ಬೆಂಗಳೂರು ಗ್ರಾಮಾಂತರ

ಪಕ್ಷಾಂತರಿಗಳಿಗೆ ಮಣೆ ಹಾಕಿದ ಪಕ್ಷಗಳಿಗೇ ಸೋಲು

Published On :

- ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಮೇ 16
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 4 ಕ್ಷೇತ್ರಗಳಲ್ಲೂ ಪಕ್ಷಾಂತರಿಗಳಿಗೆ ಮಣೆ ಹಾಕಿದ ಪಕ್ಷಗಳಿಗೇ ಸೋಲಾಗಿದೆ. ವಲಸೆ ಹೋದವರ ಬಗ್ಗೆ ಚಿಂತಿಸದೆ, ಕಾರ್ಯಕರ್ತರನ್ನು ನೆಚ್ಚಿಕೊಂಡು ರಣತಂತ್ರ ರೂಪಿಸಿದ ಅಭ್ಯರ್ಥಿಗಳು ಗೆಲವಿನ ಗುರಿ ತಲುಪಿದ್ದಾರೆ.
ರಾಮನಗರ ಮತ್ತು ಮಾಗಡಿಯಲ್ಲಿ ಕಾಂಗ್ರೆಸ್, ಚನ್ನಪಟ್ಟಣ ಹಾಗೂ ಕನಕಪುರದಲ್ಲಿ ಜೆಡಿಎಸ್ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ ರೆಡ್ ಕಾರ್ಪೆಟ್ ಹಾಸಿದ್ದವು. ದಂಡು ಸಮೇತ ವಲಸೆ ಬಂದವರು ಸೇರ್ಪಡೆಯಾದ ಪಕ್ಷವನ್ನು ಗೆಲವಿನ ದಡ ಸೇರಿಸಲಾಗದೆ ಮುಖಭಂಗ ಅನುಭವಿಸಿದ್ದಾರೆ.  
ಪ್ರಸಕ್ತ ಚುನಾವಣೆಯಲ್ಲಿ ಸಾಕಷ್ಟು ನಾಯಕರು ತಮ್ಮ ವಾರ್ಡ್ ಇಲ್ಲವೇ ಗ್ರಾಮದ ಮತಗಟ್ಟೆಯಲ್ಲಿ ತಾವಿದ್ದ ಪಕ್ಷಕ್ಕೆ ಮುನ್ನಡೆ ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ವಲಸೆ ಹಕ್ಕಿಗಳು ಸೇರಿಕೊಂಡ ಗೂಡಿಗೆ ಆಸರೆ ಆಗುವ ಬದಲು ಹೊರೆಯಾಗಿ ಕಾಡಿರುವುದು ಗುಟ್ಟಿನ ಸಂಗತಿಯೇನಲ್ಲ.
ಚನ್ನಪಟ್ಟಣದಲ್ಲೇ ಅಧಿಕೃತ: ರಾಮನಗರ ಜಿಲ್ಲೆ ಮಟ್ಟಿಗೆ ಅತಿ ದೊಡ್ಡ ಮಟ್ಟದ ಪಕ್ಷಾಂತರ ಚನ್ನಪಟ್ಟಣ ಕ್ಷೇತ್ರದಲ್ಲಾಗಿದೆ. ಆ ಕ್ಷೇತ್ರದಲ್ಲಿ ಜೆಡಿಎಸ್ ಬಸ್ ಮುಖಂಡರಿಂದ ತುಂಬಿ ತುಳುಕುತ್ತಿತ್ತು. ಇಷ್ಟಾಗಿಯೂ ಅನ್ಯ ಪಕ್ಷಗಳ ಸಾಕಷ್ಟು ಮುಖಂಡರು ಜೆಡಿಎಸ್ ಬಸ್‌ನ ಟಾಪ್ ಏರಿ ಪ್ರಯಾಣ ನಡೆಸಿದರು. ಬಿಜೆಪಿಯ ಕೆಲವರು ಬಾಹ್ಯ ಬೆಂಬಲ ನೀಡಿದ್ದರು.
ಆ ಕ್ಷೇತ್ರದಲ್ಲಿ ಜೆಡಿಎಸ್ ಅನಿತಾ ಕುಮಾರಸ್ವಾಮಿ ಅವರಂತಹ ಪ್ರಬಲ ಹುರಿಯಾಳನ್ನೇ ಕಣಕ್ಕಿಳಿಸಿತ್ತು. ಯಾವ ದೃಷ್ಟಿಕೋನದಲ್ಲೂ ಅವರು ಸೋಲುವಂತಹವರಲ್ಲ. ಆದರೆ, ಓವರ್ ಲೋಡ್ ಆಗಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿತು. ಅಡ್ಡಾದಿಡ್ಡಿಯಾಗಿ ಚಲಿಸಿ ಅಡ್ಡದಾರಿ ಹಿಡಿಯಿತು.
ನಾಯಕತ್ವವಿಲ್ಲದೆ ನಡೆದಿದ್ದ ಚುನಾವಣೆಯಲ್ಲಿ ಎಲ್ಲ 5 ಜಿ.ಪಂ. ಕ್ಷೇತ್ರಗಳು ಜೆಡಿಎಸ್ ಪಾಲಾಗಿದ್ದವು. ಪ್ರತಿ ಬಾರಿ ಒಂದಿಲ್ಲೊಂದು ತಂತ್ರ ನಡೆಸಿಕೊಂಡೇ ಬಂದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈ ಬಾರಿ ಸೈಕಲ್ ಏರಿ, ಕಾರ್ಯಕರ್ತರನ್ನು ಮುಂದಿಟ್ಟುಕೊಂಡೇ ಗೆಲವಿನ ರಹದಾರಿ ಕಂಡುಕೊಂಡರು.
ಕನಕಪುರದಲ್ಲಿ ಕಂಗಾಲು: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಕನಕಪುರ ಈ ಬಾರಿ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಯಿತು. ಕ್ಷೇತ್ರದಲ್ಲಿ ಚುನಾವಣೆ ಘೋಷಣೆ ಹಂತದಿಂದಲೇ ಪಕ್ಷಾಂತರ ಪ್ರಾರಂಭವಾಗಿತ್ತು.  ಘಟಾನುಘಟಿ ನಾಯಕರು ಸಹಿತ ಹಲವರು ಜೆಡಿಎಸ್ ಸೇರ್ಪಡೆಯಾಗಿದ್ದರು.
ಸತತ ಆರು ಬಾರಿ ಶಾಸಕರಾಗಿದ್ದ ದಾಖಲೆ ಸಿಂಧ್ಯಾ ಬೆನ್ನಿಗಿದ್ದರೆ, ಶಿವಕುಮಾರ್ ನಿರಂತರ 5 ಬಾರಿಯಿಂದ ವಿಧಾನಸಭೆ ಸದಸ್ಯರಾಗಿದ್ದರು. ಎದುರಾಳಿ ಬೆನ್ನಿಗೆ ಎಷ್ಟೇ ನಾಯಕರು ನಿಂತರೂ ಶಿವಕುಮಾರ್ ದೃತಿಗೆಡಲಿಲ್ಲ. ಕ್ಷೇತ್ರದಲ್ಲಾದ ಅಭಿವೃದ್ಧಿ, ಜಾತಿ ಬಲ ಮತ್ತು ಕರಗತ ಮಾಡಿಕೊಂಡಿದ್ದ ರಣನೀತಿಯಿಂದ ಶಿವಕುಮಾರ್ ಭರ್ಜರಿ ಗೆಲವು ದಾಖಲಿಸಿದ್ದಾರೆ.
ಸತತ ಎರಡು ಬಾರಿ ಶಿವಕುಮಾರ್ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಿದ್ದ ಡಿ.ಎಂ.ವಿಶ್ವನಾಥ್ ಅವರು ಸಿಂಧ್ಯಾ
ರಥಕ್ಕೆ ಸಾರಥಿಯಾಗಿದ್ದರು. ಜೆಡಿಎಸ್ ತೊರೆದಿದ್ದ ಮರಿಲಿಂಗೇಗೌಡ, ನಾರಾಯಣಗೌಡ ಸಹಿತ ಪ್ರಮುಖರು ಮರಳಿದ್ದರಾದರೂ ಶಿವಕುಮಾರ್ ಅವರನ್ನು ಹಣಿಯಲು ಸಾಧ್ಯವಾಗಲಿಲ್ಲ.
ಮಂಜುನಾಥ್ ಎಡವಟ್ಟು: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ತವರಾದ ಮಾಗಡಿ ಕೋಟೆಗೆ ಲಗ್ಗೆ ಇಡಲು ಹೊರಟ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್ ಕೂಡ ಪಕ್ಷಾಂತರಿಗಳಿಗೆ ಮಣೆ ಹಾಕಿದರು. 2-3 ಸಾಲಿನ ಹಲವಾರು ಮುಖಂಡರು ಜೆಡಿಎಸ್, ಬಿಜೆಪಿ ತೊರೆದು ಕೈ ಹಿಡಿದಿದ್ದರು.
ಆದರೆ, ಕಾಂಗ್ರೆಸ್ ಕಟ್ಟಾಳುವಾಗಿದ್ದ ಜೇಡ್ರಳ್ಳಿ ಕೃಷ್ಣಪ್ಪ ಕೆಜೆಪಿ ಅಭ್ಯರ್ಥಿಯಾಗಿ ನೀಡಿದ ಹೊಡೆತದಿಂದ ಆದ ಗಾಯ ಮಾಸುವಂತೆ ಮಾಡುವಲ್ಲಿ ಉಳಿದೆಲ್ಲ ವಲಸಿಗರಿಂದ ಸಾಧ್ಯವಾಗಲಿಲ್ಲ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ಒಡ್ಡಿದ್ದ ಪಿ.ನಾಗರಾಜು ಸೇರ್ಪಡೆಯಿಂದಲೂ ಕಾಂಗ್ರೆಸ್‌ಗೆ ಬಲ ತುಂಬಲಾಗಿಲ್ಲ.
ಆರಂಭದಲ್ಲಿ ಆತಂಕದಲ್ಲಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ವೈಯಕ್ತಿಕ ವರ್ಚಸ್ಸು, ಎಚ್.ಡಿ.ಕುಮಾರಸ್ವಾಮಿ ನಾಮಬಲ, ಒಂದಷ್ಟು ಅಭಿವೃದ್ಧಿಯ ಜತೆಗೆ ಕಾಂಗ್ರೆಸ್ ಮತಗಳ ವಿಭಜನೆಯಿಂದ ಅನಾಯಾಸ ಗೆಲವು ಸಾಧಿಸಿದರು. ಫಲಿತಾಂಶ ಬಳಿಕ ಕಾಂಗ್ರೆಸ್ ಮತ್ತು ಕೆಜೆಪಿ ಅಭ್ಯರ್ಥಿಗಳ ಜಟಾಪಟಿ ಶುರುವಾಗಿದೆ.
ಮುಗ್ಗರಿಸಿದ ಮರಿದೇವರು: ಆರ್ಥಿಕ ಸಂಪನ್ಮೂಲ ಹೂಡಿಕೆ, ಸಂಘಟನಾ ಚತುರತೆಯಿಂದಾಗಿ ರಾಮನಗರ ಕ್ಷೇತ್ರದಲ್ಲಿ ಒಂದೂವರೆ ದಶಕದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಜೀವಕಳೆ ತುಂಬುವಲ್ಲಿ ಅಭ್ಯರ್ಥಿ ಮರಿದೇವರು ಯಶಸ್ವಿಯಾದರು. ಈ ಬಾರಿ ಅಬ್ಬರದ ಪ್ರಚಾರದ ಮೂಲಕ ಒಂದು ಹಂತದಲ್ಲಿ ಅವರು ಜೆಡಿಎಸ್ ಪಾಳಯವನ್ನೇ ಕಂಗಾಲಾಗಿಸಿದ್ದರು.  
ಹಾರೋಹಳ್ಳಿ ಭಾಗದಲ್ಲಿ ಪ್ರಾಬಲ್ಯ ಹೊಂದಿದ ಸಹೋದರರಾದ ನಾಗರಾಜು, ಅನಿಲ್ ಗೌಡ, ನಗರ ಪ್ರದೇಶದ ಪ್ರಮುಖ ನಾಯಕ ಕೆ.ಶೇಷಾದ್ರಿ, ಕಸಬಾ ಹೋಬಳಿ ಹಿಡಿತವಿದ್ದ ಪಿ.ನಾಗರಾಜು ಅವರೆಲ್ಲರೂ ಮರಿದೇವರು ಕೈ ಬಲಪಡಿಸುವ ಶಪಥದೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಜೆಡಿಎಸ್ ಸೇರಿದವರಲ್ಲಿ ಪ್ರಮುಖ ನಾಯಕ ಗಿರೀಗೌಡ ಒಬ್ಬರೇ.
ಜೆಡಿಎಸ್ ಅಭ್ಯರ್ಥಿಗಿಂತ 4-5 ಪಟ್ಟು ಅಧಿಕ ಪ್ರಮಾಣದಲ್ಲಿ ಮರಿದೇವರು ಕಾರ್ಯಕರ್ತರು, ಮುಖಂಡರಿಗೆ ಸಂಪನ್ಮೂಲ ಒದಗಿಸಿದ್ದರು. ಇಷ್ಟಾಗಿಯೂ ಪ್ರಚಾರವನ್ನೇ ನಡೆಸದೆ ಕುಮಾರಸ್ವಾಮಿ ಗೆಲವಿನ ನಗೆ ಬೀರಿದರು. ಈ ಫಲಿತಾಂಶದ ಮೂಲಕ ಕುಮಾರಸ್ವಾಮಿ ಜನಪ್ರಿಯತೆ ಮತ್ತೊಮ್ಮೆ ಸಾಬೀತಾಗಿದೆ.

ಅಧಿಕ ಅಂಚೆ ಮತ ಪಡೆದವರೇ ಗೆದ್ದರು
ರಾಮನಗರ ಜಿಲ್ಲೆಯ ಎಲ್ಲ 4 ಕ್ಷೇತ್ರಗಳಲ್ಲೂ ಅಂಚೆ ಮತಗಳನ್ನು ಹೆಚ್ಚು ಪಡೆದು ಆರಂಭಿಕ ಮುನ್ನಡೆ ಅಭ್ಯರ್ಥಿಗಳೇ ಅಂತಿಮವಾಗಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ. ಚನ್ನಪಟ್ಟಣ ಹೊರತಾಗಿ ಉಳಿದ 3 ಕಡೆ ಫಲಿತಾಂಶ ಏರಿಳಿತ ಕಾಣಲೇ ಇಲ್ಲ.  ರಾಮನಗರದಲ್ಲಿ ಪುರಸ್ಕೃತವಾದ 302 ಅಂಚೆ ಮತಗಳಲ್ಲಿ ಕುಮಾರಸ್ವಾಮಿ 209 ಪಡೆದರೆ, ಪರಾಜಿತ ಮರಿದೇವರು 85ಕ್ಕೆ ತೃಪ್ತಿಪಟ್ಟರು. ಕನಕಪುರದಲ್ಲಿ 232 ಮತಗಳ ಪೈಕಿ ಡಿ.ಕೆ.ಶಿವಕುಮಾರ್ 161 ಹಾಗೂ ಪಿ.ಜಿ.ಆರ್. ಸಿಂಧ್ಯಾ 63 ಮತಗಳನ್ನು ಪಡೆದಿದ್ದಾರೆ.
ಮಾಗಡಿ ಕ್ಷೇತ್ರದ 458 ಅಂಚೆ ಮತಗಳ ಪೈಕಿ ವಿಜೇತ ಅಭ್ಯರ್ಥಿ ಬಾಲಕೃಷ್ಣ 243 ಮತ ಪಡೆದರು. ಪರಾಜಿತರಾದ ಮಂಜುನಾಥ್ 118 ಮತ್ತು ಜೇಡ್ರಳ್ಳಿ ಕೃಷ್ಣಪ್ಪ 80 ಮತಗಳನ್ನು ಹಂಚಿಕೊಂಡಿದ್ದಾರೆ. ಚನ್ನಪಟ್ಟಣದ 565 ಮತಗಳಲ್ಲಿ ಯೋಗೇಶ್ವರ್ 305 ಮತಗಳೊಂದಿಗೆ ಆರಂಭಿಕ ಮುನ್ನಡೆ ಕಂಡರು.  ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 228 ಅಂಚೆ ಮತಗಳೊಂದಿಗೆ ಹಿನ್ನಡೆ ಕಂಡರಾದರೂ ಮತ ಯಂತ್ರಗಳ ಎಣಿಕೆಯಲ್ಲಿ ಆರಂಭಕ 6 ಸುತ್ತಿನವರೆಗೂ ಮುನ್ನಡೆಯಲ್ಲಿದ್ದರು. 7ನೇ ಸುತ್ತಿನ ಬಳಿಕ ಎದರಾಳಿಯ ಅಂತರ ಹೆಚ್ಚುತ್ತಾ ಸಾಗಿತ್ತು. ಉಳಿದ ಮೂರು ಕ್ಷೇತ್ರಗಳಲ್ಲಿ ವಿಜೇತರು ಯಾವೊಂದು ಸುತ್ತಿನಲ್ಲೂ ಹಿನ್ನಡೆ ಕಾಣಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.