ರೆಸಾರ್ಟ್ಗಳಲ್ಲಿ ನಿರಂತರ ಮಾಂಸ ದಂಧೆ
ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 28
ದೊಡ್ಡಬಳ್ಳಾಪುರ ಸುತ್ತಮುತ್ತ ಈಗ ಅಶ್ಲೀಲ ಅಕ್ರಮಗಳನ್ನು ನಡೆಸುವ ಪೋಕಿರಿ ತಾಣಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. ಹೈಟೆಕ್ ರೆಸಾರ್ಟ್ಗಳಿಂದ ಹಿಡಿದು, ದಂಧೆ ನಡೆಸುವ ಗುಡಿಸಲುಗಳವರೆಗೆ ಕಾಮದಾಟದ ಪುಂಡರಿಗೆ ಮೋಜು-ಮಸ್ತಿ ಲಭ್ಯವಾಗುತ್ತಿದೆ. ಬೆಂಗಳೂರಿಗೆ ಕೇವಲ 38 ಕಿ.ಮೀ ದೂರದಲ್ಲಿರುವ ಕೈಗಾರಿಕಾನಗರ ಇತ್ತೀಚೆಗೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿರುವುದು ಆತಂಕಕಾರಿ.
ಒಂದು ಮಾಹಿತಿಯ ಪ್ರಕಾರ ದೊಡ್ಡಬಳ್ಳಾಪುರ ಸುತ್ತಮುತ್ತ 20ಕ್ಕೂ ಹೆಚ್ಚು ರೆಸಾರ್ಟ್ಗಳು ತಲೆಎತ್ತಿವೆ. ಅದರಲ್ಲೂ ಮುಖ್ಯವಾಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರದಲ್ಲಿ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಸಿಗುತ್ತಿದೆ. ಜೊತೆಗೆ ಹೊರರಾಜ್ಯ, ಹೊರದೇಶಗಳಿಂದ ಬರುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಮೋಜಿನಾಟಕ್ಕೆ ವೇದಿಕೆಗಳು ಸಿಗುತ್ತಿವೆ. ಹೀಗಾಗಿ ರೆಸಾರ್ಟ್ ಉದ್ಯಮ ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಲಾಭದಾಯಕವಾಗಿ ಬೆಳೆಯುತ್ತಿದೆ. ಬೆಂಗಳೂರಿನ ಹಲವು ಸಾಫ್ಟ್ವೇರ್ ಕಂಪನಿಗಳ ಟೆಕ್ಕಿಗಳಿಗೂ ಈ ರೆಸಾರ್ಟ್ಗಳು ವೀಕೆಂಡ್ ತಾಣಗಳಾಗಿ ಬಳಕೆಯಾಗುತ್ತಿವೆ.
ಪ್ರತಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ರೆಸಾರ್ಟ್ಗಳಲ್ಲಿ ಧಂದೆ ನಡೆಯುತ್ತದೆ. ಉಳಿದಂತೆ ಮಾಮೂಲಿ ದಿನಗಳಲ್ಲಿ ಕೆಲ ರೆಸಾರ್ಟ್ಗಳು ದಂಧೆಗಾಗಿ ವಿಶೇಷ ಪ್ಯಾಕೇಜ್ಗಳನ್ನು ನೀಡುತ್ತವೆ. ಇಲ್ಲಿ ರೂಂ ಪಡೆಯಬೇಕಾದರೆ, ಇತರೆ ಸೌಲಭ್ಯಗಳು ಬೇಕಾದರೆ ಬೆಂಗಳೂರಿನಲ್ಲಿರುವ ಕೆಲ ದಲ್ಲಾಳಿಗಳನ್ನು ಸಂಪರ್ಕಿಸಬೇಕು. ಕೇಳಿದಷ್ಟು ಹಣ ನೀಡಿದರೆ ಸಾಕಾಗುವಷ್ಟು ಮಜಾ ದೊರೆಯುತ್ತದೆ. ರೆಸಾರ್ಟ್ಗಳಿಗೆ ಕೆಲ ಪರ್ಮನೆಂಟ್ ಗಿರಾಕಿಗಳಿದ್ದಾರೆ. ಅವರಿಗೆ ಸುಲಭದಲ್ಲಿ ದೊರೆಯುವ ಸವಲತ್ತುಗಳು ಹೊಸಬರಿಗೆ ದೊರೆಯುವುದು ಸ್ವಲ್ಪ ಕಷ್ಟ. ಆದರೆ ಹಣ ಮಾತ್ರ ಪ್ರಮುಖ ಪಾತ್ರ ವಹಿಸುವ ಇಲ್ಲಿ ಮತ್ತೆಲ್ಲವೂ ಔಪಚಾರಿಕ ಅಷ್ಟೇ.
ಮಾಂಸ ದಂಧೆ: ಈ ರೆಸಾರ್ಟ್ಗಳಿಗೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳು ಮತ್ತು ಆಂಧ್ರಪ್ರದೇಶದಿಂದ ಯುವತಿಯರು ಬರುತ್ತಾರೆ. ಗುತ್ತಿಗೆದಾರರು ಕರೆತರುವ ಈ ಯುವತಿಯರಿಗೆ ಇಂತಿಷ್ಟು ಹಣ ನಿಗದಿ ಮಾಡಿರುತ್ತಾರೆ. ಹಲವು ರೆಸಾರ್ಟ್ಗಳಲ್ಲಿ ಈ ಬಗೆಯ ರೇವು ಪಾರ್ಟಿಗಳು ಪ್ರತಿ ವಾರ ನಡೆಯುತ್ತವೆ ಎಂಬುದು ಕೆಲ ಸಂಘಟನೆಗಳು ನೀಡಿರುವ ಮಾಹಿತಿ. ಈ ಮಾಂಸದಂಧೆಯನ್ನೇ ಕೆಲವರು ಉದ್ಯೋಗವನ್ನಾಗಿಸಿದ್ದಾರೆ. ಹಣವಂತರ ದಾಹ ತಣಿಸಲು ವ್ಯವಸ್ಥೆ ಮಾಡುವುದು ಮತ್ತು ಲಾಭ ಮಾಡಿಕೊಳ್ಳುವುದು ಇವರ ಕೆಲಸ. ಪೊಲೀಸರಿಗೆ ಮಾಹಿತಿ ಇಲ್ಲವೇ: ಇಂತಹ ದಂಧೆಗಳನ್ನು ನಿಯಂತ್ರಿಸಬೇಕಾದ ಪೊಲೀಸರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವೆ ಎಂಬುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈಗ ಬೆಳಕಿಗೆ ಬಂದಿರುವ ಎಸ್.ಆರ್.ವ್ಯಾಲಿ ನಂಗಾನಾಚ್ ಪ್ರಕರಣ ಪೊಲೀಸರ ಉನ್ನತ ಮಟ್ಟದ ತನಿಖೆಗೆ ಒಳಪಟ್ಟಿದ್ದು, ವರದಿ ಬಂದ ಮೇಲೆ ಅದೆಷ್ಟು ಪ್ರಭಾವಿಗಳ ಕೈವಾಡ ಇದೆ ಎಂಬುದು ಬೆಳಕಿಗೆ ಬರುವ ವಿಶ್ವಾಸವಿದೆ. ಪೊಲೀಸರು ಮಾಹಿತಿ ಇದ್ದೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೂಡ ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ. ಗ್ಯಾಂಗ್ರೇಪ್, ಸರಣಿ ಕೊಲೆ ಭೇದಿಸುವಲ್ಲೂ ನಿರ್ಲಕ್ಷ್ಯ ವಹಿಸಿರುವ ಪೊಲೀಸ್ ಇಲಾಖೆಯೇ ಇದಕ್ಕೆ ಉತ್ತರಿಸಬೇಕಿದೆ.
ಅಕ್ರಮ ರೆಸಾರ್ಟ್ಗಳು: ಇನ್ನು ದೊಡ್ಡಬಳ್ಳಾಪುರ ಸುತ್ತಮುತ್ತ ಇರುವ ಅನೇಕ ರೆಸಾರ್ಟ್ಗಳಿಗೆ ಸರ್ಕಾರದ ಅನುಮತಿ ಇಲ್ಲ. ಜೊತೆಗೆ ಹಲವೆಡೆ ಸರ್ಕಾರಿ ಜಮೀನುಗಳನ್ನು ಪ್ರಭಾವಿಗಳ ಮೂಲಕ ಗುಳುಂ ಮಾಡಿ ಈ ಮೋಜಿನ ತಾಣಗಳನ್ನು ಸ್ಥಾಪಿಸಲಾಗಿದೆ. ಕರವೇ ನೀಡಿರುವ ಮಾಹಿತಿಯಂತೆ ಎಸ್.ಆರ್.ವ್ಯಾಲಿ ಸುಮಾರು 100 ಎಕರೆ ಜಾಗದಲ್ಲಿದೆ. ಆದರೆ 50 ಎಕರೆ ಮಾತ್ರ ಇಲ್ಲಿ ಇಧಿಕೃತ. ಉಳಿದ 20 ಎಕರೆ ಬೇನಾಮಿ ದಾಖಲೆ ಸೃಷ್ಟಿಸಿ ಗುಳುಂ ಮಾಡಿದ್ದಾರೆ. 30 ಎಕರೆ ರಾಜಕಾಲುವೆ ಮತ್ತು ಗೋಮಾಳದ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪವಿದೆ. ಅದೇ ರೀತಿ ಇಲ್ಲಿನ ರೆಸಾರ್ಟ್ಮೊಂದರಲ್ಲಿ ಜಿಂಕೆ ಮಾಂಸವನ್ನು ಮಾರಾಟ ಮಾಡಿದ್ದ ಬಗ್ಗೆ ಕೂಡ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದ ಪ್ರಭಾವಿಗಳಿಂದ ಹಿಡಿದು, ತಾಲೂಕಿನ ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೃಪಾಕಟಾಕ್ಷ ಈ ಅಕ್ರಮ ತಾಣಗಳ ಪರ ಇರದಿದ್ದರೆ ಇಷ್ಟು ರಾಜಾರೋಷವಾಗಿ ದಂಧೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಸಾರ್ವಜನಿಕರ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

