ಆಕ್ಸ್ಫರ್ಡ್ ಪಬ್ಲಿಕ್ ಶಾಲೆಗೆ ನೋಟಿಸ್
ಚನ್ನಪಟ್ಟಣ: ಕಾನೂನು ಬಾಹಿರವಾಗಿ ಶಾಲೆ ಸ್ಥಳಾಂತರ ಮಾಡಿರುವ ಇಲ್ಲಿನ ಆಕ್ಸ್ಫರ್ಡ್ ಪಬ್ಲಿಕ್ ಶಾಲೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಿಗದಿತ ಸಮಯದೊಳಗೆ ಉತ್ತರ ನೀಡದಿದ್ದರೆ ಅನುಮತಿ ರದ್ದುಪಡಿಸುವುದಾಗಿ ಎಚ್ಚರಿಸಿದ್ದಾರೆ. ತಾಲೂಕಿನ ವಂದಾರಗುಪ್ಪೆ ಗ್ರಾಮದ ಬಳಿ ನಡೆಯುತ್ತಿದ್ದ ಆಕ್ಸ್ಫರ್ಡ್ ಶಾಲೆಯನ್ನು ದಸರಾ ರಜೆ ಮುಗಿಯುತ್ತಿದ್ದಂತೆ ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿರುವ ಡಿ.ಟಿ. ರಾಮು ಟ್ರಸ್ಟ್ಗೆ ಸೇರಿದ ಕಟ್ಟಡಕ್ಕೆ ವರ್ಗಾಹಿಸಲಾಗಿತ್ತು. ಆದರೆ ವರ್ಗಾವಣೆ ಮಾಡುವ ಮುನ್ನಾ ಶಾಲಾ ಆಡಳಿತ ಮಂಡಳಿ ಶಿಕ್ಷಣ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ದೂರಿನನ್ವಯ ಸ್ಥಳ ಪರಿಶೀಲನೆ ಮಾಡಿದಾಗ ಶಾಲೆಯನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿರುವ ಸಂಗತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಲಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೂಡಲೇ ಶಾಲೆಯನ್ನು ಮೊದಲಿದ್ದ ಸ್ಥಳಕ್ಕೆ ವರ್ಗಾಹಿಸುವಂತೆ ಸೂಚಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಂಡು ಶಾಲೆಯ ಅನುಮತಿಯನ್ನು ರದ್ದು ಪಡಿಸುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ವರದಿ ನೀಡುವುದಾಗಿ ಆದೇಶದಲ್ಲಿ ಸೂಚಿಸಿದ್ದಾರೆ.
ನ್ಯಾಯಾಲಯದಿಂದ ತಡೆಯಾಜ್ಞೆ: ಕೆಲದಿನಗಳಿಂದ ಆಕ್ಸ್ಫರ್ಡ್ ಪಬ್ಲಿಕ್ ಶಾಲೆ ನಡೆಯುತ್ತಿರುವ ಡಿ.ಟಿ. ರಾಮು ಟ್ರಸ್ಟ್ಗೆ ಸೇರಿದ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಚನ್ನಪಟ್ಟಣ ಸಿವಿಲ್ ಹಿರಿಯ ನ್ಯಾಯಾಧೀಶರ ನ್ಯಾಯಾಲಯವು ನಿರ್ಬಂಧಕಾಜ್ಞೆ ನೀಡಿದೆ. ಲಕ್ಷ್ಮೀಶ್ ಮತ್ತು ಇತರರು ಸಲ್ಲಿಸಿದ್ದ ದಾವೆಯನ್ನು ವಿಚಾರಣೆಗೆ ಕೈಗೆತ್ತುಕೊಂಡ ನ್ಯಾಯಾಲಯವು ಈ ಆದೇಶ ನೀಡಿದೆ.
ಸಹಕಾರ ಸಂಘಕ್ಕೆ ಪುಟ್ಟಸ್ವಾಮಯ್ಯ ಅವಿರೋಧ ಆಯ್ಕೆ
ಮಾಗಡಿ: ವೀರೇಗೌಡನದೊಡ್ಡಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ತ್ಯಾಗದೆರೆಪಾಳ್ಯದ ಟಿ.ಸಿ. ಪುಟ್ಟಸ್ವಾಮಯ್ಯ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಸಿ. ಪುಟ್ಟಸ್ವಾಮಯ್ಯ ಮಾತನಾಡಿ, ಎಲ್ಲಾ ನಿರ್ದೇಶಕರ ಸಹಕಾರ ಮತ್ತು ಪ್ರೋತ್ಸಾಹದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ನಿರ್ದೇಶಕರ ಸಹಕಾರದಿಂದ ರೈತರಿಗೆ ಅನುಕೂಲಕರವಾದ ಕೃಷಿ ಪರಿಕರಗಳನ್ನು ಹಾಗೂ ಕಾಲ ಕಾಲಕ್ಕೆ ರಸಗೊಬ್ಬರ ಪೂರೈಕೆಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರೈತರು ಸಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದು ಪುಟ್ಟಸ್ವಾಮಯ್ಯ ರೈತರಿಗೆ ಕರೆ ನೀಡಿದರು.ನಿರ್ದೇಶಕರಾದ ಲೋಕೇಶ್, ಕೃಷ್ಣಪ್ಪ, ಕರಿಯಪ್ಪ, ರಂಗನರಸಿಂಹಯ್ಯ, ಗಂಗಣ್ಣ, ಮಹಾದೇವಯ್ಯ, ದಾಕ್ಷಾಯಿಣಮ್ಮ, ಕಪನಯ್ಯ, ನಾರಾಯಣಪ್ಪ, ಕೋಟಪ್ಪ, ರಾಜಣ್ಣ, ಬಿ.ಜಿ. ಸೂರಪ್ಪ, ಕಾಳೇಗೌಡ, ಬಾಲಿ ಚಿಕ್ಕಣ್ಣ ಇತರರು ನೂತನ ಅಧ್ಯಕ್ಷ ಪುಟ್ಟಸ್ವಾಮಯ್ಯ ಅವರಿಗೆ ಹಾರ ಹಾಕಿ ಅಭಿನಂದಿಸಿದರು. ನಿರ್ದೇಶಕರುಗಳನ್ನು ನೂತನ ಅಧ್ಯಕ್ಷ ಪುಟ್ಟಸ್ವಾಮಯ್ಯ ಅಭಿನಂದಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಾಳೆ ಕನಕ ಜಯಂತಿ
ನೆಲಮಂಗಲ: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಶ್ರೀಕೃಷ್ಣ ವೇದಿಕೆಯಲ್ಲಿ ನ.20ರಂದು ಬೆಳಗ್ಗೆ 9 ಗಂಟೆಗೆ ಕನಕದಾಸ ಜಯಂತಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಉದ್ಘಾಟನೆ ನೆರವೇರಿಸಲಿದ್ದು, ತಹಸೀಲ್ದಾರ್ ಡಾ. ಎನ್.ಆರ್. ಗೀತಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಂಜುನಾಥ್ ಮಾಗೋವಿ ಉಪನ್ಯಾಸ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೇಂದ್ರ ಇಂಧನ ಮತ್ತು ಕಂಪನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ಆಗಮಿಸಲಿದ್ದಾರೆ. ಆಹ್ವಾನಿತರಾಗಿ ತಾ.ಪಂ. ಅಧ್ಯಕ್ಷೆ ಸಿ.ವಿ. ಸರಸ್ವತಿ, ಉಪಾಧ್ಯಕ್ಷ ಎನ್. ಶ್ರೀನಿವಾಸಮೂರ್ತಿ, ಜಿ.ಪಂ. ಸದಸ್ಯರಾದ ಬಿ.ಎಂ. ಕಾಂತರಾಜು, ಎಂ.ಎನ್. ರಾಂ, ಸುನಂದ ಶಿವಕುಮಾರ್, ವೇಣುಗೋಪಾಲ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸಿ. ರಾಮಾಂಜಿನಯ್ಯ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚಿಕ್ಕನಾಗಯ್ಯ, ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಅಧ್ಯಕ್ಷ ಕೆ.ಆರ್. ಗುರುಪ್ರಕಾಶ್, ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ. ತಿಮ್ಮರಾಜು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಾಲಕಿ ಅತ್ಯಾಚಾರ; ಕಠಿಣ ಶಿಕ್ಷೆಗೆ ಆಗ್ರಹ
ದೊಡ್ಡಬಳ್ಳಾಪುರ: ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ 15 ವರ್ಷದ ಬಾಲಕಿ ಮೇಲೆ ನಡೆದಿರುವ ಹೇಯ ಕೃತ್ಯ ತಾಲೂಕಿನಲ್ಲಿ ಸಂಚಲನೆ ಸೃಷ್ಟಿಸಿದೆ. ಕಾಮುಕರ ಪೈಶಾಚಿಕ ವರ್ತನೆಗೆ ಸಿಕ್ಕು ನರಳುತ್ತಿರುವ ಬಾಲಕಿಗೆ ನ್ಯಾಯ ದೊರೆಯಬೇಕು. ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಜನ ಈ ಮನವಿ ಮಾಡಿದ್ದು, ಅತ್ಯಾಚಾರಿಗಳನ್ನು ಪತ್ತೆ ಹಚ್ಚಿ ಗಂಭೀರ ಕಾನೂನು ಕ್ರಮ ಜರುಗಿಸಬೇಕು. ದೇಶದಲ್ಲಿ ಹಲವು ಪ್ರಕರಣಗಳು ನಡೆದಿರುವುದು, ಆರೋಪಿಗಳಿಗೆ ಶಿಕ್ಷೆಯಾಗಿರುವುದು ಇನ್ನೂ ಹಸಿಯಾಗಿರುವಾಗಲೇ ಈ ದುಷ್ಕೃತ್ಯ ನಡೆಸಿರುವ ಕಾಮುಕರ ಬರ್ಬರ ಕೃತ್ಯಕ್ಕೆ ತಕ್ಕ ಶಾಸ್ತಿಯಾಗಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಕ್ರಮಕ್ಕೆ ಮುಂದಾಗಬೇಕು ಎಂಬ ಆಗ್ರಹ ಹಲವು ಸಂಘಟನೆಗಳಿಂದ ಕೇಳಿ ಬಂದಿದೆ.
ಕನಕದಾಸರ ಜಯಂತ್ಯುತ್ಸವ
ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಮನಗರ ನಗರಸಭೆಯ ಸಂಯುಕ್ತಾಶ್ರಯದಲ್ಲಿ ನ.20ರ ಬೆಳಗ್ಗೆ 11ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಕಂದಾಯ ಭವನದ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಕನಕದಾಸರ ಭಾವಚಿತ್ರವನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ತರಲಾಗುವುದು. 11ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ. ಸುರೇಶ್, ಶಾಸಕರಾದ ಡಿ.ಕೆ. ಶಿವಕುಮಾರ್, ಸಿ.ಪಿ. ಯೋಗೇಶ್ವರ್, ಎಚ್.ಸಿ. ಬಾಲಕೃಷ್ಣ, ಕೆ. ಶ್ರೀನಿವಾಸಮೂರ್ತಿ, ಜಿ.ಪಂ. ಅಧ್ಯಕ್ಷ ಎಚ್.ಸಿ. ರಾಜು, ಉಪಾಧ್ಯಕ್ಷೆ ಎಸ್.ಬಿ. ಗೌರಮ್ಮ, ತಾ.ಪಂ. ಪ್ರಭಾರ ಅಧ್ಯಕ್ಷ ಕೆ.ಎಸ್. ಶಂಕರಯ್ಯ ಭಾಗವಹಿಸುವರು.
ಕೈ ಕಸೂತಿ ತರಬೇತಿ
ರಾಮನಗರ: ಬಿಡದಿ ಬಳಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎಡಿಪೈ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯು ಆಸಕ್ತ ನಿರುದ್ಯೋಗಿ ಯುವತಿಯರಿಗಾಗಿ ಸ್ವ ಉದ್ಯೋಗ ಪ್ರಾರಂಭಿಸಲು ಕೈ ಕಸೂತಿ ಉಚಿತ ತರಬೇತಿ ನೀಡಲಿದೆ. ತರಬೇತಿಯು ನ.25ರಿಂದ ಪ್ರಾರಂಭವಾಗಲಿದೆ. ಬಿಪಿಎಲ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವಿವರಕ್ಕೆ ಸಂಸ್ಥೆಯ ನಿರ್ದೇಶಕರ ಮೊ. 97406 48830 ಅಥವಾ 99001 68985 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

