ಕಾಮಣ್ಣನ ಹಬ್ಬಕ್ಕೆ ಪರಂಪರೆಯ ಝಲಕ್
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಕಾಮಣ್ಣನ ಹಬ್ಬಕ್ಕೆ ಪರಂಪರೆಯ ಝಲಕ್ ಈ ಬಾರಿ ಜೋರಾಗಿದೆ. ಜೊತೆಗೆ ಲೋಕ ಕಲ್ಯಾಣದ ಸಂದೇಶಕ್ಕೆ ಸಮಕಾಲೀನತೆ ಮತ್ತು ಆಧುನಿಕತೆಯ ಸ್ಪರ್ಶ ಸಹ ದೊರೆತಿರುವುದು ಈ ಬಾರಿಯ ಹೈಲೈಟ್ಸ್.
ಜಗತ್ತಿನ ಜೀವನ ಕ್ರಮವನ್ನೇ ಅಲ್ಲೋಲ-ಕಲ್ಲೋಲ ಮಾಡಿ ಬಿಡುವ ಕಾಮನನ್ನು ಹೋಳಿ ಹುಣ್ಣಿಮೆಯ ದಿನ ದಹಿಸುವುದು ಲೋಕಕಲ್ಯಾಣಾರ್ಥ. ಅದನ್ನು ಮಾಡಿದವರು ಸಾಕ್ಷಾತ್ ಪರಮೇಶ್ವರ. ಅದನ್ನೀಗಲೂ ಜನ ಧಾರ್ಮಿಕತೆಯ ಲೇಪ ಹಚ್ಚಿ ಆಚರಿಸಿಕೊಂಡು ಬರುತ್ತಿದ್ದಾರೆ.
ಹೋಳಿ ಹುಣ್ಣಿಮೆಯ ದಿನ ನಡೆವ ಕಾಮದಹನ ಪೌರಾಣಿಕ ಮಹತ್ವವುಳ್ಳ ಆಚರಣೆ. ನಂತರ ಬರುವ ಅಮಾವಾಸ್ಯೆಯ ದಿನ ಕಾಮನ ಸ್ಮರಣೆ ನಡೆಯುತ್ತದೆ. ಅದನ್ನೇ ಜನ ಕಾಮಣ್ಣನನ್ನು ತಣ್ಣಗೆ ಮಾಡುವ ಹಬ್ಬ ಎಂದು ಕರೆಯುವುದು ಇಲ್ಲಿನ ವಾಡಿಕೆ.
ವಿಶೇಷ ಮಹತ್ವ: ದೊಡ್ಡಬಳ್ಳಾಪುರದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ಇದು ನಡೆಯುತ್ತದೆ. ಕಾಮದಹನ ನಡೆಸಿರುವ ಸ್ಥಳದಲ್ಲಿ ಕಾಮಣ್ಣನ ಬೃಹತ್ ಮಣ್ಣಿನ ಮೂರ್ತಿಯ ಚಿತ್ತಾರ ಬಿಡಿಸಲಾಗುತ್ತದೆ. ನೆಲದ ಮೇಲೆ ಜೇಡಿಮಣ್ಣಿನಿಂದ ತಯಾರಾಗುವ ಈ ಮೂರ್ತಿಗಳು ಬಣ್ಣದ ಅಲಂಕಾರ, ವಿವಿಧ ಬಗೆಯ ಚಿತ್ತಾರಗಳ ಮೂಲಕ ಗಮನ ಸೆಳೆಯುತ್ತವೆ. ಕೆಲವೆಡೆ 5 ಅಡಿಗಳಿಂದ 30-35 ಅಡಿ ಉದ್ದಗಲದ ಮೂರ್ತಿ ಚಿತ್ತಾರಗಳನ್ನು ಮಾಡಲಾಗುತ್ತದೆ. ಈ ಚಿತ್ತಾರ ಬಿಡಿಸುವುದು ಸಾಧಾರಣ ಕೆಲಸವಲ್ಲ. ಇದಕ್ಕೆ ಕೌಶಲ್ಯಪೂರ್ಣ ತಾಂತ್ರಿಕತೆ ಅಗತ್ಯ. ಅದಕ್ಕಾಗಿಯೇ ಕೆಲವು ಮಂದಿ ತಜ್ಞರು ದೊಡ್ಡಬಳ್ಳಾಪುರದಲ್ಲಿದ್ದಾರೆ. ಯಾವುದೇ ಅಚ್ಚು-ನಕಲು ಇಲ್ಲಿ ಬಳಸಲಾಗುವುದಿಲ್ಲ. ಸ್ವಾಭಾವಿಕವಾಗಿಯೇ ನಿರ್ಮಾಣವಾಗುತ್ತದೆ.
ಬೃಹತ್ ಮೂರ್ತಿ: ಇಲ್ಲಿನ ರಂಗಪ್ಪ ವೃತ್ತದಲ್ಲಿರುವ ಶ್ರೀಬಾಲಾಂಜನೇಯ ವ್ಯಾಯಾಮ ಶಾಲೆ ಯುವಕರ ಬಳಗದ ನೇತೃತ್ವದಲ್ಲಿ ಊರಿನಲ್ಲೇ ಅತಿ ದೊಡ್ಡದು ಎನ್ನಬಹುದಾದ ಕಾಮಣ್ಣನ ಮೂರ್ತಿಯನ್ನು ಜೇಡಿಮಣ್ಣನ್ನು ಬಳಸಿ ಬರೆಯಲಾಗುತ್ತದೆ. ಇದನ್ನು ಹಲವು ತಲೆಮಾರುಗಳ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಕುಶಲಕರ್ಮಿ ವಯೋವೃದ್ಧ ಈ ಚಿತ್ತಾರದ ತಂತ್ರಜ್ಞರಾಗಿದ್ದರು. ಅವರ ಮೂಲಕ ಶಿಷ್ಯವೃಂದಕ್ಕೂ ಈ ಕಲೆ ಮುಂದುವರೆದಿದೆ. ಹೀಗೇ ಯುವಪಡೆ ತರಬೇತಿ ಪಡೆದುಕೊಂಡು ಸಂಸ್ಕೃತಿಯ ಮುನ್ನಡೆಗೆ ಕಂಕಣ ತೊಟ್ಟಿದೆ.
ಈ ಬಾರಿ ವಿಶೇಷ: ರಂಗಪ್ಪ ವೃತ್ತದಲ್ಲಿ ಈ ಬಾರಿಯೂ ಬೃಹತ್ ಕಾಮಣ್ಣನನ್ನು ನಿರ್ಮಿಸಲಾಗಿದೆ. ಜೊತೆಗೆ ಇಲ್ಲಿನ ಗಾಣಿಗರ ಪೇಟೆ, ಎಲೇಪೇಟೆ, ಕುಚ್ಚಪ್ಪನಪೇಟೆ, ತೇರಿನಬೀದಿ, ಶಾಂತಿನಗರ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ತಾಲೂಕು ಕಚೇರಿ ವೃತ್ತ, ಕಚೇರಿಪಾಳ್ಯ, ಚೈತನ್ಯನಗರ, ದೇವರಾಜನಗರ, ವಿದ್ಯಾನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಮಣ್ಣನ ಚಿತ್ತಾರ ಬಿಡಿಸಲಾಗಿದೆ. ಬಣ್ಣ-ಜೇಡಿಮಣ್ಣುಗಳಲ್ಲಿ ಚಿತ್ತಾರವನ್ನು ಬಿಡಿಸಲಾಗಿದೆ. ಅದೇ ರೀತಿ ಸ್ಥಳೀಯ ಸಮಸ್ಯೆಗಳು, ವಾಸ್ತವದ ಸ್ಥಿತಿಗತಿಗಳನ್ನು ಆಧಾರವಾಗಿಟ್ಟುಕೊಂಡು ಕಾಮಣ್ಣನಿಗೆ ವಿವಿಧ ಬಗೆಯ ಚಿತ್ತಾರಗಳನ್ನು ಮಾಡುವುದುಂಟು.
ಸುಸ್ವರ ಸಂಗೀತ ಧಾರೆ
ದೊಡ್ಡಬಳ್ಳಾಪುರ: ಇಲ್ಲಿನ ಸುಸ್ವರ ಟ್ರಸ್ಟ್ ವತಿಯಿಂದ ಸಂಗೀತ ಕಾರ್ಯಕ್ರಮ ಚೌಡೇಶ್ವರಿಗುಡಿ ಬೀದಿಯಲ್ಲಿರುವ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ವಿದುಷಿ ಅಂಜಲಿ ಶ್ರೀರಾಂ ಅವರ ಹಾಡುಗಾರಿಕೆ ನಡೆಯಿತು. ಕರ್ನಾಟಕ ಸಂಗೀತದ ವಿವಿಧ ಮಟ್ಟುಗಳನ್ನು ಯಶಸ್ವಿಯಾಗಿ ಪ್ರಸ್ತುತ ಪಡಿಸಿದ ಅವರು ದಾಸಸಾಹಿತ್ಯದ ಹಲವು ಶ್ರೇಷ್ಠ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತಾಸಕ್ತರನ್ನು ರಂಜಿಸಿದರು. ಪ್ರಬುದ್ಧ ಗಾಯನ ಮತ್ತು ಉತ್ತಮ ಅಭಿವ್ಯಕ್ತಿಯೊಂದಿಗೆ ಕಚೇರಿ ಯಶಸ್ವಿಯಾಗಿ ಮೂಡಿಬಂತು. ವಿದ್ವಾನ್ ವಿಠಲ್ ರಂಗನ್ (ಪಿಟೀಲು), ವಿದ್ವಾನ್ ಬಿ.ಸಿ.ಮಂಜುನಾಥ್ (ಮೃದಂಗ), ಎಸ್.ಎನ್.ನಾರಾಯಣಸ್ವಾಮಿ (ಘಟಂ) ವಾದ್ಯ ಸಹಕಾರ ನೀಡಿದರು. ಸುಸ್ವರ ಟ್ರಸ್ಟ್ನ ಪದಾಧಿಕಾರಿಗಳು, ದೊಡ್ಡಬಳ್ಳಾಪುರದ ಹತ್ತಾರು ಸಂಗೀತಾಸಕ್ತರು ಭಾಗವಹಿಸಿದ್ದರು.
ಶ್ರದ್ಧಾಂಜಲಿ: ಕಚೇರಿ ಆರಂಭಕ್ಕೂ ಮುನ್ನ ಕೀರ್ತಿಶೇಷ ಸಂಗೀತಜ್ಞ ಡಾ.ಆರ್.ಕೆ.ಶ್ರೀಕಂಠನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರೀಕಂಠನ್ ಅವರ ಸಂಗೀತ ಕ್ಷೇತ್ರದ ಗಣನೀಯ ಸಾಧನೆಗಳು ಮತ್ತು ಕರ್ನಾಟಕ ಸಂಗೀತಕ್ಕೆ ಅವರು ಕೊಟ್ಟ ಶ್ರೇಷ್ಠ ಕೊಡುಗೆಯ ಕುರಿತು ಸುಸ್ವರ ಟ್ರಸ್ಟ್ನ ಎ.ಆರ್.ನಾಗರಾಜನ್ ಮತ್ತು ಹಿರಿಯ ಪತ್ರಕರ್ತ ಪಿ.ಜಿ.ಸುಬ್ಬರಾವ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

