ಬೆಂಗಳೂರು ಗ್ರಾಮಾಂತರ

ಸುಧಾರಿಸುವುದೇ ಬೋಧನಾ ಪದ್ಧತಿ?

Published On :

ದೇವರಾಜ್ ಎಲ್.
ಕ.ಪ್ರ. ವಾರ್ತೆ, ಬೆಂಗಳೂರು, ಮೇ 12
ಪಠ್ಯವೇನೋ ಚೆನ್ನಾಗಿದೆ. ಆದರೆ, ಬೋಧನಾ ಪದ್ಧತಿ ಸುಧಾರಣೆಯಾಗದೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು?
ಹೊಸ ಪಠ್ಯ ಕ್ರಮ ಸಿದ್ಧಪಡಿಸಿರುವ ಕರ್ನಾಟಕ ಪಠ್ಯ ಪುಸ್ತಕ ಸಂಘ ಹಾಗೂ ಪಠ್ಯಕ್ರಮ ಪರಿಷ್ಕರಣೆ ಮತ್ತು ಪಠ್ಯಕ್ರಮ ರಚನೆ ಮಾಡಿದವರ ಮುಂದೆ ಉದ್ಭವಿಸಿರುವ ಪ್ರಶ್ನೆಯಿದು.
2013- 14ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೆಲವು ತರಗತಿಗಳಿಗೆ ಹೊಸ ಪಠ್ಯಕ್ರಮ ಜಾರಿಗೆ ಬಂದಿದೆ. ಕಳೆದ ವರ್ಷವೂ ಕೆಲ ತರಗತಿಗಳಿಗೆ ಹೊಸ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿತ್ತಾದರೂ ಬೋಧನಾ ಕ್ರಮ ಸುಧಾರಣೆಯಾಗದ ಕಾರಣ ಅದು ಪರಿಣಾಮಕಾರಿಯಾಗಲಿಲ್ಲ. ಇದೀಗ ಈ ವರ್ಷವೂ ಕಳೆದ ಸಾಲಿನ ಸಮಸ್ಯೆಯೇ ಪುನರಾವರ್ತನೆಯಾಗುವುದೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಶಿಕ್ಷಕ ತರಬೇತಿಯ ಬಿಎಡ್ ಮತ್ತು ಡಿಎಡ್ ಕೋರ್ಸ್‌ಗಳಲ್ಲಿ ಬೋಧನಾ ತರಬೇತಿಯೇ ಸಮರ್ಪಕವಾಗಿಲ್ಲದ ಕಾರಣ ಈ ಸಮಸ್ಯೆ ಪ್ರತಿವರ್ಷ ಮುಂದುವರಿಯುತ್ತಲೇ ಇದೆ. ಪಠ್ಯಪುಸ್ತಕಗಳನ್ನು ಎಷ್ಟೇ ಸೃಜನಾತ್ಮಕವಾಗಿ ರಚನೆ ಮಾಡಿದ್ದರೂ ಅದನ್ನು ಬೋಧಿಸುವಲ್ಲಿ ಶಿಕ್ಷಕ ವಲಯ ವೈಫಲ್ಯ ಕಾಣುತ್ತಿದೆ. ಕಳೆದ ವರ್ಷ ಉತ್ತಮ ಪಠ್ಯಪುಸ್ತಕ ರಚನೆ ಮಾಡಿದ್ದರೂ ಬೋಧಿಸುವಲ್ಲಿ ವಿಫಲಗೊಂಡಿತ್ತು.
ಇದಕ್ಕೆ ಶಿಕ್ಷಕ ವರ್ಗವನ್ನು ದೂರುವುದಕ್ಕಿಂತಲೂ ಅವರಿಗೆ ನೀಡುವ ಬೋಧನಾ ತರಬೇತಿಯ ಬಗ್ಗೆಯೇ ಅಸಮಾಧಾನದ ಮಾತು ಕೇಳಿಬರುತ್ತಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್‌ಇಆರ್‌ಟಿ) ನೀಡುತ್ತಿರುವ ತರಬೇತಿಯು ಪಠ್ಯಕ್ರಮ ಬೋಧನೆಗೆ ಹೆಚ್ಚು ಸಹಾಯಕಾರಿಯಾಗುತ್ತಿಲ್ಲ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘ ಹಾಗೂ ಪಠ್ಯಕ್ರಮ ಪರಿಷ್ಕರಣೆ ಮತ್ತು ಪಠ್ಯಕ್ರಮ ರಚನೆ ಮುಖ್ಯ ಸಂಯೋಜಕ ಪ್ರೊ.ಜಿ.ಎಸ್. ಮುಡಂಬಡಿತ್ತಾಯ ಅವರ ಅಭಿಪ್ರಾಯ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಡಿಎಸ್‌ಇಆರ್‌ಟಿಗೆ ಪಠ್ಯಪುಸ್ತಕ ಬೋಧನೆ ಹೇಗೆ? ಎಂಬ ವಿಷಯದ ಬಗ್ಗೆ ಸೂಕ್ತ ತರಬೇತಿ ನೀಡುವಂತೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೂ ಗುಣಮಟ್ಟ ತರಬೇತಿ ನೀಡುವಲ್ಲಿ ಡಿಎಸ್‌ಇಆರ್‌ಟಿ ಸೋತಿರುವಂತೆ ಕಾಣುತ್ತಿದೆ. ರಾಜ್ಯದಲ್ಲಿ ಗುಣಮಟ್ಟ ದ ಶಿಕ್ಷಕರ ಕೊರತೆ ಇಲ್ಲ. ಆದರೆ, ಬೋಧಿಸುವ ಕ್ರಮ ಸರಿಯಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
2013- 14ನೇ ಸಾಲಿಗೆ ರಾಷ್ಟ್ರೀಯ ಪಠ್ಯಪುಸ್ತಕ ಚೌಕಟ್ಟಿನಡಿಯಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘ ಸುಮಾರು 9 ಲಕ್ಷ ಪಠ್ಯಪುಸ್ತಕ ಮುದ್ರಿಸಿದೆ. ಈ ಪೈಕಿ 7.5 ಲಕ್ಷದಷ್ಟು ಕನ್ನಡ ಹಾಗೂ 1ಲಕ್ಷ ಆಂಗ್ಲ ಭಾಷೆಯಿಂದ ಕೂಡಿದ್ದು, ಉಳಿದ ಪುಸ್ತಕಗಳು ಉರ್ದು, ತೆಲುಗು, ತಮಿಳು ಭಾಷೆಯಲ್ಲಿವೆ.
ಹೊಸದೇನಿದೆ?: ಹೊಸ ಪಠ್ಯಪುಸ್ತಕದಲ್ಲಿ ಈ ಬಾರಿಯಿಂದ 'ಚಟುವಟಿಕೆ' ಮತ್ತು 'ನಿಮಗೆ ತಿಳಿದಿರಲಿ', 'ಚರ್ಚಿಸಿ' ಎಂಬ ಹೊಸ ಅಂಶಗಳನ್ನು ಸೇರಿಸಲಾಗಿದೆ. ಚಟುವಟಿಕೆಯಲ್ಲಿ ಮಧ್ಯಯುಗದ ಯುರೋಪ್ ಉಳಿಗಮಾನ್ಯ ಪದ್ಧತಿ ಬಗ್ಗೆ ಪಾಠ ಇದ್ದರೆ, ವಿದ್ಯಾರ್ಥಿಗಳಿಗೆ ನಿಮ್ಮ ಗ್ರಾಮದ ಗ್ರಾಮಲೆಕ್ಕಿಗರನ್ನು ಭೇಟಿ ಮಾಡಿ ಭೂ ಒಡೆತನ ಪಡೆಯುವ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ನೀಡಲಾಗಿದೆ.
ನಿಮಗೆ ತಿಳಿದಿರಲಿ ಎಂಬುವುದರಲ್ಲಿ ಸಾಮಾನ್ಯ ಜ್ಞಾನ ಬಗ್ಗೆ ತಿಳಿಸಲಾಗಿದೆ. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೇಂದ್ರ ಸರ್ಕಾರ ಎಂಬ ಪಾಠದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಬಂದ ಸಂದರ್ಭದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಎಂಬ ವಿಷಯ ನೀಡಿದ್ದಾರೆ ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಷಯ ವಿನಿಮಯ ಮಾಡಿಕೊಳ್ಳಲು ಸಹಾಯಕಾರಿಯಾಗಲಿದೆ.
ನಾಲ್ಕುಹಂತದ ಪರಿಷ್ಕರಣೆ: ಪಠ್ಯಪುಸ್ತಕ ಮುದ್ರಣಗೊಳ್ಳುವ ಮೊದಲು ನಾಲ್ಕು ಬಾರಿ ಪರಿಷ್ಕರಣೆಗೆ ಒಳಪಡುತ್ತದೆ. ಈ ಮೊದಲು ಮೂರು ಬಾರಿ ಮಾತ್ರವೇ ಮಾಡಲಾಗುತ್ತಿತ್ತು. ಮೊದಲ ಹಂತದಲ್ಲಿ 1 ಮತ್ತು 8ನೇ ತರಗತಿ ಪಠ್ಯಪುಸ್ತಕಗಳನ್ನು ಡಯಟ್ ಕೇಂದ್ರದ ಪ್ರಾಂಶುಪಾಲರು ಪರಿಷ್ಕರಿಸಲಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವರ ಅಧೀನದ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಅಧೀನ ಸಮಿತಿ, ನಾಲ್ಕನೇ ಹಂತದಲ್ಲಿ ಪರಿಶೀಲಿಸಲಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ ಹೊಸದಾಗಿ ರಚಿಸಿರುವ 'ರಾಜ್ಯ ಸಂಪಾದಕರ ಮಂಡಳಿ' ಸದಸ್ಯರೂ ಪುಸ್ತಕಗಳನ್ನು ಪರಿಷ್ಕರಿಸುತ್ತಾರೆ.
ಹೊಸ ಪಠ್ಯಪುಸ್ತಕಗಳ ಬೋಧನೆಗೆ ಗುಣಮಟ್ಟದ ಶಿಕ್ಷಕರ ಕೊರತೆ ಇಲ್ಲ. ಆದರೆ, ಬೋಧಿಸುವ ಕ್ರಮ ಬದಲಾಗಬೇಕಿದೆ ಅಷ್ಟೆ.
- ಪ್ರೊ.ಜಿ.ಎಸ್. ಮುಡಂಬಡಿತ್ತಾಯ, ಮುಖ್ಯ ಸಂಯೋಜಕ, ಪಠ್ಯಕ್ರಮ ಪರಿಷ್ಕರಣೆ ಮತ್ತು ಪಠ್ಯಕ್ರಮ ರಚನೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.