'ಬೆಂಗಳೂರಿಗೆ ನೀರಿನ ಸಮಸ್ಯೆ ಇಲ್ಲ'
ಕ.ಪ್ರ.ವಾರ್ತೆ ಬೆಂಗಳೂರು ಮೇ 21
ಕಳೆದ ಒಂದು ವಾರದಿಂದ ರಾಜಧಾನಿಯನ್ನು ಬಿಡದೆ ಕಾಡಿದ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಂತಾಗಿದೆ. ಅಷ್ಟೇ ಅಲ್ಲ, ಇನ್ನು ಒಂದು ತಿಂಗಳು ನೀರಿನ ಸಮಸ್ಯೆಯಿಂದ ಮುಕ್ತವಾಗಲಿದೆ.
ರಾಜಧಾನಿಯನ್ನು ಕಾಡುತ್ತಿರುವ ನೀರಿನ ಸಮಸ್ಯೆ ಕುರಿತು ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತು ದಿನೇಶ್ ಗುಂಡೂರಾವ್ ಅವರು ಮಂಗಳವಾರ ಜಲ ಮಂಡಳಿ ಅಧಿಕಾರಿಗಳ ಜತೆ ಚರ್ಚಿಸಿದ್ದು, ಬೆಂಗಳೂರಿಗೆ ಅಗತ್ಯ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರು ನೀರಿನ ಸಮಸ್ಯೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೇ ತಿಳಿದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಂದಿನ ಒಂದು ತಿಂಗಳು ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.
ಬೆಂಗಳೂರಿಗೆ ಅಗತ್ಯವಿರುವ ನೀರು ತರಿಸಿಕೊಳ್ಳುವ ಕೆಲಸ ಆರಂಭವಾಗಿದೆ. ಇದರ ಜತೆಗೆ ರಾಜ್ಯಾದ್ಯಂತ ಮಳೆ ಆರಂಭವಾಗಿದ್ದು, ಕೆಆರ್ಎಸ್, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಿಗೆ ನೀರು ಹರಿದುಬರಲಿದೆ. ಜತೆಗೆ ತಿಪ್ಪಗೊಂಡನ ಹಳ್ಳಿ ಜಲಾಶಯಕ್ಕೂ ನೀರು ಬಂದರೆ ಸಮಸ್ಯೆ ಸಂಪೂರ್ಣ ಬಗೆಹರಿಯುತ್ತದೆ ಎಂದರು.ಸದ್ಯದ ಮಟ್ಟಿಗೆ ಇನ್ನು ಒಂದು ತಿಂಗಳ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಟ್ಟುಹೋಗಿರುವ ಕೊಳವೆಬಾವಿಗಳನ್ನು ತಕ್ಷಣವೇ ದುರಸ್ಥಿಗೊಳಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಅಧಿಕಾರಿಗಳು ಮಾಹಿತಿ ನೀಡಿ, ನಗರದ ನೀರು ಪೂರೈಕೆಯಲ್ಲಿ ಸುಧಾರಣೆ ಆಗುತ್ತಿದೆ. ಕೃಷ್ಣರಾಜಸಾಗರ ಜಲಾಶಯ(ಕೆಆರ್ಎಸ್)ದ ನೀರಿನ ಮಟ್ಟ ಎತ್ತರಿಸುವ ಸಲುವಾಗಿ ಹೇಮಾವತಿ ಜಲಾಶಯದಿಂದಲೂ ಕೆಆರ್ಎಸ್ಗೆ ನೀರು ಬಿಡುಗಡೆ ಮಾಡಲಾಗಿದೆ. ಹೀಗೆ ಹೆಚ್ಚುವರಿ ಬಿಡುಗಡೆ ಮಾಡಲಾಗಿರುವ ನೀರಿನ ಹರಿವಿನಿಂದಾಗಿ ನಗರ ನೀರು ಪೂರೈಕೆ ಮೂಲಗಳಾದ ಶಿವ ಅಣೆಕಟ್ಟೆ, ಶಿವ ಸಮತೋಲನ ಜಲಾಶಯ ಹಾಗೂ ನೆಟ್ಕಲ್ ಸಮತೋಲನ ಜಲಾಶಯ ನೀರಿನ ಮಟ್ಟ ಸುಧಾರಿಸಲಿದೆ.
ನಗರ ಪೂರೈಕೆಗೆ ಪ್ರತಿದಿನ 600 ಕ್ಯೂಸೆಕ್ ನೀರಿನ ಅಗತ್ಯವಿದೆ. ನಗರಕ್ಕೆ ಪೂರೈಕೆ ಆಗುವ ನೀರಿನ ಪ್ರಮಾಣ 470 ಕ್ಯೂಸೆಕ್ಗೆ ಏರಿದೆ. ಬುಧವಾರದ ವೇಳೆಗೆ ಆ ಪ್ರಮಾಣ 600 ಕ್ಯೂಸೆಕ್ ತಲುಪುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

