ಮುಂದುವರೆದ ಅದೇ ಕಥೆ... ಅದೇ ವ್ಯಥೆ
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 28
ನಿರೀಕ್ಷೆಯಂತೆಯೇ ರಾಮನಗರಕ್ಕೆ ಮತ್ತೊಮ್ಮೆ ಹೊರಗಿನವರು ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ. ಈ ಜಿಲ್ಲೆ ಉಸಾಬರಿ ನೋಡಿಕೊಳ್ಳಲು ನಿಯೋಜಿತರಾದ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರೆದುರು ಸಮಸ್ಯೆಗಳ ಸರಮಾಲೆಯ ಜತೆಗೆ ಕಠಿಣ ಸವಾಲುಗಳಿವೆ.
ವರ್ಷ ಆರು ತುಂಬುವಷ್ಟರಲ್ಲಿ ಇಲ್ಲಾಗಲೇ 7 ಮಂದಿ ಉಸ್ತುವಾರಿ ಸಚಿವರು ದರ್ಬಾರ್ ನಡೆಸಿ ಹೋಗಿದ್ದಾರೆ. ಈ ಪೈಕಿ ರಾಮನಗರ ಜಿಲ್ಲೆಗೆ ಸೇರಿದವರು ಯೋಗೇಶ್ವರ್ ಒಬ್ಬರೇ. ಉಳಿದ ಅರ್ಧ ಡಜನ್ ಉಸ್ತುವಾರಿ ಸಚಿವರು ಹೊಣೆ ನಿಭಾಯಿಸುವ ಬದಲು ಜಿಲ್ಲೆಗೆ ಹೊರೆಯಾದರು. ಯಾರೂ ಅಭಿವೃದ್ಧಿಯ ಮೈಲುಗಲ್ಲು ಸ್ಥಾಪಿಸಿಯೇ ಇಲ್ಲ.
ರಾಜಕೀಯ ಜಂಜಾಟ: ರಾಜಕಾರಣವನ್ನೇ ಹಾಸಿ, ಹೊದ್ದುಕೊಂಡ ರಾಮನಗರದಲ್ಲಿ ಒಳ್ಳೆಯ ಕೆಲಸ ಮಾಡಿ ಸೈ ಎನ್ನಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಹೆಜ್ಜೆ ಹೆಜ್ಜೆಗೂ ರಾಜಕಾರಣ ಕಾಲಿಗೆ ಸುತ್ತಿಕೊಳ್ಳುತ್ತದೆ. ಇರುವ ನಾಲ್ಕು ತಾಲೂಕುಗಳಲ್ಲಿ 3 ಮಂದಿ ವಿರೋಧ ಪಕ್ಷದ ಶಾಸಕರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲೂ ಪ್ರತಿಪಕ್ಷದ್ದೇ ಪಾರುಪತ್ಯವಿದೆ.
ಪ್ರತಿಪಕ್ಷದ ಅಬ್ಬರ ಎದುರಿಸಬೇಕಾದ ನೂತನ ಉಸ್ತುವಾರಿ ಸಚಿವರಿಗೆ ಸ್ವಂತ ಪಕ್ಷದ ಬಲ ದುರ್ಲಭವಾಗುವ ಸಾಧ್ಯತೆ ಇದೆ. ರಾಜ್ಯದ ಘಟಾನುಘಟಿ ಕಾಂಗ್ರೆಸ್ ನಾಯಕರ ಪೈಕಿ ಒಬ್ಬರಾದ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರು ಸಚಿವ ಸ್ಥಾನ ಸಿಗದೆ ಅತೃಪ್ತರಾಗಿದ್ದಾರೆ. ಎಲ್ಲ ಹಂತದಲ್ಲೂ ಅವರು ಉಸ್ತುವಾರಿ ಸಚಿವರಿಗೆ ಸಾಥ್ ನೀಡುವ ಸಾಧ್ಯತೆ ಕ್ಷೀಣ.
ಘಟಾನುಘಟಿ ನಾಯಕರು: ವಿಧಾನಸಭೆಯ ಸಂಭವನೀಯ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾ ಕೇಂದ್ರವಾದ ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಕನಕಪುರ ತಾಲೂಕಿನ 2 ಹೋಬಳಿಗಳ ವ್ಯಾಪ್ತಿಗೂ ಶಾಸಕ. ರಾಮನಗರದ 2 ಹೋಬಳಿಗಳನ್ನು ಒಳಗೊಂಡ ಮಾಗಡಿ ಕ್ಷೇತ್ರದಿಂದ ಪ್ರಭಾವಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ 4ನೇ ಬಾರಿ ಆರಿಸಿ ಬಂದಿದ್ದಾರೆ.
ಒಮ್ಮೆ ಪಕ್ಷೇತರ, 2 ಬಾರಿ ಕಾಂಗ್ರೆಸ್, ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಆರಿಸಿ ಬಂದಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇದೀಗ ಸಮಾಜವಾದಿ ಪಕ್ಷದ ಸೈಕಲ್ ಏರಿ ವಿಧಾನಸಭೆ ಮರು ಪ್ರವೇಶಿಸಿದ್ದಾರೆ. ಡಿ.ಕೆ.ಶಿವಕುಮಾರ್ 6ನೇ ಬಾರಿ ಶಾಸಕ. ಇವರಲ್ಲದೆ ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್, ಮಾಜಿ ಸಚಿವ ರಾಮಚಂದ್ರಗೌಡ, ಮೇಲ್ಮನೆ ಉಪ ಸಭಾಪತಿ ಪುಟ್ಟಣ್ಣ ಕೂಡ ಈ ಭಾಗದ ಘಟಾನುಘಟಿ ಮೇಲ್ಮನೆ ಸದಸ್ಯರು.
ಕೆಲಸ ಸಲೀಸಲ್ಲ: ಸಾಕಷ್ಟು ಘಟಾನುಘಟಿ ನಾಯಕರು ಮತ್ತು ಅನುಭವಿಗಳಿಂದಲೇ ತುಂಬಿರುವ ರಾಮನಗರ ಜಿಲ್ಲೆ ರಾಜಕೀಯ ಕಬಡ್ಡಿಗೂ ಹೆಸರಾಗಿದೆ. ಅಭಿವೃದ್ಧಿ ಯೋಜನೆಗಳು, ಆಡಳಿತ ವ್ಯವಸ್ಥೆ ಸಹಿತ ಪ್ರತಿ ಹಂತದಲ್ಲೂ ರಾಜಕೀಯ ಹಸ್ತಕ್ಷೇಪ ತಪ್ಪಿದ್ದಲ್ಲ. ಇದೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವುದು ಅನನುಭವಿ ಉಸ್ತುವಾರಿ ಸಚಿವರಿಗೆ ತುಂಬಾ ತ್ರಾಸದ ಕೆಲಸವೇ ಸರಿ.
ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಸ್ಥಿತಿ ಇಲ್ಲಿದೆ. ಕುಮಾರಸ್ವಾಮಿ, ಶಿವಕುಮಾರ್, ಯೋಗೇಶ್ವರ್ ಯಾವ ಹಂತದಲ್ಲೂ ಏಕ ಅಭಿಪ್ರಾಯಕ್ಕೆ ಬರುವಂತಹ ನಾಯಕರಲ್ಲ. ಪ್ರತಿ ಹಂತದಲ್ಲೂ ಒಬ್ಬರನ್ನೊಬ್ಬರು ಹಣಿಯಲು ಇನ್ನಿಲ್ಲದ ಕಸರತ್ತು ನಡೆಸಿಕೊಂಡೇ ಬಂದಿದ್ದಾರೆ. ಇವರೆಲ್ಲರನ್ನೂ ಸಂಬಾಳಿಸಿಕೊಂಡು ಹೋಗುವ ಜತೆಗೆ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ರಥಕ್ಕೆ ಸಮರ್ಥಸಾರಥಿ ಆಗುವರೇ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

