ಅನಗತ್ಯ ಹೊರೆಯಿಂದ ಮುಕ್ತಿಗೊಳಿಸಿ
ಕ.ಪ್ರ.ವಾರ್ತೆ , ರಾಮನಗರ , ನ.13
ತಮ್ಮ ಮೇಲೆ ಅನಗತ್ಯವಾಗಿ ಹೊರಿಸಿರುವ ಹೊರೆಯಿಂದ ಮುಕ್ತಿಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಲ ಕಾಲ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಬಳಿಕ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿ, ತಮ್ಮನ್ನು ಅಂಗನವಾಡಿಯ ಕೆಲಸಕ್ಕಷ್ಟೇ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳುವದರ ಜತೆಗೆ ಮತದಾರರ ಪಟ್ಟಿ ಪರಿಷ್ಕರಣೆ, 6 ನೇ ಆರ್ಥಿಕ ಗಣತಿ ಮಾಡುವ ಹೊರೆಯನ್ನು ತಮ್ಮ ಮೇಲೆ ಹೇರಲಾಗಿದೆ. ಈ ಪರಿಣಾಮ ತಮ್ಮ ಕೆಲಸಕ್ಕೆ ಅಡ್ಡಿ ಮಾತ್ರವಲ್ಲದೆ ಮಾನಸಿಕ ಒತ್ತಡವೂ ಹೆಚ್ಚಿದೆ ಎಂದು ಅಳಲು ತೋಡಿಕೊಂಡರು.
ಪ್ರತಿಯೊಬ್ಬ ಕಾರ್ಯಕರ್ತೆಗೆ 3 ರಿಂದ 5 ಬ್ಲಾಕ್ ವ್ಯಾಪ್ತಿಯ ಆರ್ಥಿಕ ಗಣತಿ ನಡೆಸುವಂತೆ ಸೂಚಿಸಲಾಗಿದೆ. ಈ ಕೆಲಸವನ್ನು ಮಧ್ಯಾಹ್ನದ ಊಟದ ಸಮಯದ ನಂತರವೇ ಮಾಡಬೇಕೆಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ ಎಂದು ವಿವರಿಸಿದರು.
ಹಣ ಪಾವತಿ ಮಾಡಿಲ್ಲ: ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾತಿ ಗಣತಿ ಕಾರ್ಯ ಕೈಗೊಂಡಿದ್ದೆವು. ಈ ಕಾರ್ಯಕ್ಕೆ ಸೂಕ್ತ ಸಂಭಾವನೆ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಹಣ ಪಾವತಿ ಮಾಡಿಲ್ಲ. ಇದೀಗ ಆರ್ಥಿಕ ಗಣತಿಯ ಹೊರೆಯನ್ನೂ ನಮ್ಮ ಮೇಲೆ ಹೊರಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕರುಣೆ ಇರಲಿ: ತಮ್ಮ ಮೇಲೆ ಅಧಿಕಾರಿಗಳು ಅನಗತ್ಯ ಒತ್ತಡ ಹೇರುತ್ತಿದ್ದಾರೆ. ಎಷ್ಟೇ ಒತ್ತಡದ ನಡುವೆ ಕೆಲಸ ಮಾಡಿದರೂ ಸೂಕ್ತ ಸಂಭಾವನೆ ಸಿಕ್ಕಿಲ್ಲ. ಇತ್ತ ಕೆಲಸಕ್ಕೆ ತಕ್ಕಂತೆ ವೇತನ ಪರಿಷ್ಕರಣೆ ಆಗಿಲ್ಲ. ನಮ್ಮ ಮೇಲೆ ಕರುಣೆ ಇರಲಿ ಎಂದು ಅವರು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರ ನಿಯೋಗದಲ್ಲಿ ಮಂಜಮ್ಮ, ಮಾಲತಿ, ಶಿವಮ್ಮ, ಶಶಿಕಲಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

