ಬೆಂಗಳೂರು ಗ್ರಾಮಾಂತರ

ಸಾಹಿತ್ಯ ಸಾಮಾಜಿಕ ಸ್ಥಿತಿಯ ಕನ್ನಡಿ: ಬಿ.ಎಲ್. ರಾಮಕೃಷ್ಣ

Published On :

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ   ನ. 25
ಸಾಮಾಜಿಕ ಸ್ಥಿತಿಗತಿಗಳಿಗೆ ಸಾಹಿತ್ಯ ಕನ್ನಡಿ ಇದ್ದಂತೆ. ಮಾನವೀಯತೆಯ ಮೂಲ ಸಂವೇದನೆಗಳು ವೈಚಾರಿಕ ಪ್ರಜ್ಞೆಯನ್ನು ಪ್ರಚೋದಿಸುವ ನಿಟ್ಟಿನಲ್ಲಿ ಸಾಹಿತ್ಯದ ಮೂಲಕ ಅಭಿವ್ಯಕ್ತವಾಗಿರುತ್ತವೆ ಎಂದು ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಡಶಾಲೆ ವಿಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕನ್ನಡ ಜಾಗೃತ ಪರಿಷತ್ತಿನ ಸಹಯೋಗದಲ್ಲಿ  ಸೋಮವಾರ ಆರಂಭವಾದ   ಸಾಹಿತ್ಯ ಸಂಸ್ಕೃತಿ-ವಿಜ್ಞಾನ ಸಮಾಗಮ-2013  ಕಾರ್ಯಕ್ರಮ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಕೃತಿ ಚಿಂತನೆ ವಿಷಯದ ಕುರಿತು ಮಾತನಾಡಿದರು.
ಯಾವುದೇ ಸಂದರ್ಭದಲ್ಲೇ ಆಗಲೀ ಉಪದೇಶಕ್ಕಿಂತ ಪ್ರಾಯೋಗಿಕ ಅನುಷ್ಠಾನದ ಪರಿಕಲ್ಪನೆ ಹೆಚ್ಚು ಪ್ರಯೋಜನಕಾರಿ. ವಿಚಾರಗಳು ಆಲೋಚನೆಗಳನ್ನು ಪ್ರಚೋದಿಸದ ಹೊರತು ಪ್ರಯೋಜನವಿಲ್ಲ ವಿಚಾರವಂತಿಕೆ ಬೆಳೆಸದ ಹೊರತು ಭವಿಷ್ಯವಿಲ್ಲ.  ನಮ್ಮ ಆಲೋಚನೆಗಳಿಗೆ ಪೂರಕವಾಗಿ ಸತ್ಯದ ಹುಡುಕಾಟ ನಡೆಯಬೇಕು. ಸರಿ-ತಪ್ಪುಗಳ ಕುರಿತು ತರ್ಕಿಸುವ ಮನೋಭಾವ ಮಕ್ಕಳಲ್ಲಿ ಬರಬೇಕು. ಅದನ್ನು ಶೈಕ್ಷಣಿಕ ವಾತಾವರಣದಲ್ಲೇ ಉಂಟು ಮಾಡಿದರೆ ಒಳ್ಳೆಯದು. ವಿಚಾರದ ಚಿಂತನೆ ಮತ್ತು ಅಭಿವ್ಯಕ್ತಿಸುವ ಮಾತುಗಾರಿಕೆ ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಮೌಲ್ಯವನ್ನು ಪಡೆದಿದೆ ಎಂದು ಅವರು ವಿವರಿಸಿದರು.
ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ತ.ನ.ಪ್ರಭುದೇವ್ ಮಾತನಾಡಿ ಕನ್ನಡ ನಾಡು-ನುಡಿಯ ಅಭಿರುಚಿಯನ್ನು ಮಕ್ಕಳ ಮನಸ್ಸಿಗೆ ಬಿತ್ತುವಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಪಾತ್ರ ಹಿರಿದು. ಜಾಗೃತ ಪರಿಷತ್ತು ಮತ್ತು ಸಾಹಿತ್ಯ ಪರಿಷತ್ತು ಈ ಬಾರಿ 8 ಶಾಲೆಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಗಣನೀಯ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಹಿರಿಯ ಸಾಹಿತಿ ಎಂ.ಇ.ಖಲೀಲುಲ್ಲಾಖಾನ್ ಮಾತನಾಡಿ ಸಾಹಿತ್ಯ ಮತ್ತು ವಿಜ್ಞಾನದ ವಿಷಯಗಳ ಬಗ್ಗೆ ಉಪನ್ಯಾಸ ಹಾಗೂ ಸೃಜನಶೀಲ ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದ್ದು, ಕನ್ನಡವನ್ನು ಕ್ರಿಯಾತ್ಮಕವಾಗಿ ಕಟ್ಟುವ ನಿಟ್ಟಿನಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದರು. ಬೆಂ.ಗ್ರಾ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವೈಚಾರಿಕ ಚಿಂತನೆಗಳು ಸದಾ ಜೀವಂತವಾಗಿರಬೇಕು. ಆಗ ಮಾತ್ರ ನಮ್ಮಲ್ಲಿ ಚಿಂತನಾ ಪ್ರವೃತ್ತಿ ಹೆಚ್ಚಿರುತ್ತದೆ. ಮಾನವೀಯತೆ ಮತ್ತು ವಿಜ್ಞಾನ ಬೆರೆತಾಗ ಸಂಸ್ಕೃತಿ ಉಳಿಯುತ್ತದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಆರ್. ರವಿಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಪ.ಪೂ.ಕಾಲೇಜು ಉಪಪ್ರಾಂಶುಪಾಲ ಎಂ.ಸುಧೀಂದ್ರನಾಥ್, ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ, ತಾ.ಕಸಾಪ ಗೌ.ಆಧ್ಯಕ್ಷ ಡಿ.ಶ್ರೀಕಾಂತ್, ಗೌ.ಕಾರ್ಯದರ್ಶಿ ಎಚ್.ಎನ್.ಪ್ರಕಾಶ್, ಕೋಶಾಧ್ಯಕ್ಷ ಎಂ.ಚಿಕ್ಕಣ್ಣ, ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ಕಸಾಪ ಪದಾಧಿಕಾರಿ ನೇತ್ರಾವತಿ, ಯುವಕವಿ ಸಂತೋಷ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.