ಬೆಂಗಳೂರು ಗ್ರಾಮಾಂತರ

ತೀವ್ರ ಹೋರಾಟಕ್ಕೆ ನೀರಾವರಿ ಹೋರಾಟ ಸಮಿತಿ ಸಜ್ಜು

Published On :

ರಾಮನಗರ: ಬಯಲುಸೀಮೆಯ ಬರದನಾಡು ರಾಮನಗರಕ್ಕೆ ಶಾಶ್ವತ ನೀರಾವರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ತೀವ್ರ ಸ್ವರೂಪ ನೀಡಲು ಶಾಶ್ವತ ನೀರಾವರಿ ಹೋರಾಟ ಸಮಿತಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಸಮಿತಿಯಿಂದ ಜಿಲ್ಲಾ ಕೇಂದ್ರ ರಾಮನಗರದಲ್ಲಿ ನ.27ಕ್ಕೆ ನಡೆಯುವ ಬೃಹತ್ ಪ್ರತಿಭಟನೆಗೆ ಸಮಿತಿ ಆಯೋಜಿಸಲಾಗಿದೆ.  
ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸದೇ ಹೋದಲ್ಲಿ ರಾಮನಗರ ಜಿಲ್ಲೆಯು ಮರುಭೂಮಿಗಿಂತ ಭೀಕರ ಜಲಕ್ಷಾಮಕ್ಕೆ ಗುರಿಯಾಗುವ ಆತಂಕವಿದೆ. ಹೀಗಾಗಿ ಸಮಸ್ತ ನಾಗರಿಕರು, ರೈತರು, ವಿದ್ಯಾರ್ಥಿಗಳು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು  ಶಾಶ್ವತ ನೀರಾವರಿ ಹೋರಾಟ ಸಮಿತಿ ರಾಮನಗರ ತಾಲೂಕು ಘಟಕದ ಅಧ್ಯಕ್ಷ ದೇವರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೀವನಾಧಾರ: ಮನುಷ್ಯ ಮತ್ತು ಪ್ರಾಣಿಗಳಿಗೆ ಜಲವೇ ಜೀವನಾಧಾರವಾಗಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಪ್ರಕೃತಿ ವಿಕೋಪ, ಕಾಡು ನಾಶ, ನಗರೀಕರಣದ ಹಾವಳಿಯ ಪರಿಣಾಮ ಮಳೆ ಕೊರತೆ ಎದುರಾಗಿದೆ. ಈ ಬೆನ್ನಲ್ಲೇ ಜಿಲ್ಲೆಯಲ್ಲಿ ಅಂತರ್ಜಲವೂ ಬರಿದಾಗಿದೆ. ಹೀಗಾಗಿ ಜಿಲ್ಲಾದ್ಯಂತ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ ಎಂದು ಅವರು ಹೇಳಿದರು.
ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗದ ಹೊರತು ನೀರಿನ ಸಮಸ್ಯೆ ನೀಗುವುದಿಲ್ಲ. ನೀರಾವರಿ ತಜ್ಞ ಪರಮಶಿವಯ್ಯ ನೀಡಿರುವ ವರದಿಯಲ್ಲಿ ಎತ್ತಿನ ಹೊಳೆ ಯೋಜನೆ ಜಾರಿಯಿಂದ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ. ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಿ, ಯೋಜನೆ ಶೀಘ್ರ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ದೇವರಾಜು ಆಗ್ರಹಿಸಿದರು.
ನ.27ರಂದು ನಗರದಲ್ಲಿ ನಡೆಯುತ್ತಿರುವ ಬೃಹತ್ ಹೋರಾಟಕ್ಕೆ ಆಗಮಿಸುವ ರೈತರಿಗೆ ಯಾವುದೇ ರೀತಿಯ ವಾಹನ ವ್ಯವಸ್ಥೆಯಿರುವುದಿಲ್ಲ. ರೈತರು ಮತ್ತು ನಾಗರಿಕರು ಸ್ವಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕಾಗಿದೆ. ಪ್ರತಿಭಟನೆಗೆ ಬರುವ ರೈತರಿಗೆ ಊಟದ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಚಿಕ್ಕಬೈರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು, ಖಜಾಂಚಿ ಕುಮಾರ್, ಜಿಲ್ಲಾ ಉಪಾಧ್ಯಕ್ಷ ರಾ.ಶಿ.ದೇವರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರೇಮ್‌ಕುಮಾರ್, ಉಪಾಧ್ಯಕ್ಷ ವೆಂಕಟಶಾಸ್ತ್ರಿ, ಸಂಚಾಲಕ ಗುರುಮೂರ್ತಿ, ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಣ್ಣ, ನಗರಸಭೆ ಮಾಜಿ ಸದಸ್ಯ ವೇದಮೂರ್ತಿ, ಸಂಘಟನಾ ಕಾರ್ಯದರ್ಶಿ ಅಪ್ಪಾಜಣ್ಣ, ಕೃಷ್ಣ ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.