ರೈತನ ಕಷ್ಟ ನಿವಾರಣೆಗೆ ರಾಜಕೀಯ ಬೇಡ
ಕ.ಪ್ರ.ವಾರ್ತೆ ರಾಮನಗರ ನ. 28
ಒಂದರ ಮೇಲೊಂದು ಸಮಸ್ಯೆಗೆ ಸಿಲುಕಿ ನಲುಗಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ವಿಷಯದಲ್ಲಿ ಪಕ್ಷಪಾತ, ರಾಜಕಾರಣಕ್ಕೆ ಆಸ್ಪದ ನೀಡದೆ ಸಂಘಟಿತ ಪ್ರಯತ್ನ ಅಗತ್ಯ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕೂಟಗಲ್ ಹೋಬಳಿಯ ಶ್ಯಾನುಭೋಗನಹಳ್ಳಿಯಲ್ಲಿ ಗುರುವಾರ ರಾಮನಗರ ತಾಲೂಕು ವ್ಯಾಪ್ತಿಯಲ್ಲಿ ಕಾಲುಬಾಯಿ ಜ್ವರಕ್ಕೆ ಬಲಿಯಾದ ರಾಸುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಧನದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮನಗರವೇ ಮೊದಲು: ರಾಜ್ಯದಲ್ಲಿ ಕಾಲುಬಾಯಿ ಜ್ವರಕ್ಕೆ 7700 ರಾಸುಗಳು ಬಲಿಯಾಗಿವೆ. ಈ ಪೈಕಿ ರಾಮನಗರ ಜಿಲ್ಲೆಯಲ್ಲೇ 2176 ರಾಸುಗಳು ಸೇರಿವೆ. ರಾಮನಗರ ತಾಲೂಕಿನಲ್ಲಿ 418 ಮತ್ತು ಚನ್ನಪಟ್ಟಣದಲ್ಲಿ 1097 ರಾಸುಗಳ ಸಾವು ಸಂಭವಿಸಿದೆ. ರಾಜ್ಯದಲ್ಲೇ ಮೊದಲಿಗೆ ರಾಮನಗರ ತಾಲೂಕಿನ ರೈತರಿಗೆ ಈ ಪರಿಹಾರ ವಿತರಣೆಯಾಗುತ್ತಿದೆ ಎಂದು ಸುರೇಶ್ ತಿಳಿಸಿದರು.
ಜಿಲ್ಲೆಗೆ ರು.2.55 ಕೋಟಿ ಬಿಡುಗಡೆ: ರಾಜ್ಯ ಸರ್ಕಾರವು ಪರಿಹಾರಕ್ಕೆ ಮೀಸಲಿಟ್ಟ ರು.5 ಕೋಟಿ ಪೈಕಿ ರಾಮನಗರ ಜಿಲ್ಲೆಗೆ ರು.2.55 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ರಾಮನಗರ ತಾಲೂಕಿಗೆ ಸಿಕ್ಕಿರುವ ಪಾಲು ರು.45.97 ಕೋಟಿ. ಕರುಗಳಿಗೆ ರು.4 ಸಾವಿರ, ಪಡ್ಡೆಗಳಿಗೆ ರು.7 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದರು.
1 ರಿಂದ 2 ವರ್ಷದೊಳಗಿನ ರಾಸುಗಳಿಗೆ ರು.10 ಸಾವಿರ, ಹಾಲು ಕರೆಯುವ ಹಸುಗಳಿಗೆ ರು.25 ಸಾವಿರ ಪರಿಹಾರ ನೀಡಲಾಗುತ್ತಿದೆ.
ಈ ಪರಿಹಾರವನ್ನು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಹಾಲು ಮಹಾ ಮಂಡಳ(ಕೆಎಂಎಫ್) ಜಂಟಿಯಾಗಿ ಮಂಜೂರು ಮಾಡಿವೆ. ವಿಮೆ ಹೊಂದಿದ ರಾಸುಗಳಿಗೆ ವಿಮಾ ಸಂಸ್ಥೆಗಳಿಂದ ಆದಷ್ಟು ಜರೂರಾಗಿ ವಿಮೆ ಮೊತ್ತ ಬಿಡುಗಡೆ ಮಾಡಿಸಲಾಗುವುದು ಎಂದು ಅವರು ಹೇಳಿದರು.
ಪ್ರಾಮಾಣಿಕ ಪ್ರಯತ್ನ: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವೆ. ಬಡವರು, ರೈತರು, ಕೂಲಿ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ ನರೇಗಾ ಯೋಜನೆ ಕುರಿತು ಜನ ಜಾಗೃತಿ ಮೂಡಿಸಬೇಕು ಎಂದು ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನೀರಾವರಿ ಅನುಷ್ಠಾನಕ್ಕೆ ಕ್ರಮ: ಬರಪೀಡಿತ ರಾಮನಗರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ.ರಾಮನಗರ ಮತ್ತು ಕನಕಪುರ ತಾಲೂಕುಗಳ 133 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಲಿದೆ ಎಂದರು.
ಎತ್ತಿನ ಹೊಳೆ ಯೋಜನೆಯಿಂದ ಜಿಲ್ಲೆಗೆ 2.5 ಟಿಎಂಸಿ ನೀರು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ರು.750 ಕೋಟಿ ಅನುದಾನ ಮೀಸಲಾಗಿದೆ ಎಂದರು. ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಮಾತನಾಡಿದರು.
ಇದೇ ವೇಳೆ ಶ್ಯಾನುಭೋಗನಹಳ್ಳಿಯಲ್ಲಿ ರು.25 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರು ಘಟಕಕ್ಕೆ ಸಂಸದ ಸುರೇಶ್ ಶಂಕುಸ್ಥಾಪನೆ ನೆರವೇರಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ದೇವರಾಜು, ತಾಪಂ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಪಂ ಸದಸ್ಯೆ ಮಂಜುಳಾ ಮರಿದೇವರು, ತಾಪಂ ಸದಸ್ಯ ಜಯರಾಮ್, ಕೆಪಿಸಿಸಿ ಸದಸ್ಯರಾದ ಕೆ.ರಮೇಶ್, ಎ.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಮರಿದೇವರು, ಎ.ಮಂಜುನಾಥ್, ರಘುನಂದನ್ ರಾಮಣ್ಣ, ಕಾಂತರಾಜಪಟೇಲ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

