ಬೆಂಗಳೂರು ಗ್ರಾಮಾಂತರ

ಮನೆಮನೆಗೆ ಸ್ವಾಮಿ ವಿವೇಕಾನಂದ

Published On :

ರಾಮನಗರ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಸಮಿತಿಯಿಂದ ಮನೆಮನೆಗೆ ಸ್ವಾಮಿ ವಿವೇಕಾನಂದ ಕಾರ್ಯಕ್ರಮಕ್ಕೆ ಭಾನುವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಆರ್ಎಸ್ಎಸ್ನ ಜಿಲ್ಲಾ ಪ್ರಮುಖ ಸತೀಶ್ ಮಾತನಾಡಿ, 19ನೇ ಶತಮಾನದ ಕೊನೆಯ ವರ್ಷಗಳಲ್ಲಿ ಮೊಳಗಿದ ವಿಶ್ವಮಾನವ ವಿವೇಕಾನಂದರ ದಿವ್ಯವಾಣಿ ಎಲ್ಲಾ ಸಂಸ್ಕೃತಿಗಳ, ಸಮಾಜಗಳ ಜನರ ಹೃದಯವನ್ನು ಮುಟ್ಟಿದೆ. ಮಾನವ ನಿರ್ಮಿತ ಎಲ್ಲಾ ಭೇದಗಳನ್ನೂ ಮೀರಿದ ಜೀವ ಕಾರುಣ್ಯ ಅವರ ಮಾತುಗಳಲ್ಲಿ ಪ್ರತಿಧ್ವನಿಸಿದ್ದೇ ಇದಕ್ಕೆ ಕಾರಣವಾಗಿದೆ ಎಂದರು.
ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಸಾರಿದಂತಹ, ಭಾರತೀಯರನ್ನು ಎಚ್ಚರಿಸಿದಂತಹ ಯುಗಪುರುಷ ಸ್ವಾಮಿ ವಿವೇಕಾನಂದ. ಅವರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಅವರ ವಿಚಾರ, ಚಿಂತನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಸಮಿತಿ ಮಾಡುತ್ತಿದೆ ಎಂದು ತಿಳಿಸಿದರು.
ನ.10 ರಿಂದ 24 ರವರೆಗೆ ದೇಶಾದ್ಯಂತ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ, ಅವರ ಸಂದೇಶವಿರುವ ಕರಪತ್ರವನ್ನು ಮನೆಮನೆಗೆ ಹಂಚಲಾಗುವುದು ಎಂದು ಸತೀಶ್ ಹೇಳಿದರು.
ಆಧುನಿಕ ಸಂವಹನ ಸಾಧನಗಳು ಆವಿಷ್ಕಾರಗೊಳ್ಳುವುದಕ್ಕೂ ಮೊದಲೇ ವಿಶ್ವವೇ ಒಂದು ಗ್ರಾಮ ಎಂಬ ಪ್ರಾಚೀನ ಭಾರತೀಯ ಕಲ್ಪನೆಯನ್ನು ಆಧುನಿಕ ಜಗತ್ತಿಗೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು ಎಂದು ಪಟೇಲ್ ಆಂಗ್ಲ ಶಾಲೆಯ ಕಾರ್ಯದರ್ಶಿ ಸಿ.ರಾಜು ತಿಳಿಸಿದರು.
ನಮ್ಮ ಗ್ರಾಮಗಳ ಇಂದಿನ ಪರಿಸ್ಥಿತಿ ನಿರಾಶಾದಾಯಕವಾಗಿದೆ. ಕುಲಕಸುಬುಗಳು ಮೂಲೆಗುಂಪಾಗಿವೆ, ರಾಸಾಯನಿಕ ಗೊಬ್ಬರಗಳು ನಮ್ಮ ನೆಲದ ಫಲವತ್ತತೆಯನ್ನು ಹಾಳು ಮಾಡಿವೆ. ಯುವಕರು ಹಳ್ಳಿಯನ್ನು ತೊರೆದು ನಗರಗಳತ್ತ ವಲಸೆ ಹೋಗತೊಡಗಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಯೋಗ್ಯ ಸಂಸ್ಕಾರ ಸಿಗದೇ ನಮ್ಮ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ಹಳ್ಳಿಗಳು ನಶಿಸಿದರೆ ಭಾರತ ಉಳಿಯಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿ ಬಾಲವೆಂಕಟೇಶ್, ಜಿಲ್ಲಾ ಪ್ರಚಾರ ಪ್ರಮುಖ್ ಪ್ರಭಾಕರ್, ಶಿಕ್ಷಕಿ ವಿನೋದಮ್ಮ, ಸರಸ್ವತಿ ಮತ್ತಿತರರು ಪಾಲ್ಗೊಂಡಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.