ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷಗಾದಿ ಯಾರಿಗೆ?
ದೊಡ್ಡಬಳ್ಳಾಪುರ: ರಾಜ್ಯ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಪಟ್ಟಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದಂತೆ ಸ್ಥಳೀಯ ರಾಜಕಾರಣ ಗರಿಗೆದರಿದೆ. ನಗರಸಭೆಯ ಅಧ್ಯಕ್ಷ ಗಾದಿಯ ಮೀಸಲಾತಿ ನಿಗದಿಗೆ ಆಕಾಂಕ್ಷಿಗಳಿಗೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈ ಬಾರಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತ ಎನ್ನುವಂತಾಗಿದೆ.
ಒಂದು ವೇಳೆ ಪರಿಶಿಷ್ಟ ಜಾತಿಯ ಮಹಿಳೆಗೆ ಪಟ್ಟ ಕೈ ತಪ್ಪಿದರೆ, ಅದು ಪರಿಶಿಷ್ಟ ಪಂಗಡ ಮಹಿಳೆಯ ತೆಕ್ಕೆಗೆ ಒಲಿಯಲಿದೆ. ಆದರೆ ಸದ್ಯದ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಎಸ್ಸಿ ಮಹಿಳೆಯೇ ಅಧ್ಯಕ್ಷರನ್ನಾಗಿಸಲು ಪ್ರಯತ್ನಗಳು ನಡೆದಿದೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವಿದೆ. ಜೊತೆಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತು ಈ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳೆರಡರಲ್ಲೂ ಕಾಂಗ್ರೆಸ್ನ ಶಾಸಕ-ಸಂಸದರಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರಂತಹ ಪ್ರಭಾವಿ ನಾಯಕರು ಇರುವುದು ಕಾಂಗ್ರೆಸ್ಗೆ ಆನೆ ಬಲ ಬಂದಂತಾಗಿದೆ. ಈ ಬಾರಿಯೂ ಅನುಭವಿ ಸದಸ್ಯ ಸತತ 5 ಬಾರಿ ಚುನಾಯಿತರಾಗಿರುವ ತ.ನ.ಪ್ರಭುದೇವ್ಗೆ ಅಧ್ಯಕ್ಷ ಸ್ಥಾನ ಕೈತಪ್ಪುವುದು ನಿಶ್ಚಿತ ಎನ್ನಲಾಗುತ್ತಿದೆ.
ಕಾಂಗ್ರೆಸ್ ರಣತಂತ್ರ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 31 ಸ್ಥಾನಗಳ ಪೈಕಿ ಗೆದ್ದಿರುವುದು ಕೇವಲ 4 ಸ್ಥಾನಗಳನ್ನು ಮಾತ್ರ. ಅದರಲ್ಲಿ ಮೀಸಲಾತಿವಾರು ಇಬ್ಬರು ಬಿಸಿಎಂ (ಎ), ಒಬ್ಬರು ಬಿಸಿಎಂ (ಎ) ಮಹಿಳೆ ಮತ್ತು ಒಬ್ಬರು ಪರಿಶಿಷ್ಟ ಜಾತಿ ಮಹಿಳೆ ಆಯ್ಕೆಯಾಗಿದ್ದಾರೆ. ಈ ಪೈಕಿ ಎಸ್ಸಿ ಮಹಿಳೆ ಮೀಸಲಾತಿಯಲ್ಲಿ ಮಾತ್ರ ಇತರ ಪಕ್ಷಗಳಿಂದ ಆಯ್ಕೆಯಾಗಿಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ರಣತಂತ್ರ ರೂಪಿಸಲಿದೆ ಎಂಬುದು ಒಂದು ವಾದ. ಈ ತಂತ್ರ ಫಲಿಸಿದರೆ 4ನೇ ವಾರ್ಡ್ ವಿನಾಯಕನಗರದ ಸದಸ್ಯೆ ಮಮತಾಶ್ರೀ ಅಧ್ಯಕ್ಷರಾಗಲಿದ್ದಾರೆ.
ಕನ್ನಡ ಪಕ್ಷಕ್ಕೆ ಒಲಿಯುವುದೇ ಅದೃಷ್ಟ: ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು 3 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಕನ್ನಡಪಕ್ಷ 2 ಕ್ಷೇತ್ರಗಳಲ್ಲಿ ಗೆದ್ದು ತನ್ನ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಹಲವು ಬಾರಿ ಮಿತ್ರಪಕ್ಷವಾಗಿ ಕೆಲಸ ಮಾಡಿದೆ.ಈ ಪಕ್ಷದಿಂದ ಗೆದ್ದಿರುವ ಪರಿಶಿಷ್ಟ ಜಾತಿ ಮಹಿಳೆ ಕೂಡ ಎಸ್ಟಿ ವರ್ಗದ ಏಕೈಕ ಮಹಿಳೆಯಾಗಿದ್ದಾರೆ. ಹೀಗಾಗಿ ಕನ್ನಡ ಪಕ್ಷಕ್ಕೂ ಅಧ್ಯಕ್ಷಗಾದಿಯ ಅವಕಾಶ ಇದೆ. ಒಂದು ವೇಳೆ ಮೊದಲ ಅವಧಿಗೆ ಅಧ್ಯಕ್ಷ ಪಟ್ಟ ಕೈತಪ್ಪಿದರೂ 2ನೇ ಅವಧಿಗಂತೂ ಸಿಕ್ಕೇಸಿಗುತ್ತದೆ ಎಂಬ ಲೆಕ್ಕಾಚಾರ ಕೂಡ ರಾಜಕೀಯವಲಯದಲ್ಲಿ ಕೇಳಿಬರುತ್ತಿದೆ. ಈ ಲೆಕ್ಕಾಚಾರ ಫಲಿಸಿದರೆ 8ನೇ ವಾರ್ಡ್ ವಹ್ನಿಗರಪೇಟೆಯ ಸದಸ್ಯೆ ಸೌಭಾಗ್ಯ ಸಂಜೀವನಾಯಕ್ ಅಧ್ಯಕ್ಷರಾಗಲಿದ್ದಾರೆ.
ಜೆಡಿಎಸ್ಗೆ ನಿರಾಸೆ: 31ರಲ್ಲಿ 14 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದ ಜೆಡಿಎಸ್ಗೆ ಅಕ್ಷರಶಃ ನಿರಾಶೆಯಾಗಲಿದೆ. ಈ ಪಕ್ಷದಿಂದ ಗೆದ್ದಿರುವ ಯಾವ ಅಭ್ಯರ್ಥಿಗೂ ಅಧ್ಯಕ್ಷ ಪಟ್ಟ ಸಿಗುವುದು ಸಾಧ್ಯವಾಗದ ಮಾತು. ಇದಕ್ಕೆ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು 6 ಸ್ಥಾನಗಳನ್ನು ಹೊಂದಿರುವ ಬಿಜೆಪಿಯಾಗಲೀ, 5 ಸ್ಥಾನಗಳನ್ನು ಹೊಂದಿರುವ ಪಕ್ಷೇತರರಾಗಲೀ ನಿರ್ಣಾಯಕ ಪಾತ್ರವನ್ನೇನೂ ವಹಿಸುವ ಸಾಧ್ಯತೆ ಕಂಡುಬರುತ್ತಿಲ್ಲ.
ಲಾಬಿ ಜೋರು: ಅಲ್ಪಮತವಿದ್ದರೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದರೂ ಇತರೆ ಪಕ್ಷಗಳ ಪ್ರಭಾವಿಗಳೂ ಸುಮ್ಮನೆ ಕೂತಿಲ್ಲ. ಬೇರೆ ಬೇರೆ ಹಂತಗಳಲ್ಲಿ ತಮ್ಮ ವ್ಯಾಪ್ತಿಯ ಪ್ರಭಾವಿಗಳ ಮೂಲಕ ಲಾಬಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಳೆದ ಅವಧಿಯಂತೆ ಈ ಬಾರಿಯೂ 5-6 ಅಧ್ಯಕ್ಷರನ್ನು ಕಾಣುವ ದುರ್ದೈವ ನಗರಸಭೆಗೆ ಬಾರದಿರಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.
-ಕೆ.ಆರ್.ರವಿಕಿರಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

