ಬೆಂಗಳೂರು ಗ್ರಾಮಾಂತರ

ಅಕ್ರಮ ಬಡಾವಣೆ ನಿರ್ಮಾಣ; ತೆರವು ಕಾರ್ಯಾಚರಣೆ

Published On :

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ತಿರುಮಗೊಂಡನಹಳ್ಳಿ ಗ್ರಾಮದ ಸರ್ವೇ ನಂ.184/2 ವ್ಯಾಪ್ತಿಯ 5 ಎಕರೆ ಪ್ರದೇಶದಲ್ಲಿ ಅನುಮತಿ ಇಲ್ಲದೆ ನಿರ್ಮಾಣವಾಗಿದ್ದ ಬಡಾವಣೆಯನ್ನು ತಹಸೀಲ್ದಾರ್ ಕೆ.ಬಿ. ಸಿದ್ದಲಿಂಗಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಈಗ ವಶಪಡಿಸಿಕೊಂಡಿರುವ ಭೂಮಿಯ ಬೆಲೆ 2 ಕೋಟಿಗೂ ಅಧಿಕ. ಈ ಭೂಮಿಯಲ್ಲಿ ಕಂದಾಯ ಇಲಾಖೆಯಿಂದ ಅನುಮತಿ ಪಡೆಯದೆ ಭೂ ಪರಿವರ್ತನೆ ಮಾಡಿದ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಾಭಿವೃದ್ಧಿ ಮಂಡಲಿ(ಬಯಪ) ಅನುಮೋದನೆ ಪಡೆಯದೆ ಬಡಾವಣೆ ನಿರ್ಮಿಸಲಾಗಿದೆ.
ಹೀಗಾಗಿ ದೂರುಗಳು ಕೇಳಿ ಬಂದಿದ್ದವು. ಅದರನ್ವಯ ಸರ್ಕಾರಿ ದಾಖಲೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಭೂಮಿಯ ಮಾಲೀಕರಿಗೆ ನೋಟಿಸ್ ನೀಡಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ಪಡೆದಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಲಿಲ್ಲ.
ಪರಿಣಾಮವಾಗಿ ಬಡಾವಣೆಯಲ್ಲಿ ರಸ್ತೆ, ಚರಂಡಿ, ಇನ್ನಿತರ ಮೂಲ ಸೌಕರ್ಯಗಳಿಗೆ ಯೋಜಿಸಲಾಗಿರುವುದನ್ನು ತೆರವು ಮಾಡಲಾಗಿದೆ. ಕೃಷಿ ಭೂಮಿಯಲ್ಲಿ ಯಾವುದೇ ಅನುಮತಿ ಪಡೆಯದೆ ಬಡಾವಣೆಗಳನ್ನು ನಿರ್ಮಿಸುವ ಬಗ್ಗೆ ದೂರುಗಳು ಕೇಳಿ ಬಂದರೆ ಅಂತಹ ಅಕ್ರಮಚಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಸಾರ್ವಜನಿಕರೂ ಕೂಡ ಸರ್ಕಾರಿ ಭೂಮಿಗಳ ಒತ್ತುವರಿ ಬಗ್ಗೆ ತಾಲೂಕು ಕಚೇರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ಮೆಟ್ರೋ ಮಳಿಗೆ ಸ್ಥಾಪನೆ ಬೇಡ: ಜಗದೀಶ್
ಆನೇಕಲ್: ಮೆಟ್ರೋ ಮಳಿಗೆಗಳ ಪ್ರಾರಂಭದಿಂದ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳು ಅತಂತ್ರವಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ವದೇಶಿ ಜಾಗರಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಎಂದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಬಳಿ ಕೋನಪ್ಪನ ಅಗ್ರಹಾರದಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ಕ್ಯಾಷ್ ಆ್ಯಂಡ್ ಕ್ಯಾರಿ ದೈತ್ಯ ಕಂಪನಿಯ ಪ್ರಾರಂಭೋತ್ಸವ ವಿರೋಧಿಸಿ ಆನೇಕಲ್ ತಾಲೂಕು ವರ್ತಕರ ಸಂಘ ಹಾಗೂ ರಾಷ್ಟ್ರೀಯ ಕಿಸಾನ್ ಪರಿಷತ್ ಮತ್ತಿತ್ತರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ವರ್ತಕರನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ 1.25 ಕೋಟಿ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಆದರೆ ವಾಲ್ಮಾರ್ಟ್ನಂತಹ ದೈತ್ಯ ಮಾರುಕಟ್ಟೆಗಳ ಪ್ರಾರಂಭದಿಂದ ಚಿಲ್ಲರೆ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವ ದಿನಗಳು ದೂರವಿಲ್ಲ ಎಂದರು. ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಮಾರುಕಟ್ಟೆಗಳಿಂದಾಗಿ ಉದ್ಯೋಗ ಅವಕಾಶ ಹೆಚ್ಚಾಗುವುದು ಎಂದು ಅಪಪ್ರಚಾರ ಮಾಡುತ್ತಿದೆ. ಅಮೆರಿಕದಲ್ಲಿ 32 ವರ್ಷಗಳ ಹಿಂದೆ ವಾಲ್ಮಾರ್ಟ್ ಕಂಪನಿ ಪ್ರಾರಂಭವಾದ ನಂತರ 77 ಲಕ್ಷ ಉದ್ಯೋಗಗಳು ಕಡಿಮೆಯಾಗಿದೆ ಎಂದರು.
ವರ್ತಕರ ಸಂಘದ ಕಾರ್ಯದರ್ಶಿ ಆದೂರು ಪ್ರಕಾಶ್ ಮಾತನಾಡಿ, ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ಮಾರುಕಟ್ಟೆ ಸ್ಥಾಪನೆಯಾಗಲು ಬಿಡುವುದಿಲ್ಲ. ಮೆಟ್ರೋ ಜನವಿರೋಧಿ ಮಳಿಗೆ ಪ್ರಾರಂಭಿಸಿದರೇ ನಿರಂತರ ಹೋರಾಟ ಮಾಡಲಾಗುವುದು ಎಂದರು. ರಾಷ್ಟೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ರಾಮಸ್ವಾಮಿ ರೆಡ್ಡಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.