ಶ್ರೀರಾಮರೆಡ್ಡಿ ಎತ್ತಂಗಡಿ; ಭೂ ಮಾಫಿಯಾ ಕೈವಾಡ?
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ನ. 11
ಈ ಜಿಲ್ಲೆಗೆ 7 ವರ್ಷ ತುಂಬುವಷ್ಟರಲ್ಲಿ ಜಿಲ್ಲಾಧಿಕಾರಿ ಹುದ್ದೆಯಲ್ಲಿ 14ನೇ ಬಾರಿ ಬದಲಾವಣೆ ಕಾಣಲಾಗಿದೆ. ಇದೀಗ ನಡೆದಿರುವ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಎತ್ತಂಗಡಿ ಹಿಂದೆ ಗಣಿ ಮತ್ತು ಭೂ ಮಾಫಿಯಾ ಕೈವಾಡದ ಶಂಕೆ ದಟ್ಟವಾಗಿದೆ.
ಜಲ್ಲಿ ಕ್ರಷರ್ ಹಾವಳಿ, ಮರಳು ದಂಧೆ, ಭೂ ಕಬಳಿಕೆ ಸಹಿತ ನಾನಾ ಅಕ್ರಮಗಳು ಈ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿವೆ. ಈ ವಿರುದ್ಧ ತುಂಬಾ ತಡವಾಗಿಯಾದರೂ ಸಮರ ಸಾರಿದ್ದೇ ಶ್ರೀರಾಮರೆಡ್ಡಿ ಕುರ್ಚಿಗೆ ಸಂಚಕಾರ ತಂದೊಡ್ಡಿಕೊಂಡಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸಾಕಷ್ಟು ಅಕ್ರಮಗಳಲ್ಲಿ ರಾಜಕಾರಣಿಗಳು ಇಲ್ಲವೇ ಅವರ ಹಿಂಬಾಲಕರು ನೇರ ಪಾಲುದಾರರಾಗಿದ್ದಾರೆ. ಅಕ್ರಮ ದಂಧೆಗಳ ವಿರುದ್ಧದ ಕಾರ್ಯಾಚರಣೆ ಪ್ರಾರಂಭವಾಗಿದ್ದೇ ತಡ ಪ್ರಭಾವಿಗಳು ಜಿಲ್ಲಾಧಿಕಾರಿಯನ್ನು ವರ್ಗಗೊಳಿಸಿ, ತಮ್ಮ ಚಟುವಟಿಕೆಗಳಿಗೆ ರಹದಾರಿ ಮಾಡಿಕೊಂಡಿದ್ದಾರೆ.
ಬಿಡದಿ ಪ್ರಕರಣ ಹಿನ್ನೆಲೆ: ಬಿಡದಿ ಸುತ್ತಮುತ್ತಲ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಎಕರೆ ಗೋಮಾಳ ಪ್ರದೇಶವಿದೆ. ಕೆಎಐಡಿಬಿ ಅಧಿಕಾರಿಗಳ ಕೋಟ್ಯಂತರ ರು. ಬೆಲೆ ಬಾಳುವ ಗೋಮಾಳ ಜಮೀನನ್ನು ಹತ್ತಾರು ಖಾಸಗಿ ಕಾರ್ಖಾನೆಗಳಿಗೆ ಅಕ್ರಮವಾಗಿ ಸ್ವಾಧೀನಪಡಿಸಿಕೊಟ್ಟಿದ್ದಾರೆ.
ನೂರಾರು ಎಕರೆ ಕಬಳಿಕೆಯಾಗಿದದರೂ ಜಿಲ್ಲಾಡಳಿತವು ಮೊದಲ ಹಂತದಲ್ಲಿ 10 ಎಕರೆ ಗೋಮಾಳಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಇದನ್ನು ತಡೆಯಲು ಕೆಲ ಪ್ರಭಾವಿ ರಾಜಕಾರಣಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರಾದರೂ ಪ್ರಯೋಜನವಾಗಲಿಲ್ಲ.
ಜಿಲ್ಲಾಡಳಿತವು 2ನೇ ಹಂತದಲ್ಲಿ ಮತ್ತಷ್ಟು ಅಧಿಕಾರಿಗಳು ಮತ್ತು ಉದ್ಯಮಿಗಳ ವಿರುದ್ಧ ಪ್ರಕರಣ ದಾಖಲು ಮಾಡುವ ಚಿಂತನೆಯಲ್ಲಿತ್ತು. ಇದರ ವಾಸನೆ ಅರಿತ ಪ್ರಭಾವಿಗಳು ವರ್ಗಾವಣೆಗೆ ಸಾಕಷ್ಟು ಲಾಬಿ ನಡೆಸಿ, ಯಶಸ್ವಿಯಾಗಿದ್ದಾರೆ.
ಮರಳು, ಗಣಿ ಮಾಫಿಯಾ: ರಾಮನಗರ ಜಿಲ್ಲೆಯಲ್ಲಿ ಜಲ್ಲಿ ಕ್ರಷರ್ಗಳನ್ನು ಸೇಫ್ ಜೋನ್ಗೆ ಸ್ಥಳಾಂತರಗೊಳಿಸುವ ವಿಷಯದಲ್ಲಿ ಶ್ರೀರಾಮರೆಡ್ಡಿ ಮತ್ತು ಕ್ರಷರ್ ಮಾಲೀಕರ ನಡುವೆ ಕಳೆದ ಒಂದು ವರ್ಷದಿಂದಲೂ ಹಗ್ಗ ಜಗ್ಗಾಟ ನಡೆದುಕೊಂಡು ಬಂದಿತ್ತು. ಕ್ರಷರ್ಗಳನ್ನು ಸ್ಥಳಾಂತರಗೊಳಿಸುವ ವಿಷಯದಲ್ಲಿ ಜಿಲ್ಲಾಧಿಕಾರಿಯು ಹೇಳಿಕೆ ನೀಡುವುದರಲ್ಲೇ ಕಾಲ ಹರಣ ಮಾಡಿದ್ದರು.
ಇದೇ ರೀತಿ ಅಕ್ರಮ ಮರಳು ದಂಧೆ ಮತ್ತು ಫಿಲ್ಟರ್ ಮರಳು ಮಾಫಿಯಾ ವಿಷಯದಲ್ಲೂ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ದಂಧೆ ತಡೆ ನಿಟ್ಟಿನಲ್ಲಿ ನಾಲ್ಕಾರು ಸಭೆ ನಡೆಸಿ, ಕಾರ್ಯಾಚರಣೆಗೆ ಚುರುಕುಗೊಳಿಸಿದ್ದರ ಲಾಭವು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕಿಸೆ ತುಂಬಿಸಲು ದಾರಿ ಮಾಡಿಕೊಟ್ಟಿತ್ತು.
ಪ್ರಾಮಾಣಿಕತೆ ಅಲ್ಲಗಳೆಯುವಂತಿಲ್ಲ: ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಅವರಿಗೆ ಮರಳು ದಂಧೆ ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕಾಳಜಿ ಇತ್ತೆನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಅವರು ದಂಧೆಕೋರರಿಗೆ ಕುಣಿಕೆ ಬಿಗಿಗೊಳಿಸುತ್ತಿದ್ದಂತೆಲ್ಲಾ ಲಾಭ ಇನ್ಯಾರಿಗೋ ಆಗುತ್ತಿತ್ತು. ಇದು ಕೂಡ ದೊಡ್ಡ ವಿವಾದವಾಗಿ ಮಾರ್ಪಟ್ಟು, ಕೆಲ ಅಧಿಕಾರಸ್ಥ ರಾಜಕಾರಣಿಗಳ ಕಣ್ಣು ಕೆಂಪಾಗಿಸಿತ್ತು. ಇದು ಕೂಡ ಎತ್ತಂಗಡಿ ಹಿಂದೆ ಕೆಲಸ ಮಾಡಿರುವ ಸಾಧ್ಯತೆ ನಿಚ್ಚಳವಾಗಿದೆ.
ಅತ್ತ ದರಿ, ಇತ್ತ ಪುಲಿ: ರಾಜಕೀಯ ಜಂಗೀಕುಸ್ತಿಯ ಅಖಾಡವಾದ ರಾಮನಗರದಲ್ಲಿ ಅಧಿಕಾರಿಗಳ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆ ಬಳಿಕ ಶ್ರೀರಾಮರೆಡ್ಡಿ ಪಾಲಿಗೆ ಮಿತಿ ಮೀರಿದ ರಾಜಕೀಯ ಹಸ್ತಕ್ಷೇಪವೂ ಉಸಿರುಗಟ್ಟುವ ವಾತಾವರಣವನ್ನು ನಿರ್ಮಿಸಿತ್ತು.
ಪ್ರಾರಂಭದಲ್ಲಿ ಶ್ರೀರಾಮರೆಡ್ಡಿ ಎಲ್ಲ ಅಧಿಕಾರಸ್ಥರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಯಾವ ಹಂತದಲ್ಲೂ ರಾಜಕಾರಣಿಗಳನ್ನು ಎದುರುಹಾಕಿಕೊಳ್ಳುವ ಗೋಜಿಗೆ ಹೋದವರಲ್ಲ. ಆದರೆ, ಕಡೆಯ ಹಂತದಲ್ಲಿ ಒಂದೆಡೆ ಎಚ್.ಡಿ.ಕುಮಾರಸ್ವಾಮಿ, ಮತ್ತೊಂದೆಡೆ ಡಿಕೆ ಸಹೋದರರು ಎರಡೂ ಕಡೆಯ ಕೆಂಗಣ್ಣಿಗೆ ಗುರಿಯಾದರು. ಈಗ ಅವರನ್ನು ಉಳಿಸಿಕೊಳ್ಳಲು ಯಾರೂ ಪ್ರಯತ್ನಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

