ಮದುವೆ ನೆಪದಲ್ಲಿ ಟೆಂಪೋ ಬಾಡಿಗೆ ಪಡೆದು ನಡು ದಾರಿಯಲ್ಲಿ ಕದ್ದುಕೊಂಡು ಹೋದರು...
ಕ.ಪ್ರ.ವಾರ್ತೆ ಸೂಲಿಬೆಲೆ ಮೇ 18
ಮದುವೆಗೆಂದು ಟೊಂಪೋ ಬಾಡಿಗೆ ಪಡೆದು ಕರೆದುಕೊಂಡು ಹೋದ ಇಬ್ಬರು ಅಪರಿಚಿತರು ನಡುದಾರಿಯ ಕತ್ತಲಿನಲ್ಲಿ ಬಾಲಕನನ್ನು ಬೆದರಿಸಿ ಟೆಂಪೋ ಕದ್ದುಕೊಂಡು ಹೋದ ಘಟನೆ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲೇನಹಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆ ಸಂಬಂಧ ಟೆಂಪೋ ಕ್ಲೀನರ್ ಸಂತೋಷ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಚುರುಕುಗೊಂಡಿದೆ.
ಮೇ 17ರ ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಯಲ್ಲಿ ಬೆಂಗಳೂರಿನ ಟಿಸಿ ಪಾಳ್ಯದ ಪುರುಷೋತ್ತಮ ಎಂಬವರಿಗೆ ಸೇರಿದ ಟೆಂಪೋ ಬಳಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಟೆಂಪೋ ಚಾಲಕ ಪರ್ವೇಜ್ ಹಾಗೂ ಕ್ಲೀನರ್ ಸಂತೋಷ ಹತ್ತಿರ ಎಚ್.ಕ್ರಾಸ್ ಸಮೀಪ ಮದುವೆ ಕಾರ್ಯಕ್ಕೆ ಹೋಗಲು ಟೆಂಪೋ ಬಾಡಿಗೆಗೆ ಬೇಕಿದೆ ಎಂದ ಕೇಳಿದ್ದಾರೆ. ವ್ಯವಹಾರದ ನಂತರ ಅಪರಿಚಿತರು ನಾವು ಒಟ್ಟು 12 ಜನ ಇರವುದು. ಹೊಸಕೋಟೆಯಲ್ಲಿ ಇನ್ನುಳಿದವರು ಹತ್ತಿಕೊಳ್ಳುತ್ತಾರೆ ಎಂದು ಹೇಳಿ ಟೆಂಪೋದಲ್ಲಿಯೇ ಹೊಸಕೋಟೆಗೆ ಬಂದಿದ್ದಾರೆ. ಹೊಸಕೋಟೆ ಸಂತೆ ಸರ್ಕಲ್ ಬಳಿ 10-12 ಜನ ಹತ್ತಿಸಿಕೊಂಡು ಅಲ್ಲಿಂದ ಜಂಗಮಕೋಟೆ ಮಾರ್ಗವಾಗಿ ಹೋಗುವಂತೆ ಸೂಚಿಸಿದ್ದರು. ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಬೆಂಡಿಗಾನಹಳ್ಳಿ ಕ್ರಾಸ್ ಮಾರ್ಗದ ಬಾಲೇನಹಳ್ಳಿ ಬಳಿ ಟೆಂಪೋ ನಿಲ್ಲಿಸಲು ಸೂಚಿಸಿದ ಅಪರಿಚಿತರು ಲೈಟುಗಳನ್ನು ಆಪ್ ಮಾಡಿ ಚಾಲಕ ಪರ್ವೇಜ್ಗೆ ಚಾಕು ಮತ್ತು ರಾಡಿನಿಂದ ಬೆದರಿಸಿ ಹಲ್ಲೆ ನಡೆಸಿದ್ದಲ್ಲದೇ ಅವರ ಬಳಿಯಿದ್ದ ಮೊಬೈಲು ಕಸಿದುಕೊಂಡಿದ್ದಾರೆ. ಭಯದಿಂದ ಚಾಲಕ ಕತ್ತಲಲ್ಲಿ ತಪ್ಪಿಸಿಕೊಂಡರೆ, ಕ್ಲೀನರ್ ಸಂತೋಷನನ್ನು ಬೆದರಿಸಿ ಟೆಂಪೋದಿಂದ ಆಚೆ ತಳ್ಳಿ ಟೆಂಪೋದೊಂದಿಗೆ ಪರಾರಿಯಾಗಿದ್ದಾರೆ. ಕ್ಲೀನರ್ ಸಂತೋಷ್ ಸೂಲಿಬೆಲೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ಕುರಿತು ವಿವರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ನದಾಪ್ ಹಾಗೂ ಅಪರಾಧ ವಿಭಾಗದ ನವೀನ್ ಸ್ಥಳ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

