ಗೃಹಿಣಿ ಆತ್ಮಹತ್ಯೆ; ಭುಗಿಲೆದ್ದ ಆಕ್ರೋಶ
ಕನ್ನಡಪ್ರಭ ವಾರ್ತೆ ಮಂಡ್ಯ/ರಾಮನಗರ ಮೇ 19
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವೈದ್ಯನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಲ್ಲಹಳ್ಳಿ ಎಂ.ಸಿ. ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ನಿವೃತ್ತ ಪ್ರಾಧ್ಯಾಪಕ ಲಿಂಗೇಗೌಡರ ಪುತ್ರ, ಮಂಡ್ಯ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಪತ್ನಿ ಡಿ.ತೇಜಸ್ವಿನಿ (26) ಸಾವಿಗೀಡಾಗಿರುವ ಗೃಹಿಣಿ.
ಘಟನೆ ವಿಷಯ ತಿಳಿದು ಉದ್ರಿಕ್ತಗೊಂಡ ತೇಜಸ್ವಿನಿ ಪೋಷಕರ ಗುಂಪೊಂದು ಡಾ.ರಾಘವೇಂದ್ರ ಅವರ ಮನೆಗೆ ಕಲ್ಲು ತೂರಿ ಕಿಟಕಿ- ಗಾಜು ಪುಡಿ ಪುಡಿ ಮಾಡಿದ್ದಾರೆ. ಕಲ್ಲಹಳ್ಳಿ ಸುರಭಿ ಕಲ್ಯಾಣ ಮಂಟಪದ ಬಳಿ ಇರುವ ಡಾ.ರಾಘವೇಂದ್ರ ಅವರಿಗೆ ಸೇರಿರುವ ಗೋದಾಮಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲೆ ಇದ್ದ ಹೊಂಡ ಆಕ್ಟೀವಾ ಬೈಕ್ಗೂ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ವಿಎಲ್ಆರ್ ಕಂಪನಿಯವರು ಗೋದಾಮನ್ನು ಬಾಡಿಗೆ ಪಡೆದಿದ್ದರು. ಗೋದಾಮಿಗೆ ಬೆಂಕಿ ಹಚ್ಚಿದ ಕಾರಣ ಇಲ್ಲಿ ದಾಸ್ತಾನಿದ್ದ ಪಾರ್ಸಲ್ ಸಾಮಗ್ರಿಗಳು, ಅಗತ್ಯ ದಾಖಲೆಗಳು ಸೇರಿ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಲ್ಲದೆ, ಪಕ್ಕದಲ್ಲಿದ್ದ ಮಾಂಡೋವಿ ಮೋಟಾರ್ ಶೋ ರೂಂಗೂ ಕಲ್ಲು ತೂರಿ ಉದ್ರಿಕ್ತರು ಬಾಗಿಲು, ಕಿಟಕಿ- ಗಾಜುಗಳನ್ನು ಹಾನಿಗೊಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಉದ್ರಿಕ್ತರನ್ನು ಚದುರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ. ಶೋಭಾರಾಣಿ, ಸಿಪಿಐ, ಪಿಎಸ್ಐ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆ ಆರೋಪ: ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂ ಡಿಲ್ಲ. ಸದಾ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಅಳಿಯ ಡಾ.ರಾಘವೇಂದ್ರ ಅವರೇ ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೋಷಕರು ಪಶ್ಚಿಮ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಪತಿ ಡಾ.ರಾಘವೇಂದ್ರ ಮತ್ತು ಮಾವ ನಿಂಗಯ್ಯ, ಅತ್ತೆ, ತಂಗಿ ಹಾಗೂ ಸೋದರ ಮಾವ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಘಟನೆ ವಿವರ: 2009ರ ನವೆಂಬರ್ 30 ರಂದು ಚನ್ನಪಟ್ಟಣ ತಾಲೂಕು ಬೊಮ್ಮನಾಯಕನಹಳ್ಳಿ ಗ್ರಾಮದವರಾದ ಬೆಂಗಳೂರಿನ ಬನಶಂಕರಿ 3ನೇ ಸ್ಟೇಜ್ನಲ್ಲಿ ವಾಸವಾಗಿರುವ ಹಾಪ್ಕಾಮ್ಸ್ ಉದ್ಯೋಗಿ ಸಿ.ದೇವರಾಜು ಅವರ ಪುತ್ರಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ತೇಜಸ್ವಿನಿಯನ್ನು ಡಾ.ರಾಘವೇಂದ್ರ ಅವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಈ ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಇದೆ.
ವಿವಾಹ ಸಂದರ್ಭದಲ್ಲಿ ವರನಿಗೆ ಕೋಟ್ಯಂತರ ರು. ಹಣ, 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ ಒಡವೆಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಿ ಬೆಂಗಳೂರು ಬನ್ನೇರುಘಟ್ಟದ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ವಿವಾಹ ನೆರವೇರಿಸಲಾಗಿತ್ತು. ಆದರೆ, ಹಣದ ಮೋಹಕ್ಕೆ ಒಳಗಾಗಿ ಆರೋಪಿ ರಾಘವೇಂದ್ರ ಇನ್ನಷ್ಟು ಹಣ ತರುವಂತೆ ತೇಜಸ್ವಿನಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಪೋಷಕರು ದೂರಿದ್ದಾರೆ.
ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಪತಿ ರಾಘವೇಂದ್ರ ತೇಜಸ್ವಿನಿ ಅಣ್ಣನಿಗೆ ಫೋನ್ ಮಾಡಿ ತೇಜು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಫೋನ್ ಕಟ್ ಮಾಡಿದ್ದಾರೆ ಎನ್ನಲಾಗಿದೆ.
ತೇಜಸ್ವಿನಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಪೋಷಕರ ಕಡೆಯ ನೂರಾರು ಮಂದಿ ಭಾನುವಾರ ಬೆಳಗ್ಗೆ ಮಂಡ್ಯಕ್ಕೆ ಬಂದು ಡಾ.ರಾಘವೇಂದ್ರ ಅವರಿಗೆ ಸೇರಿದ ಗೋದಾಮು ಮತ್ತು ಕೈನೆಟಿಕ್ ಹೊಂಡಾ ಬೈಕ್ಗೆ ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ. ಅಲ್ಲದೆ, ಮನೆಯ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ. ವಿಕ್ರಂ ಆಸ್ಪತ್ರೆ ಬಳಿ ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ.
ತಲೆ ಮರೆಸಿಕೊಂಡಿರುವ ರಾಘವೇಂದ್ರ ಹಾಗೂ ತೇಜಸ್ವಿನಿಯನ್ನು ದಾಖಲು ಮಾಡಿಕೊಂಡ ವಿಕ್ರಂ ಆಸ್ಪತ್ರೆಯ ವೈದ್ಯರನ್ನು ಸ್ಥಳಕ್ಕೆ ಕರೆಸಬೇಕು. ಪಂಚನಾಮೆಗೆ ಬೆಂಗಳೂರಿನಿಂದ ವೈದ್ಯರನ್ನು ಕರೆಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ, ಎಸ್ಪಿ ಭೂಷಣ ಜಿ.ಬೊರಸೆ, ಎಎಸ್ಪಿ ರಾಜಣ್ಣ, ಡಿವೈಎಸ್ಪಿ ಶೋಭರಾಣಿ, ತಹಸೀಲ್ದಾರ್ ಮಮತಾ ಇತರೆ ಅಧಿಕಾರಿಗಳು ತೇಜಸ್ವಿನಿ ಅವರ ಪೋಷಕರ ಮನವೊಲಿಸಿ ಜಿಲ್ಲಾಸ್ಪತ್ರೆಯಲ್ಲಿ ಪಂಚನಾಮೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತ ತೇಜಸ್ವಿನಿ ಅಂತ್ಯಸಂಸ್ಕಾರ ಸ್ವಗ್ರಾಮ ಬೊಮ್ಮನಾಯಕನಹಳ್ಳಿಯಲ್ಲಿ ಮೇ 20ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪೋಷಕರ ಕುಟುಂಬದವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

