ಶಾಸಕರಿಂದ ಅನುದಾನ ಲಭ್ಯವಿಲ್ಲ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ 31 ವಾರ್ಡುಗಳಲ್ಲಿ ಕೋಟಿಗಟ್ಟಲೆ ವೆಚ್ಚದ ಕಾಮಗಾರಿಗಳನ್ನು ಮಾಡಿರುವುದಾಗಿ ಶಾಸಕರು ಎಲ್ಲಡೆ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಹಲವು ಯೋಜನೆಗಳು ಈ ಶಾಸಕರ ಅವಧಿಯಲ್ಲಿ ಮಂಜೂರಾದ ಯೋಜನೆಗಳೇ ಅಲ್ಲ. ಆದಾಗ್ಯೂ ಪುಕ್ಕಟ್ಟೆ ಪ್ರಚಾರಕ್ಕಾಗಿ ಪುಟಗಟ್ಟಲೆ ಸಾಧನಾ ವಿವರಗಳನ್ನು ಹಂಚುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹಿರಿಯ ನಗರಸಭಾ ಸದಸ್ಯ ತ.ನ.ಪ್ರಭುದೇವ್, ನಗರಸಭಾ ಸದಸ್ಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ನಗರಸಭೆಯಿಂದ ಪಡೆದಿರುವ ಮಾಹಿತಿ ಪ್ರಕಾರ ಈ ಶಾಸಕರ ಅವಧಿಯಲ್ಲಿ ಯಾವುದೇ ವಿಶೇಷಾನುದಾನಗಳಾಗಲೀ, ವಿಶೇಷ ಯೋಜನೆಗಳಾಗಲೀ ದೊಡ್ಡಬಳ್ಳಾಪುರ ನಗರಕ್ಕೆ ಬಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಶಾಸಕರು ದೊಡ್ಡ ಪಟ್ಟಿಯನ್ನೇ ಪ್ರಕಟಿಸಿದ್ದಾರೆ. ಇದು ಕೇವಲ ಚುನಾವಣಾ ಪ್ರಚಾರಕ್ಕಾಗಿ ನಡೆಸುತ್ತಿರುವ ತಂತ್ರವಷ್ಟೇ ಎಂದಿದ್ದಾರೆ. ದೊಡ್ಡಬಳ್ಳಾಪುರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಗಂಭೀರ ಪ್ರಯತ್ನ ಮಾಡದ ಶಾಸಕರು, ಬೇರೆಯವರ ಕೆಲಸಗಳನ್ನು ತಮ್ಮದೆಂದು ಹೇಳಿಕೊಳ್ಳುವ ಜಾಣತನ ಪ್ರದರ್ಶಿಸುತ್ತಿದ್ದಾರೆ. ಅತ್ತ ವೀರಪ್ಪಮೊಯ್ಲಿ ಕೂಡ ಇತರರ ಮತ್ತು ಕಳೆದ ಬಾರಿಯ ರಾಜ್ಯ ಸರ್ಕಾರದ ಕಾರ್ಯಯೋಜನೆಗಳನ್ನೂ ತಮ್ಮ ಸಾಧನೆಗಳೆಂಬಂತೆ ಪುಸ್ತಕ ಪ್ರಕಟಿಸಿ ಪ್ರಚಾರ ಗಿಟ್ಟಿಸಿದ್ದಾರೆ. ಇತ್ತ ಶಾಸಕರೂ ಅದೇ ದಾರಿ ಹಿಡಿದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಸುಳ್ಳು ಹೇಳುವ ನೈಪುಣ್ಯ ತೋರುತ್ತಿದೆ. ವಾಸ್ತವದ ಅರಿವು ಜನರಿಗೆ ಇದೆ. ಈ ನಿಟ್ಟಿನಲ್ಲಿ ಜನ ಉತ್ತಮ ತೀರ್ಪು ಕೊಡುತ್ತಾರೆ ಎಂದಿದ್ದಾರೆ.
ನನ್ನ ಸೇವೆಯನ್ನು ನೋಡಿ ಮತ ನೀಡಿ
ಆನೇಕಲ್ಲು: ಕುಮಾರಸ್ವಾಮಿ ಯಾರಿಂದಲೂ ಕಿಕ್ ಬ್ಯಾಕ್ ಪಡೆಯುವ ವ್ಯಕ್ತಿಯಲ್ಲ. ಕೇವಲ 20 ತಿಂಗಳ ಅವಧಿಯಲ್ಲಿ ರಾಜ್ಯದ ಜನತೆ ಮೆಚ್ಚುವಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಪ್ರಚಾರ ಪಡೆಯಲು ಎಡವಿರಬಹುದು, ಆದರೇ ಜನ ಮಾನಸದಲ್ಲಿ ನಾನು ಶಾಶ್ವತವಾಗಿ ಉಳಿದಿದ್ದೇನೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಆನೇಕಲ್ಲಿನ ಶನಿಮಹಾತ್ಮ ಮೈದಾನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜೆಡಿಎಸ್ ಲೋಕಸಭಾ ಅಭ್ಯರ್ಥಿ ಪ್ರಭಾಕರರೆಡ್ಡಿ ಪರವಾಗಿ ಮತ ಯಾಚನೆ ಮಾಡಿ ಮಾತನಾಡಿ ನನ್ನ 20 ತಿಂಗಳ ಆಡಳಿತ ಅವಧಿಯಲ್ಲಿ ಅಲ್ಪ ಸಂಖ್ಯಾತರು, ರೈತರು, ಅಂಗವಿಕಲರು ಹಾಗೂ ಮಹಿಳೆಯರಿಗಾಗಿ ಜಾರಿ ಮಾಡಿರುವ ಯೋಜನೆಗಳು ರಾಜ್ಯಾದ್ಯಂತ ನನಗೆ ಆಶೀರ್ವಾದ ರೂಪದಲ್ಲಿ ಬರಲಿದೆ. ಕನಿಷ್ಠ 15 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮತ್ತೆ ಕನ್ನಡಿಗರಾದ ದೇವೇಗೌಡರು ಪ್ರಧಾನಿ ಆಗುವ ಸಂಭವವಿದೆ. ದಯಮಾಡಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್ಗೆ ಮತ ನೀಡಿ ಎಂದು ಮನವಿ ಮಾಡಿದರು.
ದೇವನಹಳ್ಳಿಯಲ್ಲಿ ಪುಟ್ಟ ಮಕ್ಕಳಿಗಾಗಿ ಕಿಡ್ಜಿ ಶಾಲೆ ಪ್ರಾರಂಭ
ದೇವನಹಳ್ಳಿ: ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ್ ಕುಟುಂಬದ ಅಶ್ವಿನಿ ವಿಜಯ್ ದಂಪತಿ ಕನಸಿನ ಕಿಡ್ಜಿ ಶಾಲೆ ಪ್ರಾರಂಭೋತ್ಸವ ಸಮಾರಂಭ ಸೂಲಿಬೆಲೆ ರಸ್ತೆಯಲ್ಲಿರುವ ಎಸ್ಎಲ್ಎನ್ ಅಶ್ವತ್ಥನಾರಾಯಣ್ ಕಟ್ಟಡದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್ ನೆರವೇರಿಸಿ ವಿಜಯ್ ಅಶ್ವಿನಿ ದಂಪತಿ ಶ್ರಮದಿಂದ ಈ ಶಾಲೆ ಆರಂಭಗೊಂಡಿದೆ. ದೇವನಹಳ್ಳಿ ಮುಂದಿನ ದಿನಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿರುವುದರಿಂದ ಉದ್ಯೋಗಸ್ಥರ ಮತ್ತು ವ್ಯವಹಾರಸ್ಥರ ಪುಟ್ಟ ಮಕ್ಕಳಿಗೆ ಅವರ ಜ್ಞಾನ ವಿಕಸನ ಹೊಂದುವಂತಹ ಶಿಕ್ಷಣ ನೀಡಬೇಕಾಗಿದೆ ಎಂದರು. ಶಾಲೆ ಪ್ರಾರಂಭಿಸುವುದು ಮುಖ್ಯವಲ್ಲ, ನಿರಂತರವಾಗಿ ನಡೆಸಿಕೊಂಡುಹೋಗುವುದು ಮುಖ್ಯ ಎಂದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ನಿಗಮದ ನಿರ್ದೇಶಕ ಡಾ.ಮೋಹನರಾವ್ ಮಾತನಾಡಿ ಶಾಲೆಗೆ ಶುಭ ಹಾರೈಸಿದರು. ಪುರಸಭೆ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ್ ಮಾತನಾಡಿ ಇಂದಿನ ಮಕ್ಕಳು ಬುದ್ಧಿವಂತರಾದರೆ ಮಾತ್ರ ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಆಡಳಿತ ಮಂಡಳಿಯ ನಿಮ್ಮಿ ಮುರಳೀಧರನ್, ಬೆಂಗಳೂರಿನಲ್ಲಿ ಕಿಡ್ಜಿ ಸಂಸ್ಥೆಯ 150 ಕ್ಕೂ ಹೆಚ್ಚು ಶಾಲೆಗಳು ನಡೆಯುತ್ತಿದ್ದು ಈಗ ದೇವನಹಳ್ಳಿಯಲ್ಲಿ ಪ್ರಾರಂಭಗೊಂಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

