ಬೆಂಗಳೂರು ಗ್ರಾಮಾಂತರ

ಕನ್ನಡ ಭಾಷೆಗೆ ಅಗ್ರಸ್ಥಾನ ಇರಲಿ: ರಾಜಶೇಖರ್

Published On :

ಕ.ಪ್ರ.ವಾರ್ತೆ ರಾಮನಗರ ನ.19
ಜ್ಞಾನಾರ್ಜನೆ ದೃಷ್ಟಿಯಿಂದ ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಆದರೆ, ಕನ್ನಡ ಭಾಷೆಗೆ ಅಗ್ರಸ್ಥಾನ ಮತ್ತು ಪ್ರಾಶಸ್ತ್ಯ ನೀಡಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿ.ಎಚ್. ರಾಜಶೇಖರ್ ಕರೆ ನೀಡಿದ್ದಾರೆ.
ನಗರದ ಕನ್ನಿಕಾ ಮಹಲ್‌ನಲ್ಲಿ ವಾಸವಿ ವಿದ್ಯಾನಿಕೇತನ ಶಾಲೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್ ವ್ಯಾಮೋಹಕ್ಕೆ ಸಿಲುಕಿದ ನಮ್ಮವರು ಮಾತೃಭಾಷೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ವಿಷಾದಿಸಿದರು. ಯಾವುದೇ ಭಾಷೆ ನಿರಂತರ ಬಳಕೆಗೆ ಬಾರದಿದ್ದರೆ ಅದರ ಅವನತಿ ಆದಂತೆಯೇ ಎನ್ನುವುದಕ್ಕೆ ಸಂಸ್ಕೃತ ಭಾಷೆಯೇ ಸಾಕ್ಷಿಯಾಗಿದೆ. ಇಂಗ್ಲಿಷ್ ಕಲಿತರಷ್ಟೇ ಉದ್ಯೋಗ ಮತ್ತು ಮನ್ನಣೆ ಸಿಗುತ್ತದೆ ಎನ್ನುವ ಭ್ರಮೆಯಿಂದ ಎಲ್ಲರೂ ಹೊರಬರಬೇಕು ಎಂದು ಅವರು ಕಿವಿಮಾತು ಹೇಳಿದರು.  ನ್ಯಾಯಾಂಗ ವ್ಯವಸ್ಥೆ ಮತ್ತು ಸರ್ಕಾರದ ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಬಗ್ಗೆ ನಾವು ಭಾಷಣ ಕೇಳುವುದಕ್ಕಷ್ಟೇ ಸೀಮಿತವಾಗಿದ್ದೇವೆ. ಇವೆರಡರ ಕಡ್ಡಾಯ ಜಾರಿ ಇಂದಿಗೂ ಸಾಧ್ಯವಾಗದಿರಲು ಉನ್ನತ ಅಧಿಕಾರಿಗಳೇ ಕಾರಣವೆಂದು ರಾಜಶೇಖರ್ ಆರೋಪಿಸಿದರು.
ಸ್ಥಳೀಯ ಭಾಷೆಗೆ ಮನ್ನಣೆ: ಜಪಾನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಇಂಗ್ಲಿಷ್ ಮೇನಿಯಾ ಇಲ್ಲವೇ ಇಲ್ಲ. ಅಲ್ಲಿನ ಜನರು ಸ್ಥಳೀಯ ಭಾಷೆಗಳಲ್ಲೇ ವ್ಯಾಸಂಗ ಮತ್ತು ವ್ಯವಹಾರ ನಡೆಸುತ್ತಿದ್ದಾರೆ. ಇಷ್ಟಾಗಿಯೂ ಆ ದೇಶಗಳು ಮುಂದುವರೆಯಲು ಸಾಧ್ಯವಾಗಿಲ್ಲವೇ ಎಂದು ಅವರು ಅವರು ಪ್ರಶ್ನಿಸಿದರು.
ಇಂಗ್ಲಿಷ್ ಹಾವಳಿಯಿಲ್ಲದ ಆ ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿವೆ. ಕನ್ನಡ ಭಾಷಾಭಿವೃದ್ಧಿ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರವು ಗಣಕಯಂತ್ರಗಳ ತಂತ್ರಾಂಶಗಳನ್ನು ಕನ್ನಡದಲ್ಲೇ ಅಭಿವೃದ್ಧಿಪಡಿಸಬೇಕು ಎಂದು ಅವರು ಸಲಹೆ ನೀಡಿದರು.
ಮಾತೃಭಾಷೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ಎಲ್ಲ ವ್ಯವಹಾರವೂ ಕನ್ನಡದಲ್ಲೇ ನಡೆಯಬೇಕು. ಭಾಷೆಯ ಉಳಿವಿನಿಂದ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯೂ ಉಳಿದು, ಬೆಳೆಯುತ್ತದೆ ಎಂದು ಅವರು ತಿಳಿಸಿದರು.
ವಾಸವಿ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷ ಕೆ.ಎನ್. ಸುರೇಂದ್ರನಾಥ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ರಾಮಕೃಷ್ಣ ಶೆಟ್ಟಿ, ಕೆ.ಆರ್. ನಾಗೇಶ್, ಪಿ.ವಿ. ಬದರಿನಾಥ್, ಬಿ.ವಿ. ಸೂರ್ಯಪ್ರಕಾಶ್, ಎಂ.ಬಿ. ಜನಾರ್ದನ್, ಅರ್ಜುನ್, ವಿ.ಕೆ. ವಿಜಯಪ್ರಭಾ ಭಾಗವಹಿಸಿದ್ದರು. ಎ.ಎಂ. ಶ್ರೀಲಕ್ಷ್ಮಿ ನಿರೂಪಿಸಿದರು. ವರಲಕ್ಷ್ಮೀ ವಂದಿಸಿದರು. 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿವಿಧ ವೇಷಭೂಷಣ ಸ್ಪರ್ಧೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.