ಶಾಶ್ವತ ನೀರಾವರಿಗಾಗಿ ಭುಗಿಲೆದ್ದ ಆಕ್ರೋಶ
ಕ.ಪ್ರ.ವಾರ್ತೆ ರಾಮನಗರ ನ.27
ಬಯಲುಸೀಮೆಯ ಬರದ ನಾಡು ರಾಮನಗರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗಾಗಿ ಹೋರಾಟ ಭುಗಿಲೆದ್ದಿದೆ. ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ ಸಂಘ ಸಹಿತ ವಿವಿಧ ಸಂಘಟನೆಗಳು, ರೈತರು, ಪಕ್ಷಾತೀತವಾಗಿ ರಾಜಕೀಯ ಮುಖಂಡರು, ವಿವಿಧ ಸಮುದಾಯದ ಸಹಸ್ರಾರು ಮಂದಿ ನಗದಲ್ಲಿ ಬುಧವಾರ ಬೀದಿಗಿಳಿದು ಹೋರಾಟ ನಡೆಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಕಂದಾಯ ಭವನದ ಎದುರು ಧರಣಿ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಮಠಾಧೀಶರು, ಪ್ರಮುಖ ಹೋರಾಟಗಾರರು ಮಾತನಾಡಿದರು. ನಂತರ ಕೈಗೊಳ್ಳಲಾದ ನಿರ್ಣಯ ಹಾಗೂ ಮನವಿಯನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪಕ್ಷಾತೀತವಾದ ಈ ಚಳವಳಿಯಲ್ಲಿ ಯಾವುದೇ ಪಕ್ಷ, ಮುಖಂಡರ ಪರವಾದ ಘೋಷಣೆಗಳಿಗೆ ಆಸ್ಪದವಿರಲಿಲ್ಲ. ಶಾಶ್ವತ ನೀರಾವರಿ ಹೋರಾಟ ಸಮಿತಿ ಹೊರತದಾದ ಸಂಘಟನೆಗಳ ಬ್ಯಾನರ್, ಪ್ರಚಾರ ಸಾಮಗ್ರಿಗಳೂ ಇರಲಿಲ್ಲ. ಸಹಸ್ರಾರು ರೈತರು, ಪ್ರತಿಭಟನಾಕಾರರ ಕೂಗು ಶಾಶ್ವತ ನೀರಾವರಿ ಬೇಕು ಎನ್ನುವುದಷ್ಟೇ ಆಗಿತ್ತು.
ಸರ್ಕಾರಗಳ ದಬ್ಬಾಳಿಕೆ: ಬಯಲುಸೀಮೆ ಪ್ರದೇಶವು ಇನ್ನು 3-4 ದಶಕದಲ್ಲಿ ಮರುಭೂಮಿ ಆಗಲಿದೆ ಎನ್ನುವುದನ್ನು ಸಂಶೋಧನೆಗಳೇ ಹೇಳಿವೆ. ಹೀಗಾಗಿ ಸರ್ಕಾರವು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ವಿಷಯದಲ್ಲಿ ತಾರತಮ್ಯ, ರಾಜಕಾರಣವನ್ನು ಬಿಟ್ಟು ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ನಮ್ಮನ್ನಾಳಿದ ಬ್ರಿಟಿಷರು ದಬ್ಬಾಳಿಕೆ ನಡೆಸಿ ಸ್ವಾತಂತ್ರ್ಯ ಕೊಟ್ಟು ಹೋಗಿದ್ದಾರೆ. ಆದರೆ, ನಮ್ಮನ್ನಾಳುತ್ತಿರುವ ಸರ್ಕಾರಗಳು ಬ್ರಿಟಿಷರನ್ನೂ ಮೀರಿಸುವಂತೆ ದಬ್ಬಾಳಿಕೆಗೆ ಇಳಿದಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಆರು ದಶಕ ಕಳೆದಿದ್ದರೂ ಜನತೆಗೆ ಶುದ್ಧ, ಸಮರ್ಪಕ ಕುಡಿಯುವ ನೀರು ಪೂರೈಸುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಅವರು ಕಿಡಿ ಕಾರಿದರು.
ಬಯಲುಸೀಮೆಯ ಆರು ಜಿಲ್ಲೆಗಳ ನೀರಿನಲ್ಲಿ ಫ್ಲೋರೈಡ್ ಸಹಿತ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಹೀಗಾಗಿ ಈ ಭಾಗದ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಸಾಂಪ್ರದಾಯಿಕ ಜಲ ಮೂಲಗಳಿಂದ ಶಾಶ್ವತ ನೀರಾವರಿ ಕಲ್ಪಿಸುವುದೊಂದೇ ಪರಿಹಾರ. ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಾತಿ ರಾಜಕಾರಣಕ್ಕೆ ಬಲಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷದ ಸರ್ಕಾರಗಳೂ ಜಾತಿ ರಾಜಕಾರಣದಲ್ಲೇ ಕಾಲ ಕಳೆಯುತ್ತಿವೆ. ಸರ್ಕಾರ ನೀಡುತ್ತಿರುವ ಯಾವ ಭಾಗ್ಯದ ಭಿಕ್ಷೆಯೂ ನಮಗೆ ಬೇಡವಾಗಿದೆ. ನೆಮ್ಮದಿ ಮತ್ತು ಸ್ವಾಭಿಮಾನದಿಂದ ಬದುಕಲು ಶಾಶ್ವತ ನೀರಾವರಿ ಜಾರಿಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಶಾಶ್ವತ ಹೋರಾಟ ಸಮಿತಿ ಮುಖಂಡ ಸಿ.ಪುಟ್ಟಸ್ವಾಮಿ ಹೇಳಿದರು. ರಾಜ್ಯ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು, ಆಹಾರ ಪದಾರ್ಥ ಸಹಿತ ಅವಶ್ಯಕ ವಸ್ತುಗಳು ಆಸುಪಾಸಿನ ಜಿಲ್ಲೆಗಳಿಂದಲೇ ಸರಬರಾಜಾಗುತ್ತಿವೆ. ಇಷ್ಟಾಗಿಯೂ ಸರ್ಕಾರವು ಬೆಂಗಳೂರು ಆಸುಪಾಸಿನ ಜಿಲ್ಲೆಗಳಿಗೆ ಶಾಶ್ವತ ನೀರಾವರಿ, ಅಗತ್ಯ ಯೋಜನೆಗಳ ಅನುಷ್ಠಾನದ ನಿಟ್ಟಿನಲ್ಲಿ ಕನಿಷ್ಠ ಕಾಳಜಿ ತೋರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕುಡಿನೀರು ಮಠದ ಶ್ರೀ ಶಿವರುದ್ರಸ್ವಾಮೀಜಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಆಂಜನೇಯ, ರಾಮನಗರ ಸಮಿತಿ ಪದಾಧಿಕಾರಿಗಳಾದ ಸು.ತ.ರಾಮೇಗೌಡ, ಮಾರೇಗೌಡ, ವಾಸು, ಬೈರೇಗೌಡ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಕಾಂಗ್ರೆಸ್ ಮುಖಂಡರಾದ ಮರಿದೇವರು, ಎ.ಮಂಜುನಾಥ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶ್ರೀಧರ್ ಹೊಸೂರು, ಡಿ.ಜಿ.ಕುಮಾರ್, ಸತ್ಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

