ಸಿಎನ್ಆರ್ ರಾವ್ ದೇಶದ ಹೆಮ್ಮೆ
ದೊಡ್ಡಬಳ್ಳಾಪುರ: ಭಾರತದ ನ್ಯಾನೋ ತಂತ್ರಜ್ಞಾನ ಪಿತಾಮಹ ಎನಿಸಿರುವ ವಿಜ್ಞಾನಿ ಡಾ.ಸಿಎನ್ಆರ್ ರಾವ್ ಚಿಂತನಶೀಲ ವೈಜ್ಞಾನಿಕ ಸಂಶೋಧಕ. ಜಗತ್ತು ಗುರುತಿಸುವ ಸಾಧನೆ ಮಾಡುವ ಮೂಲಕ ದೇಶದ ಪ್ರತಿಷ್ಠೆ ಎತ್ತಿಹಿಡಿದ ಅದ್ವಿತೀಯ ಸಾಧಕ ಮಾತ್ರವಲ್ಲ, ಅವರು ಭಾರತದ ಹೆಮ್ಮೆ ಎಂದು ತಾಲೂಕು ಕಸಾಪ ಗೌರವಾಧ್ಯಕ್ಷ ಡಿ.ಶ್ರೀಕಾಂತ ಅಭಿಪ್ರಾಯಪಟ್ಟರು.
ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಕನ್ನಡ ಹಬ್ಬ ಮತ್ತು ಸಾಹಿತ್ಯ ಸಂಸ್ಕೃತಿ ವಿಜ್ಞಾನ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು 'ಭಾರತರತ್ನ' ಸಿಎನ್ಆರ್ ರಾವ್ ಕುರಿತು ಅವರು ಮಾತನಾಡಿದರು.
ವಿಜ್ಞಾನದ ಅವಿಸ್ಮರಣೀಯ ಕೊಡುಗೆ: ವಿದ್ಯಾರ್ಥಿ ದೆಸೆಯಿಂದಲೇ ಹೊಸತನದ ಆಲೋಚನೆಗೆ ಮನಸ್ಸನ್ನು ಕೇಂದ್ರೀಕರಿಸಿದ ಅವರು ಕಾರಣಗಳ ಹುಡುಕಾಟದಲ್ಲೇ ಹೊಸ ವಿಚಾರಗಳ ಶೋಧನೆಗೆ ತೊಡಗಿದವರು. ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ದಾಟಿ ಇಂದಿಗೂ ವಿಶ್ವಾತ್ಮಕ ವಿಜ್ಞಾನದ ಅನೂಹ್ಯ ಕಲ್ಪನೆಗಳ ಸಾಕಾರಕ್ಕೆ ಶ್ರಮಿಸುತ್ತಿದ್ದಾರೆ. ರಸಾಯನ ವಿಜ್ಞಾನದ ಅವಿಸ್ಮರಣೀಯ ಕೊಡುಗೆ ಅವರನ್ನು ಭಾರತರತ್ನವಾಗಿ ಗುರ್ತಿಸಿದೆ. ಅಂತಹವರು ವಿದ್ಯಾರ್ಥಿಗಳ ಆದರ್ಶವಾಗಬೇಕು ಎಂದರು.
ಮೂಢನಂಬಿಕೆಗಳು ಮತ್ತು ವೈಚಾರಿಕತೆ ಕುರಿತು ಮಾತನಾಡಿದ ಉಪನ್ಯಾಸಕ ಬಿ.ಕೆ.ಮಂಜುನಾಥ್, ಹಲವು ಬಾರಿ ನಾವು ಕಂದಾಚಾರಗಳ ಬಲೆಯಲ್ಲೇ ವ್ಯವಸ್ಥಿತವಾದ ಬದುಕನ್ನು ಕಟ್ಟಿಕೊಂಡಿರುತ್ತೇವೆ. ವಿಜ್ಞಾನ ಕಂದಾಚಾರಗಳನ್ನೂ ಮೀರಿದ ಬದುಕನ್ನು ಕಟ್ಟಿಕೊಡುತ್ತದೆ. ಆದರೆ ನಮ್ಮ ನಂಬಿಕೆಗಳೇ ಮೌಢ್ಯ ಬೆಳೆಸಿದರೆ ಅತ್ಯಂತ ಅಪಾಯಕಾರಿ. ಸರ್ಕಾರ ಜಾರಿಗೆ ತರಲು ಹೊರಟಿರುವ ಮೌಢ್ಯಾಚರಣೆ ನಿಷೇಧ ಮಸೂದೆಗೆ ಪರ-ವಿರೋಧ ಭಾವನೆಗಳು ವ್ಯಕ್ತವಾಗುತ್ತಿರುವುದೇ ಪ್ರಶ್ನಾರ್ಹ. ವೈಜ್ಞಾನಿಕ ಯುಗದಲ್ಲಿ ಯುವ ಮನಸ್ಸುಗಳು ಮೌಢ್ಯದ ಪ್ರತಿಬಂಧಕ ಶಕ್ತಿಗಳಾಗಿ ಕೆಲಸ ಮಾಡಬೇಕು. ಆಗ ಮಾತ್ರ ಸುಸಜ್ಜಿತ ಸುಶಿಕ್ಷಿತ ಮತ್ತು ವೈಚಾರಿಕ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ ಎಂದರು.
ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ಇ.ಖಲೀಲುಲ್ಲಾಖಾನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡದ ಚಿಂತನೆಗಳು ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಉಳಿದಿವೆ. ನೆಲದ ಸಂಸ್ಕೃತಿಯ ಜೊತೆ ಜೊತೆಗೆ ಭಾಷೆ ಮತ್ತು ಬದುಕಿನ ಸಂಸ್ಕೃತಿ ಬೆಳೆದಿದೆ. ಕನ್ನಡದ ಮೂಲಕ ಜಾಗತಿಕ ಜ್ಞಾನವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ಹಂಚುವ ಕೆಲಸ ಆಗಬೇಕು. ಆಗಮಾತ್ರ ಭಾಷೆ ಬಹುಕಾಲ ಉಳಿಯಬಲ್ಲದು ಎಂದು ಅವರು ಪ್ರತಿಪಾದಿಸಿದರು.
ಮುಖ್ಯ ಶಿಕ್ಷಕಿ ಎಚ್.ಎಸ್.ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ರವಿಕಿರಣ್, ಕನ್ನಡ ಅಧ್ಯಾಪಕ ಜಿ.ಎಸ್.ಚೌಧರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

