ಬೆಂಗಳೂರು ಗ್ರಾಮಾಂತರ

ಕಾರ್ಮಿಕರ ಉದ್ಯೋಗ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ: ಟೊಯೋಟಾ ಮಂಡಳಿ ಸ್ಪಷ್ಟನೆ

Published On :

ಕ.ಪ್ರ.ವಾರ್ತೆ ರಾಮನಗರ ನ.19
ಯಂತ್ರೋಪಕರಣಗಳನ್ನು ಹೊಸ ಸ್ಥಳದಲ್ಲಿ ಸ್ಥಾಪಿಸುವ ಉದ್ದೇಶದಿಂದಷ್ಟೇ ಸಾಗಿಸಲಾಗುತ್ತಿದೆ. ಕಾರ್ಖಾನೆಯ ಕಾರ್ಮಿಕರ ಉದ್ಯೋಗ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ ಎಂದು ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಬಿಡದಿ ಕೈಗಾರಿಕಾ ಕ್ಷೇತ್ರದಲ್ಲಿರುವ ಕಂಪನಿಯ ಘಟಕದಿಂದ ಕೆಲ ಯಂತ್ರೋಪಕರಣಗಳನ್ನು ಸ್ಥಳಾಂತರಿಸುತ್ತಿರುವುದು ನಿಜ. ಉದ್ಯೋಗ ಭದ್ರತೆ ವಿಷಯವನ್ನು ಮುಂದಿಟ್ಟುಕೊಂಡು ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸಮಂಜಸವಲ್ಲ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.
ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಸಂಸ್ಥೆಯಲ್ಲಿ ಟೊಯೋಟಾ ವಾಹನಗಳ ಆಕ್ಸಲ್‌ಗಳು ಮತ್ತು ಎಂಜಿನ್ ತಯಾರಿಸಲಾಗುತ್ತಿದೆ. ಕಂಪನಿಯ ಉತ್ಪಾದನೆಗೆ ದೇಶೀಯ ಮತ್ತು ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಗಳನ್ನು ಪೂರೈಸಲು ಉದ್ದಿಮೆಯನ್ನು ವಿಸ್ತರಿಸುವುದು ಮತ್ತು ಬಲಪಡಿಸಲು ಕಂಪನಿ ಮುಂದಾಗಿದೆ ಎಂದು ಆಡಳಿತ ಮಂಡಳಿ ವಿವರಿಸಿದೆ.
ವಿಸ್ತರಣೆ ದೃಷ್ಟಿಯಿಂದ ಆಕ್ಸಲ್ ತಯಾರಿಕಾ ಘಟಕವನ್ನು ಹೊರ ಗುತ್ತಿಗೆ ನೀಡಲು ಕಂಪನಿ ತೀರ್ಮಾನಿಸಿರುವುದು ದೀರ್ಘಾವಧಿಯ ವ್ಯಾಪಾರ ಯೋಜನೆ. ಹೊರ ಗುತ್ತಿಗೆ ನೀಡುವ ಯೋಜನೆ 2010ರಲ್ಲಿ ಆರಂಭವಾಗಿ 2014ರವರೆಗೆ ನಡೆಯಲಿದೆ. ಈ ವಿಚಾರದಲ್ಲಿ ಕಾರ್ಮಿಕ ಸಂಘ ಮತ್ತು ಉದ್ದಿಮೆಯ ಎಲ್ಲ ಪಾಲುದಾರರಿಗೂ ಸಕಾಲದಲ್ಲಿ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಯಂತ್ರಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಂತ್ರಗಳನ್ನು ಹೊಸ ಸ್ಥಳದಲ್ಲಿ ಸ್ಥಾಪಿಸುವುದು ಮತ್ತು ಮಾನವ ಶಕ್ತಿಯ ಮರು ನಿಯೋಜನೆಯ ಉದ್ದೇಶವನ್ನು ಒಳಗೊಂಡಿದೆ. ಹೀಗಾಗಿ ಕಾರ್ಮಿಕರ ಉದ್ಯೋಗಕ್ಕೆ ಯಾವುದೇ ಧಕ್ಕೆ ಉಂಟು ಮಾಡುವುದಿಲ್ಲ. ಈ ಪ್ರಕ್ರಿಯೆಯಿಂದಾಗಿ ವಿದೇಶಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಾಗುವುದೇ ಹೊರತು ನಷ್ಟವಾಗುವುದಿಲ್ಲ ಎಂದು ಕಂಪನಿ ಹೇಳಿದೆ.
ನ.17ರಂದು ಕಾರ್ಮಿಕರು ಯಂತ್ರಗಳ ವರ್ಗಾವಣೆಗೆ ತಡೆವೊಡ್ಡಿ ಪ್ರತಿಭಟಿಸಿರುವುದು ಕಾನೂನು ಬಾಹಿರ ಎಂದಿರುವ ಕಂಪನಿಯು ಈ ವಿಷಯದಲ್ಲಿ ಕಾರ್ಮಿಕ ಸಂಘದ ಜತೆ ಸಮಾಲೋಚನೆ ನಡೆಸಿ, ಗೊಂದಲವನ್ನು ಪರಿಹರಿಸುವ ಪ್ರಯತ್ನ ಮುಂದುವರೆದಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.