ಬೆಂಗಳೂರು ಗ್ರಾಮಾಂತರ

ಭಾರತ ಶಕ್ತಿಶಾಲಿ ರಾಷ್ಟ್ರವಾಗಲು ಮಕ್ಕಳನ್ನು ಸಜ್ಜುಗೊಳಿಸಿ

Published On :

ಕ.ಪ್ರ.ವಾರ್ತೆ ರಾಮನಗರ ನ.14
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಭವಿಷ್ಯದಲ್ಲಿ ಭಾರತವನ್ನು ಪ್ರಪಂಚದ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸಬೇಕಾದರೆ ಮಕ್ಕಳನ್ನು ಇಂದಿನಿಂದಲೇ ಅಣಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜು ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರು ವೈಷ್ಣವಿ ವಿಕಲಚೇತನರ ಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸುಶಿಕ್ಷಿತ ಹಾಗೂ ಆರೋಗ್ಯವಂತರನ್ನಾಗಿ ಮಾಡಬೇಕು ಎಂದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮಾಜದ ಪಾತ್ರ ಅತಿ ಮಹತ್ವದ್ದು. ಇಂದಿಗೂ ಗಂಡು-ಹೆಣ್ಣು ಎಂಬ ತಾರತಮ್ಯ ಭಾವನೆ ಇದೆ. ಗಂಡು ಮಗುವಿಗೆ ವಿಶೇಷ ಪ್ರಧಾನ್ಯತೆ ನೀಡಿ, ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸುವ ಕೀಳು ಭಾವನೆ ಬೆಳೆಸಿಕೊಂಡಿದ್ದಾರೆ. ಮಗು ಯಾವುದೇ ಆದರೂ ತಾರತಮ್ಯ ಮಾಡಬಾರದು ಎಂದರು.
ಸಫಲವಾಗಿಲ್ಲ: ದೇಶದ ಅಭಿವೃದ್ಧಿ ಶೈಕ್ಷಣಿಕ ತಳಹದಿಯ ಮೇಲೆ ನಿಂತಿದೆ. ಇದಕ್ಕಾಗಿ ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಉದ್ದೇಶ ಮಾತ್ರ ಸಫಲವಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.
ಪೋಷಕರು ತಮ್ಮ ಮಕ್ಕಳನ್ನು ಲಕ್ಷಾಂತರ ರುಪಾಯಿ ದೇಣಿಗೆ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರ ಯಾವುದೇ ಶುಲ್ಕ ವಿಧಿಸದೆ ಗುಣಮಟ್ಟದ ಶಿಕ್ಷಣ ನೀಡಿದರೂ ಈ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳು ದೊರೆಯುತ್ತಿಲ್ಲ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಕುಂಠಿತವಾಗಿದೆ. ಇದಕ್ಕಾಗಿ ಶಿಕ್ಷಕರು ಮತ್ತು ಪೋಷಕರು ಶ್ರಮಿಸಬೇಕು ಎಂದು ಮಕ್ಕಳ ರಕ್ಷಣಾ ಘಟಕದ ತಾಲೂಕು ಅಧಿಕಾರಿ ತಾಜುದ್ದೀನ್ ಖಾನ್ ತಿಳಿಸಿದರು.
ಮಾನಸಿಕ ತಜ್ಞ ಡಾ.ಸಿ.ಆರ್.ಚಂದ್ರಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ,  ಬೋರಲಿಂಗೇಗೌಡ, ಆಪ್ತ ಸಲಹಾ ಕೇಂದ್ರದ ಶ್ರೀನಿವಾಸಮೂರ್ತಿ, ಜನನಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ವೈ.ಎಸ್.ಸಂಪತ್, ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಡೇವಿಡ್ ಭಾಗವಹಿಸಿದ್ದರು.

2 ಸಾವಿರ ಗ್ರಾಪಂಗಳಲ್ಲಿ ಶಾಲಾ ಮೈದಾನ ಅಭಿವೃದ್ಧಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.14

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಹೊಸದಾಗಿ ಸೇರ್ಪಡೆಯಾಗಿರುವ 15 ಯೋಜನೆಗಳಲ್ಲಿ ಶಾಲಾ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿಯೂ ಸೇರಿದೆ. ಇದನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಿಂದ ಚಾಲನೆ ನೀಡಲಾಗುತ್ತಿದೆ ಎಂದು ನರೇಗಾ ಆಯುಕ್ತ, ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಹೇಳಿದರು.
ತಾಲೂಕಿನ ಕಸುವನಹಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಮತ್ತು ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಗುರುವಾರ ನಡೆದ ನರೇಗಾ ಯೋಜನೆಯಡಿ ಶಾಲಾ ಆಟದ ಮೈದಾನ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಂದೋಲನದ ರೀತಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಟದ ಮೈದಾನಗಳ ಅಭಿವೃದ್ಧಿಗೊಳಿಸುವ ಚಿಂತನೆ ಇದೆ. ಇದಕ್ಕಾಗಿ ಪ್ರಾಥಮಿಕವಾಗಿ ಸುಮಾರು 2 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ನರೇಗಾದಂತಹ ಕ್ರಾಂತಿಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಯೋಜನೆಯ ವ್ಯವಸ್ಥಿತ ಅನುಷ್‌ಠಾನದಲ್ಲಿ ಕೆಲ ಸಮಸ್ಯೆಗಳು ಇಂದಿಗೂ ಕಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಫಲಾನುಭವಿಗಳಿಗೆ ಮಾಹಿತಿ ಸರಿಯಾಗಿ ತಲುಪುತ್ತಿಲ್ಲ. ಯೋಜನೆಯಲ್ಲಿ ಕೈಗೊಳ್ಳಬಹುದಾದ ಕೆಲಸ-ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಕೆಲವರಿಗಿಲ್ಲ. ಯೋಜನೆಯಲ್ಲಿ ನೂರಾರು ಬಗೆಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದರು.
15 ಯೋಜನೆ ಸೇರ್ಪಡೆ: ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಹಲವು ಯೋಜನೆಗಳನ್ನು ನರೇಗಾದಡಿ ಘೋಷಿಸಿದ್ದಾರೆ. 15 ಹೊಸ ಕಾಮಗಾರಿಗಳನ್ನು ಈ ಯೋಜನೆಗೆ ಸೇರ್ಪಡೆ ಮಾಡಿದ್ದು, ಬಡವರು, ಪರಿಶಿಷ್ಟ ಜಾತಿ-ವರ್ಗ, ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳೆಯರು, ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳು, ಭೂಸುಧಾರಣೆ ಮಸೂದೆ ಅಧಿನಿಯಮ ಪ್ರಕಾರ ಭೂಮಿ ಪಡೆದವರು ತಮ್ಮ ಅಥವಾ ಖಾಸಗಿ ಭೂಮಿಯಲ್ಲಿ ಕೈಗೊಳ್ಳುವ ಹಲವು ಯೋಜನೆಗಳಿಗೆ ನರೇಗಾ ಮೂಲಕ ಅನುದಾನ ಪಡೆವ ಅವಕಾಶವಿದೆ. ಭೂಮಿ ಸಮತಟ್ಟು ಮಾಡುವ, ಸ್ವಚ್ಛಗೊಳಿಸುವ, ಕಣಗಳನ್ನು ನಿರ್ಮಿಸುವ, ಕೊಟ್ಟಿಗೆಗಳನ್ನು ಕಟ್ಟಿಕೊಳ್ಳುವ, ಸಾಮಾಜಿಕ ಅರಣ್ಯ-ಸಸಿ ಬೆಳೆಸುವ ಯೋಜನೆಗಳೂ ಸೇರಿದಂತೆ ಹಲವು ವೈಯಕ್ತಿಕ ಮತ್ತು ಸಾಮಾಜಿಕ ಅಭಿವೃದ್ಧಿ ವಿಚಾರಗಳಿಗೆ ಯೋಜನೆಯ ನೆರವು ಪಡೆಯಬಹುದು ಎಂದರು.
ಮಿತಿಯಿಲ್ಲದೆ ಹಣ ನೀಡಿಕೆ: ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಮಿತಿಯಿಲ್ಲದೆ ಹಣ ಕೊಡುವ ಅವಕಾಶ ಇದೆ. ಯೋಜನೆ ಮಾಹಿತಿ ಮತ್ತು ಅನುದಾನದ ಮನವಿ ಕೊಟ್ಟರೆ ಇಲಾಖೆ ಪರಿಶೀಲಿಸಿ ಹಣ ಬಿಡುಗಡೆ ಮಾಡುತ್ತದೆ. ವ್ಯಕ್ತಿಗತ ಮತ್ತು ಸಮುದಾಯದ ಎಲ್ಲ ಹೆಚ್ಚುವರಿ ಕೆಲಸಗಳಿಗೆ 1 ಕೋಟಿಯಷ್ಟು ಹಣ ಕೊಡಲು ಸಿದ್ಧ. ಸಮರ್ಪಕ ಬಳಕೆ ಬಹುಮುಖ್ಯ ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ಧ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ಉಪಾಧ್ಯಕ್ಷ ಎನ್.ಹನುಮಂತೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ರಮಾದೇವಿ, ಬಾಶೆಟ್ಟಿಹಳ್ಳಿ ಗ್ರಾ.ಪಂ ಅಧ್ಯಕ್ಷ ಎಚ್.ಎಂ.ಗೋವಿಂದಪ್ಪ, ತಾಲೂಕು ಪಂಚಾಯಿತಿ ಸದಸ್ಯ ಕೆ.ಮುನಿಯಪ್ಪ, ಶ್ಯಾಮಲ, ಗ್ರಾ.ಪಂ ಉಪಾಧ್ಯಕ್ಷೆ ಕೃಷ್ಣವೇಣಿ, ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ ಸಿಇಓ ಎನ್.ಕೃಷ್ಣಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಅಶ್ವತ್ಥರೆಡ್ಡಿ, ಪಿಡಿಓ ಸಿ.ಎಂ.ಮುನಿಕೃಷ್ಣಪ್ಪ, ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಟೌಟ್‌ಗಳಲ್ಲಿ ರಾರಾಜಿಸಿದ ನಾಯಕರು ಸಭೆಗೆ ಗೈರು
ದೊಡ್ಡಬಳ್ಳಾಪುರ:
ಆಹ್ವಾನ ಪತ್ರಿಕೆಯಲ್ಲಿ ಹೆಸರು, ಫ್ಲೆಕ್ಸ್‌ಗಳು ಮತ್ತು ದೊಡ್ಡ ಭಿತ್ತಿಪತ್ರಗಳಲ್ಲಿ ಭಾವಚಿತ್ರ ಸಹಿತ ರಾರಾಜಿಸುವ ನಾಯಕರು ಸಭೆಗೂ ಬಾರದೆ ಗೈರು ಹಾಜರಾಗುವುದು ಇತ್ತೀಚಿನ ಸಂಪ್ರದಾಯವಾಗಿಬಿಟ್ಟಿದೆ. ಪ್ರೋಟೋಕಾಲ್ (ಶಿಷ್ಟಾಚಾರ) ಹೆಸರಿನಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಾನ ಪಡೆಯುವ ನಾಯಕರು ಕಾರ್ಯಕ್ರಮಗಳತ್ತ ತಿರುಗಿ ನೋಡುವ ಪ್ರಯತ್ನವೂ ಮಾಡದೆ ಸುಮ್ಮನಾಗುವುದು ಎದ್ದು ಕಂಡು ಬಂತು. ಇಲ್ಲಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೇತೃತ್ವದಲ್ಲಿ ಗುರುವಾರ ರಾಜ್ಯಮಟ್ಟದ ಕಾರ್ಯಕ್ರಮವೊಂದು ಏರ್ಪಾಟಾಗಿತ್ತು. ನರೇಗಾ ವ್ಯಾಪ್ತಿಗೆ ಹೊಸದಾಗಿ ಸೇರಿಸಿರುವ ಶಾಲಾ ಮೈದಾನಗಳ ಅಭಿವೃದ್ಧಿ ಕಾಮಗಾರಿಗೆ ಇಲ್ಲಿಂದ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಕೇಂದ್ರದ ಮಂತ್ರಿ, ಸ್ಥಳೀಯ ಸಂಸದ ಎಂ.ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಮತ್ರಿ ಕೃಷ್ಣಬೈರೇಗೌಡ, ಯುವಜನಸೇವೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕ ಪಿಳ್ಳಮುನಿಶಾಮಪ್ಪ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಪುಟ್ಟಣ್ಣ, ಇ.ಕೃಷ್ಣಪ್ಪ ಭಾಗವಹಿಸುತ್ತಾರೆ ಎಂದು ಆಹ್ವಾನಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಫ್ಲೆಕ್ಸ್‌ಗಳಲ್ಲಿ ಕೂಡ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಹಾಕಿಕೊಂಡು ಪ್ರಚಾರ ಮಾಡಲಾಗಿತ್ತು. ಆದರೆ  ಟಿ.ವೆಂಕಟರಮಣಯ್ಯ ಬಿಟ್ಟರೆ ಯಾವೊಬ್ಬ ಸಚಿವರು, ಶಾಸಕರು, ಸಭೆಗೆ ಬರಲೇ ಇಲ್ಲ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.