ಪರಸ್ಪರ ಸಾಮರಸ್ಯ ಇಲ್ಲದ ಮೇಲೆ...
ಚನ್ನಪಟ್ಟಣ: ಶಾಸಕರು ಮತ್ತು ಜೆಡಿಎಸ್ ತಾಪಂ ಸದಸ್ಯರ ನಡುವಿನ ಸಂಘರ್ಷದಿಂದಾಗಿ ತಾಲೂಕಿನ ಬಸವ ವಸತಿ ಯೋಜನೆಯಡಿ ಮಂಜೂರಾಗಿದ್ದ ಮನೆಗಳ ಅನುಮೋದನೆಗಾಗಿ ಕರೆಯಲಾಗಿದ್ದ ಜಾಗೃತ ಸಮಿತಿ ಸಭೆ ಗದ್ದಲ ಗೌಜಲಲ್ಲಿ ಮುಳುಗಿ ಯಾವುದೇ ಚರ್ಚೆ ಇಲ್ಲದೆ ಬರಖಾಸ್ತುಗೊಂಡಿತು.
ವೈ.ಟಿ. ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಾಗೃತಿ ಸಮಿತಿ ಅಧ್ಯಕ್ಷರಾದ ಶಾಸಕರು ಮತ್ತು ತಾಪಂ ಸದಸ್ಯರ ನಡುವೆ ಸಾಮರಸ್ಯ ಮೂಡದಾಯಿತು. ಕೊನೆಗೆ ಸಣ್ಣ ಪುಟ್ಟ ಕಾರಣಗಳಿಗೆ ಪಟ್ಟಿಯನ್ನು ತಡೆಹಿಡಿಯುವುದು ಬೇಡ ಆಯ್ಕೆ ಪ್ರಕ್ರಿಯೆಯನ್ನು ಸಭೆ ಅನುಮೋದಿಸಿದೆ ಎಂದು ಹೇಳಿ ಸಭೆಯಿಂದ ಹೊರಟರು. ಇದರಿಂದ ಕುಪಿತಗೊಂಡ ತಾಪಂ ಸದಸ್ಯ ಕಾಂತರಾಜು ಅನುಮೋದನೆ ನೀಡದಂತೆ ಪಟ್ಟು ಹಿಡಿದು ಕಡತಗಳನ್ನು ಕಸಿದುಕೊಂಡು ತಮ್ಮ ಬಳಿ ಇರಿಸಿ ಕೊಂಡರು.
ಮಾರ್ಧನಿಸಿದ ವೈ.ಟಿ. ಹಳ್ಳಿ ರಾದ್ಧಾಂತ: ವಸತಿ ಯೋಜನೆಯ ಮಂಜೂರಾತಿಗೆ ಕರೆಯಲಾಗಿದ್ದ ಜಾಗೃತ ಸಮಿತಿ ಸಭೆಯಲ್ಲಿ ವೈ.ಟಿ. ಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದ್ದ ರಾದ್ಧಾಂತ ಮಾರ್ಧನಿಸಿತು. ವಸತಿ ಯೋಜನೆಯ ಆಯ್ಕೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಗ್ರಾಮ ಸಭೆಯಲ್ಲಿ ಏನೂ ಗಲಾಟೆ ನಡೆಯದಿದ್ದರೂ ಗ್ರಾಪಂ ಅಧ್ಯಕ್ಷರು ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಸದಸ್ಯ ಕಾಂತರಾಜು ಕಿಡಿಕಾರಿದರು.
ಸರ್ಕಾರಿ ಸಭೆಯಲ್ಲಿ ಯಾವುದೇ ಗಲಾಟೆ ನಡೆದಿದ್ದೇ ಆದಲ್ಲಿ ಸಂಬಂಧಿಸಿದ ಅಧಿಕಾರಿ ದೂರು ನೀಡಬೇಕು, ಅದರಂತೆ ಗ್ರಾಮಸಭೆಯಲ್ಲಿ ನಡೆದಿರುವ ಗದ್ದಲಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಕಾರ್ಯದರ್ಶಿ ದೂರು ನೀಡವುದನ್ನು ಬಿಟ್ಟು ಅಧ್ಯಕ್ಷರು ಒಂದು ವಾರದ ಬಳಿಕ ಸುಳ್ಳು ದೂರು ನೀಡಿದ್ದಾರೆ. ಸಭೆಯ ವಿಡಿಯೋ ಚಿತ್ರಣ ಇದೆ ಗಲಾಟೆ ಎಲ್ಲಿ ನಡೆದಿದೆ ಎಂಬುದನ್ನು ತೋರಿಸಿ ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಈ ಸಂಬಂಧ ಜಿಲ್ಲಾ ಪಂಚಾಯಿತಿಗೆ ವರದಿ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಲಾಟರಿ ಮೂಲಕ ಆಯ್ಕೆ ನಡೆಸದಿರುವ ಬಗ್ಗೆ ಕಾರ್ಯದರ್ಶಿವಿರುದ್ಧ ಸಹ ಕ್ರಮ ಜರುಗಿಸುವುದಾಗಿ ಸಭೆಗೆ ತಿಳಿಸಿದರು. ಕಾರ್ಯದರ್ಶಿಯನ್ನು ಅಮಾನತುಗೊಳಿಸಬೇಕು ವೈ.ಟಿ. ಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಸಮಸ್ಯೆಯನ್ನು ಸರಿಪಡಿಸುವ ವರೆಗೆ ಪಟ್ಟಿಗೆ ಅನುಮೋದನೆ ನೀಡಬಾರದೆಂದು ಕಾಂತರಾಜು ಪಟ್ಟು ಹಿಡಿದರು.
ಕೆರಳಿಸಿದ ಶಾಸಕರ ಹೇಳಿಕೆ: ಇದೇ ವೇಳೆಗೆ ಮಧ್ಯ ಪ್ರವೇಶಿಸಿದ ಶಾಸಕ ಯೋಗೇಶ್ವರ್ ವೈ.ಟಿ. ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ದೌರ್ಜನ್ಯ, ಅಕ್ರಮಗಳು ನಡೆಯುತ್ತಿರುವ ಬಗ್ಗೆ ನನಗೆ ಸಾಕಷ್ಟು ದೂರು ಬಂದಿದೆ ಎಂದು ಪರೋಕ್ಷವಾಗಿ ವಿಪಕ್ಷದವರನ್ನು ಚುಚ್ಚು ಆಯ್ಕೆ ಪ್ರಕ್ರಿಯೆ ಕಾನೂನು ಪ್ರಕಾರವಾಗಿದ್ದು ಅನುಮೋದನೆ ನೀಡುವಂತೆ ಸೂಚಿಸಿ ಶಾಸಕರು ಸಭೆಯಿಂದ ಎದ್ದು ನಡೆದರು.
ಇದರಿಂದ ಮತ್ತಷ್ಟು ಕೆರಳಿದ ಸದಸ್ಯರು ನಾವು ಚುನಾಯಿತ ಪ್ರತಿನಿಧಿಗಳೆಂಬ ಗೌರವ ಇಲ್ಲವೇ ಕಾಟಾಚಾರಕ್ಕೆ ಸಭೆ ಕರೆಯುವುದು ಯಾಕೆ. ನಮ್ಮ ಮಾತನ್ನು ಕೇಳಲು ಶಾಸಕರಿಗೆ ಸೌಜನ್ಯವಿಲ್ಲ ಎಂದ ಮೇಲೆ ನಾವು ಸಭೆ ನಡೆಸಲು ಬಿಡುವುದಿಲ್ಲ ಎಂದು ತಮ್ಮ ಮೇಜಿನ ಮೇಲಿದ್ದ ಕಾಗದ ಪತ್ರಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಸತಿ ಯೋಜನೆಯ ದಾಖಲಾತಿಗಳನ್ನು ಎತ್ತಿಕೊಂಡ ಕಾಂತರಾಜು ಅಧ್ಯಕ್ಷರ ಕೊಠಡಿಯತ್ತ ನಡೆದರು. ಇವರನ್ನು ಬೆಂಬಲಿಸಿದ ತಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ಭಾನುಪ್ರಕಾಶ್, ಮಾರೇಗೌಡ, ಚಿನ್ನಗಿರೀಗೌಡ ಹಾಗೂ ಇತರರು ಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.
606 ಮನೆ ಮಂಜೂರು: ಸಭೆ ಆರಂಭವಾಗುತ್ತಿದ್ದಂತೆ ಸಭೆಗೆ ಮಾಹಿತಿ ನೀಡಿದ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಪ್ರಸಕ್ತ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ತಾಲೂಕಿಗೆ 640 ಮನೆಗಳು ಮಂಜೂರಾಗಿದ್ದು ಎಚ್. ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ಪಟ್ಟಿ ಸಲ್ಲಿಕೆಯಾಗದ್ದರಿಂದ ಈ ಸಭೆಯಲ್ಲಿ 606 ಮನೆಗಳಿಗೆ ಮಂಜೂರಾತಿ ನೀಡಬೇಕಾಗಿದೆ ಎಂದು ತಿಳಿಸಿದರು.
ಹಿಂದೆ 12 ಸಾವಿರ ಮನೆಗಳು ಮಂಜೂರಾಗಿದ್ದು ಈ ಪೈಕಿ ಕೇವಲ 6 ಸಾವಿರ ಮನೆಗಳು ಮಾತ್ರ ಮಂಜೂರಾಗಿದ್ದ ಇನ್ನೂ 6 ಸಾವಿರ ಮನೆಗಳು ಬರಬೇಕಿದೆ. ಈ ಸಂಬಂಧ ರಾಜೀವ್ಗಾಂಧಿ ವಸತಿ ನಿಗಮದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿರುವುದಾಗಿ ಸಭೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

