ಬೆಂಗಳೂರು ಗ್ರಾಮಾಂತರ

ಎಂಇಎಸ್ ಶಾಸಕರ ಪುಂಡಾಟ ಖಂಡಿಸಿ ಪ್ರತಿಭಟನೆ

Published On :

ದೊಡ್ಡಬಳ್ಳಾಪುರ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರು ಕರ್ನಾಟಕ ಸರ್ಕಾರದ ಬಗ್ಗೆ ಅವಹೇಳನ ಮಾಡಿರುವುದೂ ಅಲ್ಲದೆ, 4 ಜನ ಎಂಇಎಸ್ ಶಾಸಕರಿದ್ದಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು ಎಂಬ ಉದ್ಧಟತನದ ಹೇಳಿಕೆ ನೀಡಿರುವುದನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಬೆಳಗಾವಿ ಅಧಿವೇಶನದ ಆರಂಭದ ದಿನವೇ ಮಹಾಮೇಳಾವ ಹಮ್ಮಿಕೊಂಡು ಕನ್ನಡಿಗರನ್ನು ಪ್ರಚೋದಿಸುವ ಕೆಲಸವನ್ನು ಎಂಇಎಸ್ ಮಾಡಿದೆ. ಜೊತೆಗೆ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಕೀಳು ಶಬ್ದಗಳನ್ನು ಬಳಸಿದ್ದಾರೆ. ಇಬ್ಬರು ಶಾಸಕರ ಮರಾಠಿ ಶಕ್ತಿ ಕಂಡು ರಾಜ್ಯ ಸರ್ಕಾರ ಭಯಭೀತವಾಗಿದೆ ಎಂಬ ಆಟಾಟೋಪ ಪ್ರದರ್ಶಿಸಿರುವುದು ಅವರ ದುರಭಿಮಾನಕ್ಕೆ ಸಾಕ್ಷಿ. ಬೆಳಗಾವಿಯಲ್ಲಿ ಮರಾಠಿ ಪುಂಡಾಟಿಕೆ ನಡೆಯದು. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಬೆಳಗಾವಿ ಎಂದೆಂದೂ ಕನ್ನಡದ ಸ್ವತ್ತು. ಕರ್ನಾಟಕ ಸರ್ಕಾರದ ಶಾಸಕರಾಗಿ ಸರ್ಕಾರಕ್ಕೇ ಅಗೌರವ ತೋರಿರುವ ಈ ಇಬ್ಬರು ಮರಾಠಿ ಶಾಸಕರನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿಗೆ ಬಂದಾಗ ನಮ್ಮನ್ನು ತಡೆಯುವ ಶಕ್ತಿ ಕನ್ನಡ ಸಂಘಟನೆಗಳಿಗೆ ಇದೆಯೇ ಎಂದು ಸವಾಲು ಹಾಕಿರುವ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲಗೆ ಕನ್ನಡ ಸಂಘಟನೆಗಳು ತಕ್ಕ ಉತ್ತರ ನೀಡಲಿವೆ. ಮರಾಠಿ ಭಾಷೆಯಲ್ಲಿ ಸುತ್ತೋಲೆಗಳನ್ನು ಹೊರಡಿಸಬೇಕು ಎಂದು ಆಗ್ರಹಿಸಿ ಸಭಾತ್ಯಾಗ ಮಾಡಿರುವ ಅವರ ಕುತಂತ್ರ ಫಲಿಸದು. ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಅಗೌರವ ತೋರುವ ದುಸ್ಸಾಹಸವನ್ನು ಪದೇ ಪದೇ ಮಾಡುತ್ತಿರುವ ಎಂಇಎಸ್ ಅನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು. ರಾಜ್ಯ ಸರ್ಕಾರ ಭಾಷೆ-ಸಂಸ್ಕೃತಿ, ಈ ನೆಲದ ಬಗ್ಗೆ ಕೀಳು ಭಾವನೆ ಪ್ರದರ್ಶಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸಂಭಾಜಿ ಮತ್ತು ಅರವಿಂದ ಪಾಟೀಲ ಕನ್ನಡ ನೆಲದ ಅನ್ನ-ನೀರು-ಗಾಳಿಯಿಂದ ಬದುಕಿದ್ದಾರೆ. ಆದಾಗ್ಯೂ ರಾಜಕೀಯ ಹಿತ ಸಾಧನೆಗೆ ಅತಿರೇಕದ ಮಾತುಗಳನ್ನಾಡುತ್ತಿರುವುದು ಖಂಡನೀಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.