ಮೈಕ್ರೋ ಸೆಕ್ಟರ್ ವಿರುದ್ಧ ಕ್ರಿಮಿನಲ್ ಕೇಸ್ಗೆ ಚಿಂತನೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.24
ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಮಾದಗೊಂಡನಹಳ್ಳಿ ಸಮೀಪ 453 ಮನೆಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರ, ಭೂ ಸೇನಾ ನಿಗಮ ಮತ್ತು ಮೈಕ್ರೋ ಸೆಕ್ಟರ್ ಏಜೆನ್ಸಿಗಳಿಗೆ ಗುತ್ತಿಗೆ 2003ರಲ್ಲಿ ನೀಡಲಾಗಿತ್ತು. ಇದರಲ್ಲಿ 155 ಮನೆಗಳ ಕಾಮಗಾರಿ ಅರ್ಧಕ್ಕೇ ನಿಂತಿದ್ದು, 10 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಆದರೆ ಮನೆಗಳಿಗೆ ನಿಗದಿಯಾಗಿದ್ದ ಹಣವನ್ನು ಮಾತ್ರ ಸಂಪೂರ್ಣವಾಗಿ ಗುತ್ತಿಗೆದಾರರು ಪಡೆದಿದ್ದಾರೆ ಎಂದು ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ನಿವೇಶನ ರಹಿತರಿಗೆ ರಾಜೀವಗಾಂಧಿ ವಸತಿ ನಿಗಮದ ಅಡಿಯಲ್ಲಿ ಮನೆ ನಿರ್ಮಿಸಿಕೊಡಲು ಗುತ್ತಿಗೆ ಪಡೆದಿದ್ದ ಮೈಕ್ರೋ ಸೆಕ್ಟರ್ ಏಜೆನ್ಸಿ ವಿಫಲವಾಗಿರುವ ಹಿನ್ನಲೆಯಲ್ಲಿ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅರ್ಧಕ್ಕೆ ನಿಂತಿರುವ ಮನೆಗಳನ್ನು ಪೂರ್ಣಗೊಳಿಸಲು, ಪೂರ್ಣಗೊಂಡಿರುವ ಮನೆಗಳಲ್ಲಿ ದಾಖಲೆ ಇಲ್ಲದೆಯೂ ವಾಸವಾಗಿರುವ ಅರ್ಹ ಫಲಾನುಭವಿಗಳ ಸಮೀಕ್ಷೆ ನಡೆಸಿ ಶಾಸಕರ ನೇತೃತ್ವದ ಸಮಿತಿ ಒಪ್ಪಿಗೆ ನೀಡಿದ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಾದಗೊಂಡನಹಳ್ಳಿ ಸಮೀಪ ಮನೆಗಳನ್ನು ನಿರ್ಮಿಸಲು ಗುತ್ತಿಗೆ ಪಡೆದು ನಗರಸಭೆಗೆ ವಂಚಿಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅರ್ಧಕ್ಕೆ ನಿಂತಿರುವ ಮನೆಗಳ ನಿರ್ಮಾಣವನ್ನು ಶೀಘ್ರವಾಗಿ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳುವ ಅರ್ಹ ಫಲಾನುಭವಿಗಳನ್ನು ಗುರುತಿಸುವಾಗ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಪಾರದರ್ಶಕವಾಗಿ ಆಯ್ಕೆ ಮಾಡುವಂತೆ ನಿಗಾ ವಹಿಸಲಾಗುವುದು. ನಿಂತಿರುವ ಮನೆಗಳ ಕಾಮಗಾರಿ ತುರ್ತು ಆರಂಭಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರಸಭೆ ಆಯುಕ್ತ ಡಾ.ಬಿಳಿಕೆಂಚಪ್ಪ ಮಾಹಿತಿ ನೀಡಿ 4 ವರ್ಷಗಳ ಹಿಂದೆ ನಿರ್ಮಾಣ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ನೊಟೀಸ್ಗಳನ್ನು ನೀಡಲಾಗಿದೆ. ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆಯೂ ನಗರಸಭೆಯಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ತಾ.ಪಂ ಸಿಇಓ ಅಶ್ವತ್ಥರೆಡ್ಡಿ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

