಮನಗರದ ಪಕ್ಷದ ಅಭ್ಯರ್ಥಿ ತೀರ್ಥಪ್ರಸಾದ್ 214 ಮತ್ತು ಕನಕಪುರ ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು 453 ಮತಗಳನ್ನಷ್ಟೇ ಪಡೆದಿದ್ದಾರೆ. ಪಕ್ಷದ ಒಟ್ಟಾರೆ ಮತಗಳು 667 ಮಾತ್ರವೇ. ಈ ಸಂಖ್ಯೆ ಕೆಲ ಕ್ಷೇತ್ರಗಳ ಡಮ್ಮಿ ಅಭ್ಯರ್ಥಿಗಳಿಗಿಂತಲೂ ಕಮ್ಮಿ.
ಬಿಜೆಪಿ ಅವಾಂತರ: ಆಡಳಿತ ಪಕ್ಷವಾಗಿದ್ದ ಬಿಜೆಪಿಯು ಈ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಮತ ಗಳಿಕೆಯಲ್ಲಿ 5ನೇ ಸ್ಥಾನಕ್ಕೆ ಕುಸಿದು, ಅವಾಂತರ ತಂದುಕೊಂಡಿದೆ. ರಾಮನಗರ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದ ಪಕ್ಷದ ಜಿಲ್ಲಾಧ್ಯಕ್ಷ ಶಿವಮಾದು 1776 ಮತ ಪಡೆದರೆ, ಚನ್ನಪಟ್ಟಣದಲ್ಲಿ ಅಬ್ಬರ ನಡೆಸಿದ್ದ ರವಿಕುಮಾರಗೌಡ 1609 ಮತಗಳೊಂದಿಗೆ ಹೀನಾಯ ಸೋಲುಂಡಿದ್ದಾರೆ. ಮಾಗಡಿಯಲ್ಲಿ ಜಗದೀಶ ಪ್ರಸಾದ್ 1604, ಕನಕಪುರದಲ್ಲಿ ಬಿ.ನಾಗರಾಜು 1807 ಮತಗಳನ್ನು ಗಳಿಸಿದ್ದಾರೆ. ಒಟ್ಟಾರೆ ಮತಗಳು 6796 (ಶೇ. 1.02) ಮಾತ್ರವೇ.



ಮತಗಳಿಕೆ
ರಾಮನಗರದ 4 ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್, ಎಸ್ಪಿ, ಕೆಜೆಪಿ, ಬಿಜೆಪಿ, ಬಿಎಸ್ಸಾರ್ ಪಕ್ಷಗಳ 19 ಅಭ್ಯರ್ಥಿಗಳ ಒಟ್ಟು ಮತಗಳಿಕೆಯು 643041. ಬಿಎಸ್ಪಿ, ಜೆಡಿಯು, ಬಿಎಜೆಪಿ, ಎಸ್‌ಡಿಪಿಐ ಹಾಗೂ ಪಕ್ಷೇತರರು ಸಹಿತ 37 ಅಭ್ಯರ್ಥಿಗಳ ಒಟ್ಟಾರೆ ಮತಗಳಿಕೆಯು 20720 ಮಾತ್ರ.




8 ಅಭ್ಯರ್ಥಿಗಳಿಗಷ್ಟೇ ಠೇವಣಿ!
ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 56 ಮಂದಿ ಕಣಕ್ಕೆ ಇಳಿದಿದ್ದರು. ನಾಲ್ವರು ವಿಜೇತರು, ಅವರ ಸಮೀಪ ಪ್ರತಿಸ್ಪರ್ಧಿಗಳಾಗಿದ್ದ ನಾಲ್ವರು ಸೇರಿದಂತೆ 8 ಮಂದಿಗಷ್ಟೇ ಇಡುಗಂಟು ಉಳಿದಿದೆ. 48 ಮಂದಿಯ ಠೇವಣಿ ಜಪ್ತಿಯಾಗಿದೆ. ಚನ್ನಪಟ್ಟಣದಲ್ಲಿ ಹೀನಾಯ ಸೋಲನುಭವಿಸಿದ ಸಾದತ್ ಆಲಿಖಾನ್ ಠೇವಣಿ ಕಳೆದುಕೊಂಡ ಪ್ರಮುಖರು. ಮಾಗಡಿಯಲ್ಲಿ ಗಣನೀಯ ಮತ ಪಡೆಯುವ ಮೂಲಕ ಫಲಿತಾಂಶವನ್ನೇ ಬದಲಿಸಿದ ಕೆಜೆಪಿಯ ಜೇಡ್ರಳ್ಳಿ ಕೃಷ್ಣಪ್ಪ ಠೇವಣಿಗೆ ನಿಗದಿಯಾದ ಮತಗಳ ಸನಿಹಕ್ಕೆ ಬಂದು ನಿಂತಿದ್ದಾರೆ. ಒಟ್ಟಾರೆ ಪುರಸ್ಕೃತ ಮತಗಳ ಪೈಕಿ 6ನೇ ಒಂದು ಭಾಗಕ್ಕೆ ಕಮ್ಮಿಯಿಲ್ಲದಷ್ಟು ಮತ ಪಡೆದುಕೊಂಡವರು ಮಾತ್ರವೇ ಠೇವಣಿ ಪಡೆಯಲು ಅರ್ಹರು. ಮಾಗಡಿಯಲ್ಲಿ 170277 ಮತಗಳು ಪುರಸ್ಕೃತವಾಗಿದ್ದ ಠೇವಣಿಗಾಗಿ 28379 ಮತ ಪಡೆಯಬೇಕಿತ್ತು. ಜೇಡ್ರಳ್ಳಿ ಕೃಷ್ಣಪ್ಪ ಪಡೆದಿರುವ ಮತಗಳು 27143 ಆಗಿವೆ. ಹೀಗಾಗಿ ಅವರಿಗೂ ಠೇವಣಿ ಇಲ್ಲ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.