ಬೆಂಗಳೂರು ಗ್ರಾಮಾಂತರ

ಗುರು ಸಿದ್ದಾರೂಢಸ್ವಾಮಿಗಳ ಅಮೃತ ಶಿಲಾ ಪ್ರತಿಷ್ಠಾಪನೆ

Published On :

ಮಾಗಡಿ: ಶ್ರೀಸಿದ್ದಾರೂಢಸ್ವಾಮಿ ಸೇವಾ ಭಕ್ತ ಮಂಡಲಿ ಟ್ರಸ್ಟ್ ವತಿಯಿಂದ  ಶ್ರೀ ಗುರು ಸಿದ್ದಾರೂಢಸ್ವಾಮಿಗಳ ಅಮೃತ ಶಿಲಾ ಪ್ರತಿಷ್ಠಾಪನೆ ಮತ್ತು ಶ್ರೀರಾಮ ಧ್ಯಾನಮಂದಿರ ಹಾಗೂ ಶ್ರೀ ಗುರು ಸಿದ್ಧಾರೂಢ ಸ್ಮರಣೆ ಸಂಚಿಕೆ ಬಿಡುಗಡೆ ಸಮಾರಂಭ ನ.14 ಮತ್ತು 15 ರಂದು ಎರಡು ದಿನಗಳ ಕಾಲ ಇಲ್ಲಿನ ಕಲ್ಯಗೇಟ್ ಸಿದ್ದರೂಢಾಶ್ರಮದಲ್ಲಿ ನಡೆಯಿತು. ಹರಿಹರ ಕಂಡೇರಾಯನಹಳ್ಳಿ ನಾಗರಾಜಾನಂದಸ್ವಾಮಿಜೀ ನೇತೃತ್ವದಲ್ಲಿ ನಡೆಯಲಿದ್ದು, ಬೆಳಗಾವಿ ಜಿಲ್ಲೆ ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಮಹಾಸ್ವಾಮಿ, ಬೀದರ್ ಸಿದ್ಧಾರೂಢ ಚಿದಂಬರಾಶ್ರಮ ಡಾ.ಶಿವಕುಮಾರಮಹಾಸ್ವಾಮೀಜಿ  ಸಾನಿಧ್ಯ ವಹಿಸಲಿದ್ದಾರೆ.

ಇಂದು ಕನಕ ಜಯಂತಿ ಪೂರ್ವಭಾವಿ ಸಭೆ
ರಾಮನಗರ: ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನ.12ರ ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಬಕೆಟ್‌ಗೆ ಬಿದ್ದು ಮಗು ಸಾವು
ಬೆಂಗಳೂರು: ನೀರು ತುಂಬಿದ ದೊಡ್ಡ ಬಕೆಟ್‌ನೊಳಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ರಾಜಗೋಪಾಲನಗರದಲ್ಲಿ ಸೋಮವಾರ ಸಂಭವಿಸಿದೆ. ರಾಜಗೋಪಾಲನಗರ ನಿವಾಸಿ ಬಿಎಂಟಿಸಿ ಚಾಲಕ ಸೋಮಶೇಖರ್ ಪುತ್ರಿ ಪ್ರಕೃತಿ ಮೃತಪಟ್ಟ ಮಗು. ಸೋಮಶೇಖರ್ ಹಾಗೂ ಜಯಮ್ಮ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ರಾಜಗೋಪಾಲನಗರದಲ್ಲಿ ನೆಲೆಸಿದ್ದರು. ಸೋಮವಾರ ಸೋಮಶೇಖರ್ ಕರ್ತವ್ಯದ ಮೇಲೆ ಹೊರಹೋಗಿದ್ದು, ಮನೆಯಲ್ಲೇ ಜಯಮ್ಮ ಮತ್ತು ಪ್ರಕೃತಿ ಇದ್ದರು. ಜಯಮ್ಮ ಮನೆಗೆಲಸದಲ್ಲಿ ನಿರತರಾಗಿದ್ದಾಗ ಆಟವಾಡುತ್ತಿದ್ದ ಮಗು ಹಾಗೆ ಬಚ್ಚಲಮನೆಗೆ ಹೋಗಿದೆ. ಕೆಲಕಾಲದ ಬಳಿಕ ಮಗು ಸುತ್ತ ಎಲ್ಲೂ ಕಾಣಿಸದ್ದನ್ನು ಕಂಡು ಗಾಬರಿಯಾದ ಜಯಮ್ಮ ಬಚ್ಚಲಮನೆಗೆ ಧಾವಿಸಿದಾಗ ಮಗು ಬಕೆಟ್‌ನಲ್ಲಿ ತಲೆಕೆಳಗಾಗಿ ಬಿದ್ದಿತ್ತು. ಅಸ್ವಸ್ಥಗೊಂಡ ಮಗುವನ್ನು ಮನೆ ಮಾಲೀಕ ಶ್ರೀನಿವಾಸ ಹಾಗೂ ಅವರ ಪುತ್ರನ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.

ವಾರಸುದಾರನಿಗೆ ವಸ್ತು ತಲುಪಿಸಿದ ಆಟೋ ಚಾಲಕ
ಬೆಂಗಳೂರು: ಆಟೋದಲ್ಲೇ ಉಳಿದು ಹೋಗಿದ್ದ ಪ್ರಯಾಣಿಕರೊಬ್ಬರ ಲ್ಯಾಪ್‌ಟಾಪ್, ಐ-ಪ್ಯಾಡ್ ಹಾಗೂ ಹಣವನ್ನು ತುಮಕೂರು ಮೂಲದ ಆಟೋ ಚಾಲಕ ಜಿ.ಆರ್.ರಮೇಶ್  ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಡಾನಿಸ್ ಹುಸೇನ್ ಎಂಬುವರಿಗೆ ಸೇರಿದ ಈ ವಸ್ತುಗಳನ್ನು ಜಯನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಪಿ.ಲೋಕೇಶ್   ಆಟೋ ಚಾಲಕರ ಸಮಕ್ಷಮ ವಾರಸುದಾರರಿಗೆ  ಒಪ್ಪಿಸಿದ್ದಾರೆ. ಜಯನಗರ 9ನೇಬ್ಲಾಕ್ ನಿವಾಸಿ ಡಾನಿಸ್ ಹುಸೇನ್ ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದು, ಶನಿವಾರ ಮೈಸೂರಿಗೆ ಹೋಗಲು ಮನೆ ಬಳಿ ಆಟೋ ಹತ್ತಿದ್ದರು. ಸೌತ್‌ಎಂಡ್ ವೃತ್ತ ಹತ್ತಿರ ರಸ್ತೆಯ ಬದಿಯಲ್ಲಿ ಬೀಡಾಡಿ ಯುವಕನೊಬ್ಬ ಜತೆಗಿದ್ದ ಬಾಲಕನಿಗೆ ಬೇಕಾಬಿಟ್ಟಿ ಹೊಡೆಯುತ್ತಿದ್ದುದನ್ನು ನೋಡಿ ಅದನ್ನು ತಪ್ಪಿಸಲು ಇಳಿದಿದ್ದರು.  

ರಸ್ತೆಗೆ ಹಾಕಿರುವ ಡಾಂಬರ್ ಕಾಮಗಾರಿ ಸಂಪೂರ್ಣ ಕಳಪೆ: ಆರೋಪ
ನೆಲಮಂಗಲ : ತಾಲೂಕಿನ ಶಿವಗಂಗೆಯ ಕಲ್ಯಾಣಿ ಸಮೀಪದಿಂದ ಶಾರದ ವೃತ್ತದವರೆಗೆ  ರಸ್ತೆಗೆ ಹಾಕಿರುವ   ಡಾಂಬರ್ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದರಿಂದ  ಕೆಲವೇ ತಿಂಗಳಲ್ಲಿಯೇ  ರಸ್ತೆ  ಹಾಳಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಶಿವಗಂಗೆ ಬೆಟ್ಟದ ಸಮೀಪವಿರುವ ಕಲ್ಯಾಣಿ ಬಳಿ ಸಿಮೆಂಟ್  ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದಾರೆ. ಇದು  ಸಂಪೂರ್ಣ ಹಾಳಾಗಿದ್ದು ರಸ್ತೆ ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣದ ಸರಳುಗಳು ಕಾಣಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಕಾರು ಹಾಗೂ ಪಾದಚಾರಿಗಳಿಗೆ ತೊಡಕಾಗಿವೆ ಎಂದು ಪ್ರವಾಸಿಗಳು ದೂರುತ್ತಿದ್ದಾರೆ.

ಡಾ.ವಿಶ್ವನಾಥ್ ಅಧಿಕಾರ ಸ್ವೀಕಾರ
ರಾಮನಗರ: ಡಾ.ಡಿ.ಎಸ್.ವಿಶ್ವನಾಥ್ ಅವರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.  ರಾಮನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶ್ರೀರಾಮರೆಡ್ಡಿ ಅವರನ್ನು ಹಣಕಾಸು ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರವು  ಆದೇಶಿಸಿದೆ.  

ಇಂದು ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನ.12ರ ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

ಅರ್ಜಿ ಆಹ್ವಾನ
ರಾಮನಗರ: ಜಿಲ್ಲೆಯಲ್ಲಿ ಹೊಸದಾಗಿ ರಾಷ್ಟ್ರೀಯ ಪ್ಲೋರೋಸಿಸ್ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮ ರೂಪುಗೊಂಡಿದ್ದು, ಈ ಕಾರ್ಯಕ್ರಮಕ್ಕೆ ಮೂರು ಪ್ಲೋರೋಸಿಸ್ ಕ್ಷೇತ್ರ ಸಮೀಕ್ಷಕರನ್ನು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಜಿಲ್ಲೆಯಲ್ಲಿನ ನಿವೃತ್ತ ಆರೋಗ್ಯ ಸಹಾಯಕರು, ನಿವೃತ್ತ ಶುಶ್ರೂಷಕರು, ಬಿಎಚ್‌ಇ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ನಿವೃತ್ತ ಆಶಾ ಕಾರ್ಯಕರ್ತೆಯರು, ತತ್ಸಮಾನ ವಿದ್ಯಾರ್ಹತೆ (ಎಎನ್‌ಎಂ, ಜಿಎನ್‌ಎಂ ತರಬೇತಿ ಮುಗಿಸಿರುವ ಹಾಗೂ ಸರ್ಕಾರಿ ಕೆಲಸದಲ್ಲಿ ಆಯ್ಕೆಯಾಗದವರು) ಈ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ಮಾಹೆಯಾನ ರು.10 ಸಾವಿರ ಗೌರವ ಧನ ನೀಡಲಾಗುವುದು. ಅರ್ಜಿಯನ್ನು ರಾಯರದೊಡ್ಡಿ ವೃತ್ತದಲ್ಲಿರುವ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಕಚೇರಿಗೆ ನ.18ರೊಳಗೆ  ಸಲ್ಲಿಸಬಹುದು. ನ.26ಕ್ಕೆ ಸಂದರ್ಶನ ನಡೆಸಲಾಗುವುದು ಎಂದು ಎನ್‌ಆರ್‌ಎಚ್‌ಎಂನ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ: ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳ ಮಾರಾಟದ ಮಳಿಗೆ ತೆರೆಯಲು ಅಂಗವಿಕಲ ಅಥವಾ ವಿಧವಾ ಫಾರ್ಮಸಿಸ್ಟ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ರಾಯರದೊಡ್ಡಿ ವೃತ್ತದ ಬಳಿ ಇರುವ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೆಎಚ್‌ಎಸ್‌ಡಿಆರ್‌ಪಿ, ಯೋಜನಾ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಸುಲಿಗೆಕೋರರ ಸೆರೆ
ಬೆಂಗಳೂರು: ಇಬ್ಬರು ಸುಲಿಗೆಕೋರರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು ಅವರಿಂದ ಒಟ್ಟು ರು. 2 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗರಬಾವಿ ಮಾರುತಿನಗರ ನಿವಾಸಿ ಮನೋಹರ್ ಹಾಗೂ ಕಲ್ಯಾಣನಗರ ನಿವಾಸಿ ಮೋಹನ್ ಪೂಜಾರಿ ಬಂಧಿತರು. ಬಂಧಿತರಿಂದ 90 ಗ್ರಾಂ ತೂಕದ ಚಿನ್ನಾಭರಣ, 2 ದ್ವಿಚಕ್ರ ವಾಹನ, ರು. 5 ಸಾವಿರ ನಗದು ಸೇರಿದಂತೆ ಒಟ್ಟು 2 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಜ್ಞಾನಭಾರತಿ, ವಿವೇಕನಗರ, ಉಪ್ಪಾರಪೇಟೆ ಮತ್ತು ಕಲಾಸಿಪಾಳ್ಯ ಠಾಣೆಗಳಲ್ಲಿ ಸರ ಅಪಹರಣ, ಸುಲಿಗೆ ಹಾಗೂ ಕಳವು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ಸಿದ್ಧತಾ ಸಭೆ
ಮಾಗಡಿ: ರಂದು ಭಕ್ತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಸಮಾರಂಭವನ್ನು ಆಚರಿಸಲು ನ.12 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ  ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿದೆ ಎಂದು ತಹಸೀಲ್ದಾರ್ ಶಿವಕುಮಾರ್ ತಿಳಿಸಿದ್ದಾರೆ.

ಕನ್ನಡ ಪುಸ್ತಕ ಓದಿ: ಬಹುಮಾನ ಗೆಲ್ಲಿ
ದೊಡ್ಡಬಳ್ಳಾಪುರ: ವಿಕಾಸ (ಮಕ್ಕಳನ್ನು ಶ್ರೇಷ್ಠ ಶಿಕ್ಷಣಕ್ಕೆ ಸಜ್ಜುಗೊಳಿಸುವ ಪ್ರಶಿಕ್ಷಣ ಕೇಂದ್ರ) ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವಕ್ಕೊಂದು ಕನ್ನಡ ಪುಸ್ತಕ ಓದಿ-ಬಹುಮಾನ ಗೆಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಡಾ.ಎ.ಓ.ಆವಲಮೂರ್ತಿ ಅವರ ಯಶಸ್ಸಿನ ಹಾದಿ ಪುಸ್ತಕವನ್ನು ಓದಿ ಅದರ ಕುರಿತಾಗಿ ನ.24ರಂದು ಎಂಎಬಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುವ 1 ಗಂಟೆ ಅವಧಿಯ ಲಿಖಿತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದಾಗಿದೆ.
ಪೋಷಕರಿಗೆ ಸ್ಪರ್ಧೆ: ವಿದ್ಯಾರ್ಥಿಗಳ ಪೋಷಕರು ಮತ್ತು ಆಸಕ್ತರಿಗೂ ಕೂಡ ಇದೇ ಸ್ಪರ್ಧೆ ಏರ್ಪಡಿಸಲಾಗಿದ್ದು, ಪುಸ್ತಕವನ್ನು ಮನೆಯಲ್ಲೇ ಓದಿ ಅದರ ಕುರಿತಾದ ವಿಮರ್ಶಾ ಲೇಖನವನ್ನು ಬರೆದು ತಲುಪಿಸಬೇಕಾಗಿರುತ್ತದೆ. ಆಸಕ್ತರು ತಮ್ಮ ಬರೆಹಗಳನ್ನು ಕನ್ನಡ ಜಾಗೃತ ಪರಿಷತ್ತಿನ ಕಚೇರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ನ.24ರ ಒಳಗೆ ತಲುಪಿಸಬಹುದಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು-ಶಿಕ್ಷಕರಿಗೆ ಪ್ರತ್ಯೇಕ ಬಹುಮಾನಗಳಿರುತ್ತವೆ. ವಿವರಗಳಿಗೆ 9481806109 ಅಥವಾ 9886223228 ಸಂಪರ್ಕಿಸಬಹುದು.

ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರಕ್ಕೆ ದಾಖಲಾತಿ
ದೊಡ್ಡಬಳ್ಳಾಪುರ: ವಿಕಾಸ ಪ್ರಶಿಕ್ಷಣ ಕೇಂದ್ರ, ಕನ್ನಡ ಜಾಗೃತ ಪರಿಷತ್ತು, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಮತ್ತು ಬೋಧಿವೃಕ್ಷ ಎಜುಕೇಶನಲ್ ಟ್ರಸ್ಟ್ ಸಹಯೋಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೆಎಎಸ್-ಐಎಎಸ್ ಅಧ್ಯಯನ ಕೇಂದ್ರಕ್ಕೆ ದಾಖಲಾತಿಗಳು ಆರಂಭವಾಗಿವೆ.
ಯಾವುದೇ ಪದವಿ ಓದುತ್ತಿರುವ, ಈಗಾಗಲೇ ಪದವಿ ಅಧ್ಯಯನ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಲು ಆಸಕ್ತರಾಗಿರುವ ಎಲ್ಲರೂ ಅಧ್ಯಯನ ಕೇಂದ್ರಕ್ಕೆ ದಾಖಲಾತಿ ಪಡೆಯಬಹುದು. ದಾಖಲಾತಿ ಮತ್ತು ಹೆಚ್ಚಿನ ಮಾಹಿತಿಗೆ ಕನ್ನಡ ಜಾಗೃತ ಭವನ (ಹೊಸ ಬಸ್‌ನಿಲ್ದಾಣ ಬಳಿ)ದಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಭೇಟಿ ಮಾಡಬಹುದು. ವಿವರಗಳಿಗೆ 9481806109 ಸಂಪರ್ಕಿಸಬಹುದು.

ಚಿಕ್ಕಬಂಗ್ಯಪ್ಪ ಕೊಲೆಯಲ್ಲ, ಆತ್ಮಹತ್ಯೆ
ದೊಡ್ಡಬಳ್ಳಾಪುರ: ತಾಲೂಕಿನ ಗೂಳ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ ಚಿಕ್ಕಬಂಗ್ಯಪ್ಪ ಕೊಲೆಯಾಗಿಲ್ಲ. ಬದಲಿಗೆ ಅದು ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆ ವರದಿ ತಿಳಿಸಿದೆ. ಅನುಮಾನಾಸ್ಪದ ರೀತಿಯಲ್ಲಿ ಗ್ರಾಮದ ಗದ್ದೆಯೊಂದರಲ್ಲಿ ತೆಂಗಿನಮರಕ್ಕೆ ಹಗ್ಗದಿಂದ ಬಿಗಿಯಲಾಗಿದ್ದ ಸ್ಥಿತಿಯಲ್ಲಿ ಚಿಕ್ಕಬಂಗ್ಯಪ್ಪನ ಮೃತದೇಹ ದೊರೆತಿತ್ತು. ಇದು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಜೊತೆಗೆ ಕುಡಿತದ ಅಮಲಿನಲ್ಲಿ ತಂದೆ-ಮಕ್ಕಳ ಮಧ್ಯೆ ನಡೆದಿತ್ತು ಎನ್ನಲಾದ ಘರ್ಷಣೆ ಕೂಡ ಗ್ರಾಮಸ್ಥರಲ್ಲಿ ಕೊಲೆ ಶಂಕೆಗೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.