ಬಹುಮತವಿದ್ದರೂ ತವರಿನಲ್ಲಿ ಅಧಿಕಾರಕ್ಕೆ ಜೆಡಿಎಸ್ ಸಾಹಸ
-ಮತ್ತೀಕೆರೆ ಜಯರಾಮ್
ರಾಮನಗರ: ಇಲ್ಲಿನ ತಾ.ಪಂ. ಅಧ್ಯಕ್ಷ ಸ್ಥಾನಕ್ಕೆ ನಾಳೆ (ನ.12) ಚುನಾವಣೆ ನಡೆಯಲಿದೆ. ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಲು ಜೆಡಿಎಸ್ ಹರ ಸಾಹಸ ನಡೆಸುತ್ತಿದೆ. ಜೆಡಿಎಸ್ ಸದಸ್ಯರ ಒಡಕಿನ ಲಾಭ ಪಡೆದು, ಅಧಿಕಾರ ವಶಕ್ಕೆ ಕಾಂಗ್ರೆಸ್ ತಂತ್ರ ರೂಪಿಸಿದೆ.
ಕಳೆದ ತಿಂಗಳು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಭಿನ್ನಮತ ಸ್ಫೋಟಗೊಂಡಿತು. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಬಂಡಾಯ ಅಭ್ಯರ್ಥಿ ಶಂಕರಪ್ಪ ಚುನಾಯಿತರಾದರು. ಇದರೊಂದಿಗೆ ತಮ್ಮದೇ ಭದ್ರಕೋಟೆಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲಾಗದೆ ಕುಮಾರಸ್ವಾಮಿ ಮುಖಭಂಗ ಅನುಭವಿಸಿದ್ದರು.
16 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 9 ಮತ್ತು ಕಾಂಗ್ರೆಸ್ 7 ಸದಸ್ಯರನ್ನು ಹೊಂದಿದೆ. ಸದ್ಯದ ಮಟ್ಟಿಗೆ ಜೆಡಿಎಸ್ ಪಕ್ಷದಲ್ಲಿ 6 ಸದಸ್ಯರು ಮಾತ್ರವೇ ಪಕ್ಷ ನಿಷ್ಠರಾಗಿದ್ದು, ಉಪಾಧ್ಯಕ್ಷ ಶಂಕರಪ್ಪ ಸಹಿತ ಮೂವರು ಬಂಡಾಯ ಸಾರಿದ್ದಾರೆ. ಈ ಮೂವರ ನಡೆ ಈಗ ನಿಗೂಢವಾಗಿದೆ.
ಸುಜಾತ ಜೆಡಿಎಸ್ ಅಭ್ಯರ್ಥಿ: ಜೆಡಿಎಸ್ ನಾಯಕರು ರೂಪಿಸಿರುವ ಅಧಿಕಾರ ಹಂಚಿಕೆ ಸೂತ್ರದಂತೆ ಭಾನುಮತಿ ಚಿಕ್ಕಬೋರೇಗೌಡ ರಾಜಿನಾಮೆ ನೀಡಿದ್ದಾರೆ. ಮುಂದಿನ ಅವಧಿಯು ಸುಜಾತ ಶಿವಲಿಂಗಪ್ಪ ಪಾಲಿಗೆ ಸಿಗಬೇಕಿದೆ. ಹೀಗಾಗಿ ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಷಯವಾಗಿ ಗೊಂದಲದ ಮಾತೇ ಇಲ್ಲ.
ಜೆಡಿಎಸ್ನಲ್ಲಿ ಭುಗಿಲೆದ್ದಿರುವ ಭಿನ್ನಮತದ ಲಾಭ ಪಡೆದು, ಅಧಿಕಾರ ಕಸಿದುಕೊಳ್ಳುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದಿಂದ ಲಕ್ಷ್ಮೀ ಮಂಜುನಾಥ್ ಅಥವಾ ಶೋಭಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ. ಲಕ್ಷ್ಮೀ ಅವರು ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಪತ್ನಿ.
ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದರೂ ಜೆಡಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿರುವ ಶೀಲಮ್ಮ ಅವರಿಗೆ ವಿಪ್ ನೀಡಲು ಕಾಂಗ್ರೆಸ್ ನಾಯಕರು ಉದ್ದೇಶಿಸಿದ್ದಾರೆ. ವಿಪ್ ಉಲ್ಲಂಘಿಸಿದರೆ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಭೀತಿಯಿಂದ ಶೀಲಮ್ಮ ಗೊಂದಲಕ್ಕೆ ಸಿಲುಕಿದ್ದಾರೆ.
ಬಂಡುಕೋರರೇ ನಿರ್ಣಾಯಕ: ಮೂಲಗಳ ಪ್ರಕಾರ ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಜೆಡಿಎಸ್ ಬಂಡುಕೋರರು ಮತ್ತು ಕಾಂಗ್ರೆಸ್ ನಡುವೆ ಕೊಡು-ಕೊಳ್ಳುವ ಒಪ್ಪಂದವೇರ್ಪಟ್ಟಿದೆ. ಶಂಕರಪ್ಪ ಮತ್ತು ಬಣದ ಇಬ್ಬರು ಸದಸ್ಯರು ಕೊಟ್ಟ ಮಾತಿನಂತೆ ಈಗ ಕಾಂಗ್ರೆಸ್ ಬೆಂಬಲಿಸಿದರೆ ರಾಮನಗರ ತಾ.ಪಂ. ಕೈ ವಶ ಆಗುವುದು ನಿಶ್ಚಿತ.
ಪಕ್ಷದ ಆದೇಶ ಧಿಕ್ಕರಿಸಿದ ಬಳಿಕವೂ ಉಪಾಧ್ಯಕ್ಷ ಶಂಕರಪ್ಪ ಅವರು ದೇವೇಗೌಡ ಮತ್ತು ಕುಮಾರಸ್ವಾಮಿಯೇ ತಮ್ಮ ನಾಯಕರೆಂದು ಹೇಳಿಕೊಂಡಿದ್ದಾರೆ. ಹಾಗೊಮ್ಮೆ ಮೂವರು ಬಂಡಾಯ ಸದಸ್ಯರು ಪಕ್ಷನಿಷ್ಠೆ ಪ್ರದರ್ಶಿಸಿದರೆ ತಾ.ಪಂ. ಅಧಿಕಾರ ಜೆಡಿಎಸ್ ತೆಕ್ಕೆಯಲ್ಲೇ ಉಳಿಯಲಿದೆ.
ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಸೋಲನುಭವಿಸಿರುವ ಶಿವಪ್ರಸಾದ್ ಅವರು ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೊಂದಲ ಮೂಡಿಸುವ ಗೋಜಿಗೆ ಹೋಗಲಾರೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರಿಂದ ಪಕ್ಷಕ್ಕೆ ಯಾವುದೇ ಬಾಧಕವಿಲ್ಲ.
ಎಚ್ಡಿಕೆಗೆ ಪ್ರತಿಷ್ಠೆ ಪ್ರಶ್ನೆ: ವರ್ಷದ ಹಿಂದಷ್ಟೇ ರಾಮನಗರ ಜಿ.ಪಂ.ನಲ್ಲಿ ನಡೆದ ರಾಜಕೀಯ ಹೈಡ್ರಾಮಾದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮದೇ ಕ್ಷೇತ್ರದಲ್ಲಿ ಅಪಮಾನ ಅನುಭವಿಸಿದ್ದರು. ಈಚೆಗೆ ತಾ.ಪಂ. ಉಪಾಧ್ಯಕ್ಷ ಸ್ಥಾನದ ರಾಜಕೀಯ ಮೇಲಾಟವೂ ಅವರಿಗೆ ಬೇಸರ ಉಂಟು ಮಾಡಿತ್ತು.
ಹೀಗಾಗಿ ಮಂಗಳವಾರ ನಡೆಯುವ ತಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಕುಮಾರಸ್ವಾಮಿ ಅವರು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಕೆ.ರಾಜು ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

