ಬೆಂಗಳೂರು ಗ್ರಾಮಾಂತರ

ನಾಪತ್ತೆ ಪ್ರಕರಣ; ನಾಗರಿಕರ ಆತಂಕ

Published On :

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಮೇ 25
ದೊಡ್ಡಬಳ್ಳಾಪುರದಲ್ಲಿ ಕಳೆದ ಒಂದು ವಾರದಿಂದೀಚೆಗೆ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿವಾಹಿತ ಮಹಿಳೆಯರೂ ಸೇರಿದಂತೆ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ.
ಈ ಪ್ರಕರಣ ಪಟ್ಟಣದಲ್ಲಿ ತೀವ್ರ ಸಂಚಲನೆಗೆ ಕಾರಣವಾಗಿದ್ದು, ಜನ ಆತಂಕಗೊಂಡಿದ್ದಾರೆ.
ಪ್ರಕರಣ ಒಂದು: ಇಲ್ಲಿನ ಡಿಕ್ರಾಸ್‌ನಲ್ಲಿ ವಾಸವಾಗಿರುವ ವಿವಾಹಿತ ಮಹಿಳೆ ಶಾಂತಮ್ಮ(28) ಎಂಬಾಕೆ ಕಳೆದ ಒಂದು ವಾರದ ಹಿಂದೆ ಕಾಣೆಯಾಗಿದ್ದಾರೆ. ಈ ಸಂಬಂಧ ಆಕೆ ತಂದೆ ವೇಣುಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ 19ರ ರಾತ್ರಿ 11.30ರ ವೇಳೆಯಲ್ಲಿ ಆಕೆ ಕಾಣೆಯಾಗಿದ್ದಾಳೆ. ಈವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ಎರಡು: ಇಲ್ಲಿನ ಕರೇನಹಳ್ಳಿಯ ನಿವಾಸಿ ಪೂರ್ಣಬಿಂದು(33) ಮತ್ತು ಆಕೆಯ ಮಕ್ಕಳಾದ ಜಗದೀಶ್(12), ಭಾರ್ಗವಿ(11) ಮೇ 20ರಂದು ಕಾಣೆಯಾಗಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ.20ರ ಸಂಜೆ 5 ಗಂಟೆ ವೇಳೆಯಲ್ಲಿ ಇವರು ಕಾಣೆಯಾಗಿದ್ದು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆಕೆಯ ಗಂಡ ಲಿಂಗಪ್ಪ ನಗರ ಠಾಣೆಯಲ್ಲಿ ದೂರಿತ್ತಿದ್ದಾರೆ.
ಈ ಎರಡೂ ಪ್ರಕರಣಗಳು ಸದ್ಯಕ್ಕೆ ಪಟ್ಟಣದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿವೆ. ಕೆಲ ತಿಂಗಳ ವಿರಾಮದ ನಂತರ ಮತ್ತೆ ತಲೆ ಎತ್ತಿರುವ ಸರಣಿ ದರೋಡೆ, ಕಳ್ಳತನ ಪ್ರಕರಣ ಒಂದೆಡೆ ಸಾರ್ವಜನಿಕರ ನಿದ್ದೆಗೆಡಿಸಿದ್ದರೆ, ಮತ್ತೊಂದೆಡೆ ಒಂದೇ ವಾರದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕಾಣೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಪೊಲೀಸರು ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಮಹಿಳೆ ಮತ್ತು ಮಕ್ಕಳ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಮೂರು ದಿನದಲ್ಲಿ ಎರಡು ಅನಾಥ ಶವ ಪತ್ತೆ..
ದೊಡ್ಡಬಳ್ಳಾಪುರ: ಮೂರು ದಿನಗಳಲ್ಲಿ ಎರಡು ಅನಾಥ ಶವಗಳು ಪತ್ತೆಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಹಳೇ ಬಸ್‌ನಿಲ್ದಾಣದ ಸಾರ್ವಜನಿಕ ಶೌಚಾಲಯದ ಹಿಂಭಾಗದಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ. ಮೇ 22ರಂದು ಸುಮಾರು 30ರಿಂದ 35 ವರ್ಷ ವಯಸ್ಸಿನ ಪುರುಷನ ಶವ ಪತ್ತೆಯಾಗಿದ್ದು, ಆತ ಯಾವುದೋ ಗುಪ್ತ ರೋಗದ ಸೋಂಕಿನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೇ 24ರಂದು ಇಲ್ಲಿನ ದೇವಾಂಗಪೇಟೆ(ಹೇಮಾವತಿಪೇಟೆ) ಮುಖ್ಯರಸ್ತೆಯಲ್ಲಿ ಸುಮಾರು 65-70 ವಯಸ್ಸಿನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಆತ ಯಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಪರಿಚಿತ ಶವಗಳ ವಾರಸುದಾರರಿದ್ದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಸಂಪರ್ಕಿಸಬಹುದು. ವಿವರಗಳಿಗೆ 9480802454 ಅಥವಾ 080-27622015 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.