ಜಿಲ್ಲಾದ್ಯಂತ ರಾಮನವಮಿ ಸಂಭ್ರಮ
Published On :
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ದೇವಾಲಯಗಳಲ್ಲಿ ಮಂಗಳವಾರ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದಿವೆ.
ರಾಮನವಮಿ ಅಂಗವಾಗಿ ಶ್ರೀರಾಮ ದೇವಾಲಯಗಳು, ಶ್ರೀ ಹನುಮ ದೇವಾಲಯಗಳಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷಾಲಂಕಾರ ಏರ್ಪಾಟಾಗಿತ್ತು. ಇಲ್ಲಿನ ಸುಪ್ರಸಿದ್ಧ ಶ್ರೀನೆಲದಾಂಜನೇಯಸ್ವಾಮಿ ದೇವಾಲಯ, ಅರಳುಮಲ್ಲಿಗೆ ಬಾಗಿಲು ಆಂಜನೇಯಸ್ವಾಮಿ ದೇವಾಲಯ, ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಶಿವಪುರ ಬಾಗಿಲು ಆಂಜನೇಯಸ್ವಾಮಿ ದೇವಾಲಯ, ರೋಜಿಪುರದ ಹನುಮ ದೇಗುಲ, ತಾಲೂಕಿನ ರಾಜಘಟ್ಟ ಶ್ರೀ ಆಂಜನೇಯಸ್ವಾಮಿ ದೇವಾಲಯ, ಬನ್ನಿಮಂಗಲದ ಆಂಜನೇಯಸ್ವಾಮಿ ದೇವಾಲಯ, ಡಿಕ್ರಾಸ್ನಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸೇರಿದಂತೆ ವಿವಿಧ ವಿಷ್ಣುದೇಗುಲಗಳಲ್ಲಿ ಪೂಜಾ ಸಂಭ್ರಮ ಮನೆ ಮಾಡಿತ್ತು.
ಎಲ್ಲೆಲ್ಲೂ ಅರವಂಟಿಕೆ: ದೇವಾಲಯಗಳಲ್ಲಿ ಪೂಜಾ ನಂತರ ಪಾನಕ-ಪನಿವಾರ, ಕೋಸಂಬರಿ-ಮಜ್ಜಿಗೆ ನೀಡುವ ಕಾರ್ಯಕ್ರಮ ನಡೆಯಿತು. ಅಲ್ಲದೆ ಇಲ್ಲಿನ ವಿವಿಧ ಯುವಕ ಸಂಘಗಳು, ಧಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಶ್ರೀರಾಮ ಪೂಜಾ ಕಾರ್ಯಕ್ರಮ ಮತ್ತು ಅರವಂಟಿಕೆ ಏರ್ಪಡಿಸಲಾಗಿತ್ತು. ಬಿಸಿಲಿನಲ್ಲಿ ಧಣಿದು ಬರುವ ಜನರಿಗೆ ತಂಪಾದ ಪಾನಿಯಗಳನ್ನು ವಿತರಿಸುವ ಮೂಲಕ ರಾಮನವಮಿ ಆಚರಿಸಲಾಯಿತು. ಕೊಂಗಾಡಿಯಪ್ಪ ಕಾಲೇಜು ರಸ್ತೆ, ಶಾಂತಿನಗರ, ಮಾರುಕಟ್ಟೆ, ಬಸ್ ನಿಲ್ದಾಣ ಪ್ರದೇಶಗಳಲ್ಲಿ ವಿಶೇಷ ಅರವಂಟಿಕೆಗಳನ್ನು ಏರ್ಪಡಿಸಲಾಗಿತ್ತು.
ಉತ್ಸವ ಇದೇ ಸಂದರ್ಭದಲ್ಲಿ ವಿವಿಧ ದೇವಾಲಯಗಳಿಂದ ಶ್ರೀರಾಮ-ಲಕ್ಷ್ಮಣ ಹನುಮ ಸಮೇತ ಶ್ರೀಸ್ವಾಮಿಯ ರಾಜಬೀದಿ ಉತ್ಸವ, ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಚುನಾವಣೆ ಭರಾಟೆ: ಎಲ್ಲೆಲ್ಲೂ ಲೋಕಸಭಾ ಚುನಾವಣಾ ಭರಾಟೆ ನಡೆಯುತ್ತಿದ್ದರೂ ಕೂಡ ದೇವಾಲಯಗಳಲ್ಲಿ ಜನಜಾತ್ರೆ ಕಂಡು ಬಂತು. ಅಭ್ಯರ್ಥಿಗಳ ಪ್ರಚಾರದ ಅಬ್ಬರ ಒಂದೆಡೆ ಇದ್ದರೆ ಮತ್ತೊಂದೆಡೆ ದೇವಾಲಯಗಳಲ್ಲಿ ಜನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ರಾಮೋತ್ಸವ: ಶ್ರೀರಾಮನವಮಿ ಅಂಗವಾಗಿ ದೇವಾಂಗ ಮಂಡಲಿ ನೇತೃತ್ವದಲ್ಲಿ ಏ.8ರಿಂದ 16ರವರೆಗೆ ಶ್ರೀರಾಮಲಿಂಗ ಚಂದ್ರ ಚೌಡೇಶ್ವರಿ ದೇವಾಲಯದಲ್ಲಿ ಶ್ರೀರಾಮನವಮಿ ಉತ್ಸವ ಏರ್ಪಡಿಸಲಾಗಿದೆ. 9 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9.30ಕ್ಕೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಅದೇ ರೀತಿ ಇಲ್ಲಿನ ಶಾರದಾ ಶಂಕರ ಮಠದಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ.
ಸೂಲಿಬೆಲೆ ಸುತ್ತ ರಾಮನ ಜಪ...
ಸೂಲಿಬೆಲೆ: ಸೂಲಿಬೆಲೆಯ ಸುತ್ತಮುತ್ತ ಮಂಗಳವಾರ ಶ್ರೀರಾಮ ನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದು, ಕೋಸಂಬರಿ, ಪಾನಕ, ಮಜ್ಜಿಗೆ ಎಲ್ಲಡೆ ಗಂಪು ಗುಂಪಾಗಿ ವಿತರಣೆ ಮಾಡುತ್ತಿದ್ದು ಕಂಡು ಬಂತು. ರಾಮನವಮಿಯ ಅಂಗವಾಗಿ ಸೂಲಿಬೆಲೆ ಮಾರುತಿ ನಗರದಲ್ಲಿ ಆಂಜಿನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯದೊಂದಿಗೆ ವಿಶೇಷ ಪೂಜಾ ಕಾರ್ಯ ನಡೆಯಿತು. ನಗರ್ತರ ಬೀದಿ, ಅಂಬೇಡ್ಕರ್ ನಗರ ಮದಗದಮ್ಮ ,ವಾಲ್ಮೀಕಿ ನಗರದ ಶ್ರೀರಾಮ ಮಂದಿರ,ಇದಲ್ಲದೇ ಹೊಸಕೋಟೆ-ಸೂಲಿಬೆಲೆ ಮಾರ್ಗದ ಅತ್ತಿಬೆಲೆ, ಯನಗುಂಟೆ, ಕಮ್ಮಸಂದ್ರ, ಹಸಿಗಾಳ ಮೊದಲಾದ ಕಡೆಗಳಲ್ಲಿ ರಾಮ ನವಮಿ ಅಗಂವಾಗಿ ರಾಮನ ಜಪವನ್ನು ಭಕ್ತರು ಜಪಿಸಿದ್ದು, ಬಿಸಿಲಿನ ತಾಪದಿಂದ ದಣಿದು ಪ್ರಯಾಣಿಸುತ್ತಿದ್ದ ಪ್ರತಿಯೊಂದು ವಾಹನವನ್ನು ತಡೆದು ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿವರಿಗೆ ಮಜ್ಜಿಗೆ ಪಾನಕ, ಹಾಗೂ ಕೋಸಂಬರಿ ವಿತರಣೆ ಕಾರ್ಯ ನಡೆಯಿತು.
ಶ್ರದ್ದಾಭಕ್ತಿಯಿಂದ ರಾಮನವಮಿ ಆಚರಣೆ
ವಿಜಯಪುರ: ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀ ರಾಮ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳು ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ಧಾರ್ಮಿಕ ಆಚರಣೆಗಳು ನಡೆಸುವ ಸ್ಥಳಗಳಲ್ಲಿ ಭಕ್ತರಿಗೆ ಪಾನಕ ಮಜ್ಜಿಗೆ ಕೋಸಂಬರಿ ನೀಡುವ ಮೂಲಕ ಆಚರಣೆ ಮಾಡುತ್ತಿರುವ ದೃಶ್ಯವೂ ಎಲ್ಲೆಡೆ ಕಂಡು ಬಂತು. ವಿಶೇಷವಾಗಿ ವೈಷ್ಣವ ದೇವಾಲಯಗಳಲ್ಲಿ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ವಾಲ್ಮಿಕಿ ರಾಮಾಯಣ ಪಠಣ, ಸುಂದರಕಾಂಡ ಪರಾಯಣ ವಿಶೇಷ ಹೂವಿನ ಅಲಂಕಾರಗಳು ನಡೆಯಿತು. ಪಟ್ಟಣದ ಕೋದಂಡರಾಮ ಸ್ವಾಮಿ ದೇವಾಲಯ, ರಾಮ ಮಂದಿರ, ಅಭಯಾಂಜನೇಯ ಸ್ವಾಮಿ ದೇವಾಲಯ, ಮೂಡಲಾಂಜನೇಯ ಸ್ವಾಮಿ ದೇವಾಲಯ, ಆನೇಕಲ್ಲು ಛತ್ರ ಭಕ್ತಾಂಜನೇಯಸ್ವಾಮಿ ದೇವಾಲಯ, ಬಲಮುರಿ ಗಣಪತಿ ದೇವಾಲಯ, ಮಂಡಿಬೆಲೆ ರಸ್ತೆ, ಬಸ್ ನಿಲ್ದಾಣ, ಟೌನ್ಹಾಲ್ ಹಿಂಭಾಗ, ಮಾರ್ಕೆಟ್ ರಸ್ತೆ ಹೀಗೆ ಪಟ್ಟಣದೆಲ್ಲೆಡೆ ಶ್ರೀರಾಮನ ಚಿತ್ರಪಠಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಪಾನಕ ಪಣ್ಯಾರ ವಿತರಿಸಲಾಯಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

