ಬೆಂಗಳೂರು ಗ್ರಾಮಾಂತರ

ವಿಧಾನ ಸೌಧ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಖಚಿತ

Published On :

ಚನ್ನಪಟ್ಟಣ: ಅವೈಜ್ಞಾನಿಕವಾಗಿ ಸರ್ಕಾರ ಅಂಗನವಾಡಿ ಕೇಂದ್ರಗಳ ಕೆಲಸದ ಸಮಯ ವಿಸ್ತರಿಸಿರುವುದನ್ನು ಖಂಡಿಸಿ ನಡೆಯಲಿರುವ ವಿಧಾನ ಸೌಧ ಚಲೋ ಪ್ರತಿಭಟನಾ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಾಲ್ಗೊಳ್ಳಲಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ತಿಳಿಸಿದೆ.
ಈ ಕುರಿತು  ಹೇಳಿಕೆ ನೀಡಿರುವ ಸಂಘದ ರಾಜ್ಯ ಉಪಾಧ್ಯಕ್ಷೆ ರೋಹಿಣಿ, ತಾಲೂಕು ಅಧ್ಯಕ್ಷೆ ಚಂದ್ರಕಲಾ ಶಿವಮಾದು, ಕಾರ್ಯದರ್ಶಿ ಶಾಂತ ಕಾಂತರಾಜು, ನ.19 ರಂದು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ವಿಧಾನ ಸೌಧ ಚಲೋದಲ್ಲಿ  ಪಾಲ್ಗೊಳ್ಳುವ ಮೂಲಕ  ಅವೈಜ್ಞಾನಿಕವಾಗಿ ವಿಸ್ತರಿಸಿರುವ ಕೆಲಸದ ಅವಧಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಲಾಗುವುದೆಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಗಳು ಒಗ್ಗೂಡಿ  ಸಂಯುಕ್ತ ಸಂಘರ್ಷ ಸಮಿತಿಯನ್ನು ರಚಿಸಿ ವಿಧಾನ ಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನಾ ರ್ಯಾಲಿಗೆ ರಾಜ್ಯದ ವಿವಿಧೆಡೆಯಿಂದ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೆ 6 ತಾಸುಗಳ ಕಾಲ ಇದ್ದ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಅವಧಿಯನ್ನು ಪೂರ್ವಾಪರ ಯೋಚನೆ ಮಾಡದೆ ಸರ್ಕಾರ 10 ಗಂಟೆಗಳಿಗೆ ಹೆಚ್ಚಿಸಿದ್ದು ಇದು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದವರು ತಿಳಿಸಿದ್ದಾರೆ.
ಅವೈಜ್ಞಾನಿಕವಾಗಿ ಅಂಗನವಾಡಿ ಕೇಂದ್ರಗಳ ಸಮಯವನ್ನು ವಿಸ್ತರಣೆ ಮಾಡಿರುವುದರಿಂದ ಮಕ್ಕಳಿಗೆ ಸಮತೋಲನ ಪೌಷ್ಟಿಕ ಆಹಾರ ದೊರೆಯದಾಗಿದೆ. ಅಂಗನವಾಡಿ ಕೇಂದ್ರಗಳ ಮೂಲಕ ನೀಡುತ್ತಿರುವುದು ಕೇವಲ ಪೂರಕ ಪೌಷ್ಟಿಕ ಆಹಾರವೇ ಹೊರತು, ಸಮಗ್ರ ಪೌಷ್ಟಿಕ ಆಹಾರವಲ್ಲ. ಇದರಿಂದಾಗಿ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಕುಂದುಂಟಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯಲು ನೀರು, ಮಕ್ಕಳನ್ನು ಮಲಗಿಸಲು ಹಾಸುವ ಹೊದೆಯುವ ವ್ಯವಸ್ಥೆ, ಶೌಚಾಲಯ ಇಲ್ಲವಾಗಿದೆ. ಮಧ್ಯಾಹ್ನದ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿಗೆ ತೆರಳುವುದರಿಂದ ಕೇವಲ ಸಹಾಯಕಿ ಅಂಗನವಾಡಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದವರು ವಿವರಿಸಿದ್ದಾರೆ.
ಸರ್ಕಾರ ಸಮಯ ವಿಸ್ತರಣೆ ಮಾಡಿದ ಬಳಿಕ 3ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುವ ಮಾಹಿತಿ ಕೆಲ ಅಧ್ಯಯನಗಳಿಂದ ತಿಳಿದು ಬಂದಿದ್ದೆ. ಇಲಾಖೆ ಯಾವುದೇ ಅಧ್ಯಯನ ನಡೆಸದೆ ಅವೈಜ್ಞಾನಿಕವಾಗಿ ಅಂಗನವಾಡಿ ಕೇಂದ್ರಗಳ ಅವಧಿ ವಿಸ್ತರಣೆ ಮಾಡಿರುವ ಸಂಗತಿಯನ್ನು ವಿಧಾನ ಸೌಧ ಚಲೋ ಕಾರ್ಯಕ್ರಮದ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.