ಧಾರ್ಮಿಕ ಇಚ್ಛಾಶಕ್ತಿಯೊಂದಿಗೆ ಸಾಮಾಜಿಕ ಚಿಂತನೆ ಮುಖ್ಯ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ. 25
ಇಲ್ಲಿನ ಚೌಡೇಶ್ವರಿ ದೇವಾಲಯದ ಶ್ರೀಬಸವಣ್ಣ ಸೇವಾ ಸಮಿತಿಯ 25ನೇ ವಾರ್ಷಿಕೋತ್ಸವ ಬೆಳ್ಳಿ ಹಬ್ಬ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀದಯಾನಂದಪುರಿ ಸ್ವಾಮೀಜಿ ಮತ್ತು ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದಸ್ವಾಮೀಜಿಗಳ ರಾಜಬೀದಿ ಉತ್ಸವ ಗಮನ ಸೆಳೆಯಿತು.
ಸಂಜೆ ಇಲ್ಲಿನ ಶ್ರೀರಾಮಲಿಂಗಚಂದ್ರಚೌಡೇಶ್ವರಿ ದೇವಾಲಯದಿಂದ ಹೊರಟ ಅದ್ಧೂರಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೈಸೂರು ನಗಾರಿ, ಡೊಳ್ಳುಕುಣಿತ, ಕಂಸಾಳೆ, ಕೇರಳದ ಚಂಡೆವಾದ್ಯ, ವಿದೇಶಿ ಬ್ಯಾಂಡ್ ವೃಂದ, ದೇಸಿ ತಮಟೆ ಕಲಾವಿದರೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ರಂಗು ಮೂಡಿಸಿದ್ದವು. ಸ್ವಾಮೀಜಿಗಳೊಂದಿಗೆ ದೇವಾಂಗ ಕುಲದೇವತೆ ರಾಮಲಿಂಗಚಂದ್ರ ಚೌಡೇಶ್ವರಿ ಉತ್ಸವವೂ ನಡೆಯಿತು.
ಆಶೀರ್ವಚನ: ಮೆರವಣಿಗೆಗೂ ಮುನ್ನ ದೇವಾಲಯದಲ್ಲಿ ನಡೆದ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀದಯಾನಂದಪುರಿ ಸ್ವಾಮೀಜಿ ಸಂಘಟನೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಧಾರ್ಮಿಕ ಇಚ್ಛಾಶಕ್ತಿಯ ಜೊತೆ ಸಾಮಾಜಿಕ ಬೆಳವಣಿಗೆಯ ದೃಷ್ಟಿಕೋನವನ್ನೂ ಬೆಳೆಸಿಕೊಳ್ಳಬೇಕಾದ್ದು ಇಂದಿನ ಅನಿವಾರ್ಯ. ನೇಕಾರ ಸಂಘಟನೆಗಳು ಸದೃಡವಾಗಿ ಬೆಳೆಯಬೇಕಿದ್ದರೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಮುಖ್ಯ. ಬಸವಣ್ಣ ಸೇವಾ ಸಮಿತಿ ಅನೇಕ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವುದು ವಿಶೇಷ ಎಂದರು.
ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶಾಂತಿ-ಧಾರ್ಮಿಕ ಸಹಿಷ್ಣುತೆ ಸದಾ ಕಾಲ ಇರಬೇಕು. ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕನ್ನು ಕಟ್ಟಿಕೊಳ್ಳುವುದು ಮನುಷ್ಯರ ಗುಣಧರ್ಮವಾಗಬೇಕು. ಅಧರ್ಮ ಹೆಚ್ಚಾಗಿ ಧಾರ್ಮಿಕ ಪ್ರಜ್ಞೆಯ ಅವನತಿ ಹೆಚ್ಚುತ್ತಿರುವ ಆತಂಕದ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವ್ಯಕ್ತಿಗತ ಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು ಸಮಾಜದ ಕುರಿತು ಚಿಂತಿಸುವಂತಾಗಬೇಕು. ಆಗ ಮಾತ್ರ ಸುಖಿ ಸಮಾಜದ ನಿರ್ಮಾಣ ಸಾಧ್ಯ. ವಿಶ್ವಶಾಂತಿ ಎಲ್ಲರ ಆಶಯವಾಗಬೇಕು. ಅದೇ ಧರ್ಮ ಪ್ರಜ್ಞೆಯಾಗಿ ಬೆಳೆಯಬೇಕು ಎಂದರು.
ವಿವಿಧ ಕಾರ್ಯಕ್ರಮ: ಕಡೇ ಕಾರ್ತೀಕ ಸೋಮವಾರ ಮತ್ತು ಬಸವಣ್ಣ ಸೇವಾ ಸಮಿತಿಯ ಬೆಳ್ಳಿಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ದೇವರುಗಳಿಗೆ ವಿಶೇಷಾಲಂಕಾರ ಮಾಡಲಾಗಿತ್ತು. ಸಾವಿರಾರು ಮಂದಿ ಭಕ್ತರು ಭೇಟಿ ನೀಡಿದರು.
ಹಲವು ಸಂಘಟನೆಗಳು ಭಾಗಿ: ಕಾರ್ಯಕ್ರಮದಲ್ಲಿ ದೇವಾಂಗ ಮಂಡಲಿ, ಗಾಯತ್ರಿ ಪೀಠ ಮಿತ್ರ ಬಳಗ, ಆಂಧ್ರದೇವಾಂಗ ಯೂತ್ಸ್ ಅಸೋಸಿಯೇಷನ್, ಪದ್ಮಾಶಾಲಿ ಸಂಘ, ತೆಲುಗು ದೇವಾಂಗ ಸಂಘ, ತೊಗಟವೀರ ಸಂಘ, ಚೌಡೇಶ್ವರಿ ದೇವಾಂಗ ಮಹಿಳಾ ಸಂಘ, ಗಾಯತ್ರಿ ಮಹಿಳಾ ಟ್ರಸ್ಟ್, ಕುರುಹಿನಶೆಟ್ಟಿ ಸಂಘ ಸೇರಿದಂತೆ ಅನೇಕ ನೇಕಾರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮುಖಂಡರು ಪಾಲ್ಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

