ಸರ್ಜಾಪುರ ಯಲ್ಲಮ್ಮ ದೇವಿ ಜಾತ್ರೆ
ಆನೇಕಲ್ಲು: ತಾಲೂಕಿನ ಗಡಿ ಹೋಬಳಿ ಸರ್ಜಾಪುರದಲ್ಲಿ ನೆಲೆಸಿರುವ ಪುರಾತನ ದೇಗುಲ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಬುಧವಾರ ಮದ್ಯಾಹ್ನ 12 ಗಂಟೆಗೆ ಪ್ರಾರಂಭವಾದ ರಥೋತ್ಸವಕ್ಕೆ ಉತ್ಸವ ಮೂರ್ತಿಯನ್ನು ತಂದಾಗ ನೆರೆದಿದ್ದ ಭಕ್ತ ಸಮೂಹ ಯಲ್ಲಮ್ಮ ದೇವಿಗೆ ಉಘೇ ಉಘೇ ಎಂದು ಜಯಕಾರ ಹಾಕಿ ಭಕ್ತಿ ಸಮರ್ಪಣೆ ಮಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಜಾನಪದ ತಂಡಗಳು, ನಾಯಂಡಿ ನೃತ್ಯ ಜನರಿಗೆ ರಂಜನೆ ನೀಡಿದವು.
ಯಲ್ಲಮ್ಮ ದೇವಿ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಕರಗ ಮಹೋತ್ಸವ, ಬೆಂಕಿಯ ಕೆಂಡಗಳ ಮೇಲೆ ನಡೆಯುವ ಸೇವೆ, ಅಲಗು ಸೇವೆ ನಡೆಯಲಿದೆ. ವಾದ್ಯಗೋಷ್ಠಿ ಮತ್ತು ನೃತ್ಯೋತ್ಸವ ಏರ್ಪಡಿಸಲಾಗಿದೆ.
ಸಿಡಿ ಉತ್ಸವ, ಉಯ್ಯಾಲೆ ಸೇವೆ ಇಲ್ಲಿನ ವಿಶೇಷವಾಗಿದೆ ಎಂದು ದೇಗುಲ ಸಮಿತಿಯುವರು ತಿಳಿಸಿದ್ದಾರೆ.
ವಲಸಿಗರನ್ನು ತಿರಸ್ಕರಿಸಿ, ಸ್ಥಳೀಯರನ್ನು ಬೆಂಬಲಿಸಿ
ದೊಡ್ಡಬಳ್ಳಾಪುರ: ಕಾಂಗ್ರೆಸ್ ಮತ್ತು ಜೆಡಿಎಸ್ನ ವಲಸಿಗ ಅಭ್ಯರ್ಥಿಗಳನ್ನು ಜನ ತಿರಸ್ಕರಿಸಿ ಬಿಜೆಪಿಯ ಸ್ಥಳೀಯ ಅಭ್ಯರ್ಥಿಯನ್ನು ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಜನ ಆಶೀರ್ವದಿಸುತ್ತಾರೆ ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಮಧ್ಯಾಹ್ನ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಪರ ಮತಯಾಚಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಾಂತರಾಜ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಪ ಅವಧಿಯಲ್ಲೇ ಸಮಗ್ರ ಬದಲಾವಣೆ ಸಾಧ್ಯವಾಗಲಿದೆ. ರಾಜ್ಯದಲ್ಲಿ 5 ವರ್ಷದ ಬಿಜೆಪಿ ಸರ್ಕಾರ ಮಾಡಿದ ಸಾಧನೆ ಅಪಾರ. ಅಭಿವೃದ್ಧಿಗೆ ಯಡಿಯೂರಪ್ಪ ಸರ್ಕಾರ ಕೊಟ್ಟ ಆದ್ಯತೆ ಅನನ್ಯ. ಕ್ಷೇತ್ರದಲ್ಲಿ ಕೂಡ ಕೋಟ್ಯಂತರ ವೆಚ್ಚದ ಕಾಮಗಾರಿಗಳು ಆಗಿವೆ. ಗ್ರಾಮಾಂತರ ಪ್ರದೇಶದಿಂದ ನಗರ ಹಂತದವರೆಗೆ ಎಲ್ಲೆಡೆ ಅಭಿವೃದ್ಧಿ ಕಂಡಿದ್ದೇವೆ. ಆದರೆ 60 ವರ್ಷದಲ್ಲಿ ನಮ್ಮನ್ನಾಳಿರುವ ಜನ ಮಾಡಿರುವ ಸಾಧನೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ಇದರಲ್ಲಿ ಬಿಜೆಪಿ ಜಯ ನಿಶ್ಚಿತ ಎಂದರು.
ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ ಓಟ್ ಬ್ಯಾಂಕಿಗಾಗಿ ಸುಳ್ಳು ಹೇಳುವ ರಾಜಕಾರಣ ನಮ್ಮದಲ್ಲ. ಕಾಂಗ್ರೆಸ್ನ ಈ ಬಗೆಯ ವಿಷ ಕೂಪವನ್ನು ಬುಡಸಹಿತ ಕಿತ್ತೊಗೆಯಬೇಕು. ಸ್ಥಳೀಯ ಹಂತದಿಂದಲೂ ಪಕ್ಷದ ಕಾರ್ಯಕರ್ತರು ಸಂಘಟಿತ ಪ್ರಯತ್ನ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮಹತ್ವದ ಕೆಲಸ ಮಾಡಬೇಕಿದೆ. ಮೋದಿ ಪ್ರಧಾನಿಯಾದರೆ ಮತ್ತೊಮ್ಮೆ ದೇಶ ಸದೃಢ ಆರ್ಥಿಕತೆಯನ್ನು ಹೊಂದುತ್ತದೆ. ನೆರೆ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಮಗ್ರತೆಯ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರ ಅನಿವಾರ್ಯ ಎಂದರು.
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಬೆಂ.ಗ್ರಾ.ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಜಿ.ಪಂ ಮಾಜಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಜಿ.ಪಂ ಉಪಾಧ್ಯಕ್ಷ ಎನ್. ಹನುಮಂತಗೌಡ, ಮುಖಂಡರಾದ ಪುಷ್ಪಾಶಿವಶಂಕರ್, ವತ್ಸಲ, ರಾಜಲಕ್ಷ್ಮಿ, ಎಚ್.ಎಸ್.ಶಿವಶಂಕರ್, ಚಂದ್ರಶೇಖರ್, ನಂಜಪ್ಪ, ಡಿ.ಎಲ್. ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

