ಬೆಂಗಳೂರು ಗ್ರಾಮಾಂತರ

'ಮಕ್ಕಳ ಕ್ರಿಯಾಶೀಲತೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ'

Published On :

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.14
ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸಿ ಪ್ರೋತ್ಸಾಹ ಕೊಡದಿದ್ದರೆ ಮಕ್ಕಳ ಸುಪ್ತ ಪ್ರತಿಭೆ
ಅನಾವರಣಗೊಳ್ಳುವುದಿಲ್ಲ. ಮಕ್ಕಳ ಆಲೋಚನೆಗಳಿಗೆ ಪೂರಕವಾಗಿ ಸ್ಪಂದಿಸುವ ಮತ್ತು ಉನ್ನತ ವ್ಯಕ್ತಿತ್ವಗಳಾಗಿ ಬೆಳೆಸುವ ಹೊಣೆಗಾರಿಕೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ಇಂದಿರಾನಗರ ರೋಟರಿ ಕ್ಲಬ್ ಅಧ್ಯಕ್ಷೆ ಅಂಬಿಕಾ ನಾರಾಯಣ್ ಹೇಳಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಸಾಂಸ್ಕೃತಿಕ ರಾಯಬಾರಿಗಳು. ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡು ಆದರ್ಶಗಳನ್ನು ಬಿತ್ತುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಿಘಂಟು ವಿತರಣೆ: ಇದೇ ಸಂದರ್ಭದಲ್ಲಿ ಬೆಂಗಳೂರಿನ ಮೆಂಡಾ ಫೌಂಡೇಶನ್ ವತಿಯಿಂದ ಶಾಲೆಯ  322 ಮಕ್ಕಳಿಗೂ ಕನ್ನಡ-ಇಂಗ್ಲಿಷ್ ನಿಘಂಟುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಫೌಂಡೇಷನ್ ಅಧ್ಯಕ್ಷ ಅರ್ಜುನ್ ಮೆಂಡಾ ನಿಘಂಟುಗಳನ್ನು ವಿತರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ತಮ್ಮ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ಆರ್ಥಿಕ ಸಹಾಯವನ್ನೂ ಮಾಡಲಾಗುವುದು ಎಂದರು.
ನೀರು ಶುದ್ಧೀಕರಣ ಯಂತ್ರ ನೀಡಿಕೆ: ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ಶಾಲೆಯ 1 ಸಾವಿರ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ನೀರು ಶುದ್ಧೀಕರಣ ಯಂತ್ರವನ್ನು ನೀಡಲಾಗಿದ್ದು, ಬ್ಯಾಂಕಿನ ಘಟಕ ವ್ಯವಸ್ಥಾಪಕಿ ಲಕ್ಷ್ಮೀಕಾಂತಮ್ಮ ಶುದ್ಧ ನೀರು ಯಂತ್ರ ಚಾಲನೆಗೊಳಿಸಿದರು. ಮುಂದಿನ ದಿನಗಳಲ್ಲಿ ಶಾಲೆಗೆ ಪೀಠೋಪಕರಣಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು.
ಕ್ಷೀರ ಭಾಗ್ಯ: ಸರ್ಕಾರದ ಕ್ಷೀರ ಭಾಘ್ಯ ಯೋಜನೆಯಡಿ ಶಾಲೆಯ ಎಲ್ಲ ಮಕ್ಕಳಿಗೂ ಹಾಲು ಪಾಯಸ ನೀಡಲಾಯಿತು. ಕ್ಷೀರಭಾಗ್ಯವನ್ನು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಗುರುದೇವ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಶಾಲೆಯ ಚಟುವಟಿಕೆಗಳು, ಪರಿಸರ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಹುಲಿಕಲ್ ನಟರಾಜ್, ರೋಟರಿ ಕ್ಲಬ್‌ನ ನಿರ್ದೇಶಕ ಮನೋಜ್ ಅಗರವಾಲ್, ಮೆಂಡಾ ಫೌಂಡೇಶನ್ ನಿರ್ದೇಶಕ ಯೋಗೇಂದ್ರ ಸಿಂಗ್, ಮಾಜಿ ಅಧ್ಯಕ್ಷ ಓ.ಪಿ.ಖನ್ನಾ, ಶುತ್ರು ಮೆಂಡ, ಗಾಯಕ ಎಚ್.ಎ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.