ಬೆಂಗಳೂರು ಗ್ರಾಮಾಂತರ

6 ವರ್ಷ ಹಿಂದೆ ಮಂಜೂರಾದ ಯೋಜನೆಗಳಿಗೆ ಸಿಗುವುದೇ ಕಾಯಕಲ್ಪ?

Published On :

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಚನೆಗೊಂಡ ರಾಮನಗರ ಜಿಲ್ಲೆಯು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಡೆಗಣಿಸಲ್ಪಟ್ಟಿದೆ. 6ವರ್ಷದ ಹಿಂದೆ ಮಂಜೂರುಗೊಂಡು ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಈಗಿನ ಸರ್ಕಾರದಲ್ಲಾದರೂ ಕಾಯಕಲ್ಪ ಸಿಗುವುದೇ ಎನ್ನುವ ಕಾತುರ ಜಿಲ್ಲೆ ಜನತೆಯದ್ದಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ ಯೋಜನೆ ಆಮೆ ವೇಗದಲ್ಲಿ ಸಾಗುತ್ತಿದೆ. ಇಲ್ಲಿವರೆಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಲಾಗಿಲ್ಲ. ಯೋಜನೆಗೆ ಇರುವ ಎಲ್ಲ ಕಂಟಕಗಳ ನಿವಾರಣೆಗೆ ಹಿಂದಿನ ಉಸ್ತುವಾರಿ ಸಚಿವರು ಪ್ರಾಮಾಣಿಕ ಕಾಳಜಿ ವಹಿಸಿಯೇ ಇಲ್ಲ. ನೂತನ ಸಚಿವರಾದರೂ ಯೋಜನೆ ಕಾರ್ಯಾರಂಭಕ್ಕೆ ಮುಂದಾಗಬೇಕಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಮಗ್ಗುಲಲ್ಲಿ 5 ವರ್ಷದಿಂದ ಆಮೆವೇಗದಲ್ಲಿ ನಡೆಯುತ್ತಿರುವ 4 ಅಂತಸ್ತಿನ ಜಿಲ್ಲಾಡಳಿತ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈ ಜಿಲ್ಲೆಯ ಕಚೇರಿಗಳಿಗೆ ಸುಸಜ್ಜಿತ ಕಟ್ಟಡಗಳೇನೋ ಇವೆ. ಆದರೆ, ಮೂಲ ಸೌಲಭ್ಯಗಳಿಲ್ಲ. ಆಡಳಿತ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ಸರ್ಕಾರಿ ಕಚೇರಿಗಳನ್ನು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ದಂಧೆಕೋರರ ಮುಷ್ಟಿಯಿಂದ ಹೊರತರಬೇಕಿದೆ. ಆ ಮೂಲಕ ಸಾರ್ವಜನಿಕರಿಗೆ ನೆರವಾಗಬೇಕಿದೆ.


ಉಸ್ತುವಾರಿ ಮುಂದೆ ಪ್ರಮುಖ ಸವಾಲುಗಳು


ಎಲ್ಲಕ್ಕಿಂತ ಮುಖ್ಯವಾಗಿ ಈ ಜಿಲ್ಲೆಯಲ್ಲಿ ಕಂದಾಯ ಇಲಾಖೆ ತುಂಬಾ ಹದಗೆಟ್ಟಿದೆ. ಬೋಗಸ್ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿಯನ್ನೇ ಪರಭಾರೆ ಮಾಡಲಾಗಿದೆ. ಬಡಬಗ್ಗರ ಜಮೀನುಗಳು ಮಂಗ ಮಾಯವಾಗಿವೆ. ಕೃಷಿಕರು, ಶೋಷಿತರು, ಬಡವರ ಗೋಳು ಕೇಳುವವರಿಲ್ಲ ಎನ್ನುವುದಕ್ಕೆ ಮಿನಿವಿಧಾನಸೌಧ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ ಗಂಗಯ್ಯನ ಸಾವಿನ ಪ್ರಕರಣವೇ ಸಾಕ್ಷಿ ಎನ್ನುವುದು ನೂತನ ಉಸ್ತುವಾರಿ ಸಚಿವರಿಗೆ ಮನದಟ್ಟಾಗಬೇಕಿದೆ.
ರಫ್ತು ಗುಣಮಟ್ಟದ ಕರಿಕಲ್ಲು ಗಣಿಗಾರಿಕೆಗೆ ಅರಣ್ಯ ಒತ್ತುವರಿಯಾಗಿದೆ. ಮರಳು ದಂಧೆಕೋರರು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಇದೆಲ್ಲಕ್ಕೂ ಕಡಿವಾಣ ಹಾಕುವುದು ದೊಡ್ಡ ಸವಾಲಿನ ಕೆಲಸ.
ಬೆಂಗಳೂರು-ಮೈಸೂರು ಚತುಷ್ಪಥ ಹೆದ್ದಾರಿಯಲ್ಲಿ ನಗರ, ಪಟ್ಟಣ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ. ಈ ನಿಟ್ಟಿನಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣಕ್ಕೆ ಮಂಜೂರಾಗಿರುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ. ಬರದಿಂದ ಕಂಗೆಟ್ಟಿರುವ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದು ಮುಖ್ಯವಾಗಿದೆ.
ತೋಟಗಾರಿಕೆ ಬೆಳೆ ಪ್ರದೇಶ ಹೆಚ್ಚಿರುವ ಇಲ್ಲಿ ಹಣ್ಣು ಮತ್ತು ತರಕಾರಿಗಳ ಶೈತ್ಯಾಗಾರ ಸ್ಥಾಪನೆ ಆಗಬೇಕಿದೆ. ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ರೈತರ ಶೋಷಣೆ ತಪ್ಪಿಸಿ, ಸಬ್ಸಿಡಿ ಮೊತ್ತವನ್ನು ರೈತರಿಗೆ ತಲುಪಿಸುವ ಪದ್ಧತಿ ಸರಳೀಕರಣಗೊಳಿಸಬೇಕಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ರದ್ಧತಿ ಬಗ್ಗೆ ಗಮನ ಹರಿಸಿ, ಅರ್ಹರಿಗೆ ಸವಲತ್ತು ಮುಂದುವರೆಸಬೇಕಿದೆ. ಹೆದ್ದಾರಿಯುದ್ದಕ್ಕೂ ತಲೆ ಎತ್ತುತ್ತಿರುವ ಮದ್ಯದ ಅಂಗಡಿಗಳಿಂದ ಅಹಿತಕರ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ. ಹಳ್ಳಿ, ಗಲ್ಲಿಯ ಪೆಟ್ಟಿ ಅಂಗಡಿಗಳಲ್ಲೆಲ್ಲಾ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಕೊಲೆ, ಸುಲಿಗೆ, ದರೋಡೆಯಂತ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇದೆಲ್ಲಕ್ಕೂ ಮಂಗಳ ಹಾಡಿದಾಗಷ್ಟೇ ನೂತನ ಸಚಿವರು ಮೆಚ್ಚುಗೆಗೆ ಪಾತ್ರರಾಗುತ್ತಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.