ಬೇಸಿಗೆ ಶಿಬಿರದಿಂದ ಮಾನಸಿಕವಾಗಿ ಸದೃಢರಾಗಲು ಸಾಧ್ಯ
ದೇವನಹಳ್ಳಿ: ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೆಸಿಐ ಸಂಸ್ಥೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹತ್ತನೆಯ ವರ್ಷದ 14 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಸಂಘದ ದಶಮಾನಾನೋತ್ಸವ ಸಮಾರಂಭ ಭಾನುವಾರ ನಡೆಯಿತು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಬೇಸಿಗೆ ಶಿಬಿರಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ನಡೆಸುತ್ತಿರುವುದು ಅಭಿನಂದನೀಯ. ಅಲ್ಲದೆ ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿರುವುದು ಸಂಘದ ಸದಸ್ಯರ ಮತ್ತು ತರಬೇತುದಾರರ ಸಾಧನೆಯೇ ಮುಖ್ಯವಾಗಿರುತ್ತದೆ ಎಂದರಲ್ಲದೆ ಇಂತಹ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಎಸಿಪಿ ಎಸ್.ಎಸ್. ನಾಯಕ್ ಅವರು ಮಾತನಾಡಿ ಪಟ್ಟಣ ಪ್ರದೇಶಗಳಲ್ಲಿ ಕೆಲವು ಸಂಘದವರು ಆಡಂಬರದ ಬೇಸಿಗೆ ಶಿಬಿರ ಪ್ರತಿಷ್ಠೆಗಾಗಿ ಮಾಡುತ್ತಾರೆ. ಆದರೆ ಅಂತಹ ಶಿಬಿರಗಳಲ್ಲಿ ಮಕ್ಕಳು ಕಲಿಯುವಲ್ಲಿ ವಿಫಲರಾಗುತ್ತಾರೆ ಎಂದರಲ್ಲದೆ ಇಲ್ಲಿನ ಕ್ರೀಡಾ ಸಂಘ ಮಕ್ಕಳಿಗೆ ಕ್ರೀಡೆಗಳ ಜೊತೆಯಲ್ಲಿ ಯೋಗ , ಜಾನಪದ ನೃತ್ಯಗಳನ್ನು ಕಲಿಸುಕೊಡುವುದರ ಜೊತೆಯಲ್ಲಿ ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮ ಬರಲಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಸತೀಶ್ಕುಮಾರ್ ಮಾತನಾಡಿ, ಇಂದಿನ ಬಹುತೇಕ ಮಕ್ಕಳು ಪ್ಯಾಕ್ ಮಾಡಿದ ಜಿಂಕ್ ಆಹಾರಗಳು, ಪಿಜ್ಜಾ ಇಷ್ಟಪಡುತ್ತಾರೆ. ಕೆಲ ಹಾನಿಕಾರಕ ಆಹಾರ ಸೇವಿಸುವುದರಿಂದ ಮಕ್ಕಳು ತಮ್ಮ ರೋಗನಿರೋಧಕ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಹಾಲು ಮೊಟ್ಟೆ ಅಲ್ಲದೆ ನೈಸರ್ಗಿಕವಾಗಿ ದೊರೆಯುವ ಹಣ್ಣುಗಳ ಜೊತೆಯಲ್ಲಿ ದ್ರಾಕ್ಷಿ, ಬಾದಾಮಿ, ಖರ್ಜೂರಗಳಂತ ಪೌಷ್ಟಿಕ ಆಹಾರ ನೀಡಲಿ ಎಂದರು.
ಡಾ.ಕೆ.ಎಸ್.ಪ್ರಭಾಕರ್ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಸಂಘದ ಸದಸ್ಯರಾದ ಜಿ.ಎ.ರವೀಂದ್ರ, ಬಿ. ದೇವರಾಜು, ಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಜೆಸಿಐ ಸಂಸ್ಥೆಯ ಅಧ್ಯಕ್ಷ ಎ.ಎಂ.ಹರೀಶ್ ಉಪಸ್ಥಿತರಿದ್ದರು. ಮುಖ್ಯ ತರಬೇತುದಾರ ಬಿ.ಪುಟ್ಟಸ್ವಾಮಿ ವಂದನೆ ಅರ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

