ಆಪರೇಷನ್ ಹಸ್ತ ಮಾಡುತ್ತಿಲ್ಲ
ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ, ವಿಪಕ್ಷದ ಹಸ್ತವನ್ನು ಶುದ್ಧಿ ಮಾಡುತ್ತಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪಟ್ಟಣದ 5ನೇ ಅಡ್ಡರಸ್ತೆಯಲ್ಲಿರುವ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ನಿಂದ ಪಕ್ಷಾಂತರ ಗೊಂಡ ನಾಲ್ಕು ಮಂದಿ ಸದಸ್ಯರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸಿ ಮಾತನಾಡಿ, ಇವರ್ಯಾರನ್ನೂ ನಾವು ಪಕ್ಷಕ್ಕೆ ಕರೆದಿಲ್ಲ. ಆದರೆ ಅವರ ಪಕ್ಷದ ಆಂತರಿಕ ಬೆಳವಣಿಗೆಯಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನೊಂದು ಬಂದವರಿಗೆ ನಮ್ಮ ಪಕ್ಷದಲ್ಲಿ ಆಶ್ರಯ ಕೊಡುತ್ತಿದ್ದೇವೆ. ಇದು ಆಪರೇಷನ್ ಹಸ್ತ ವಲ್ಲ ಎಂದು ಸ್ಪಷ್ಟ ಪಡಿಸಿದರು.
25 ವರ್ಷದಿಂದ ಕಾಂಗ್ರೆಸ್ ಜತೆಗೆ ಸೈದ್ದಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಮುಖಂಡರು ಇದೀಗ ನಮ್ಮ ಪಕ್ಷಕ್ಕೆ ಮರಳುತ್ತಿದ್ದಾರೆ. ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಜೆಡಿಎಸ್ನ ಸಾವಿರಾರು ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆ ಗೊಂಡಿದ್ದಾರೆ ಎಂದು ತಿಳಿಸಿದರು.
ನಾವು ಕೈ ಬಿಡುವುದಿಲ್ಲ: ಈ ಜಿಲ್ಲೆಯ ಜನತೆಯನ್ನು ಯಾರು ಕೈ ಬಿಟ್ಟರೂ ನಾವು ಮಾತ್ರ ಕೈ ಬಿಡುವುದಿಲ್ಲ, ಹಿಂದಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಎಲ್ಲಾ ಮುಖಂಡರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ತಿಳಿಸಿದ ಅವರು, ಅನ್ಯ ಪಕ್ಷದ ಮುಖಂಡರು ಕಾಂಗ್ರೆಸ್ಗೆ ಬರುವ ಮೂಲಕ ಜಿಲ್ಲೆಯಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದರು. ಜೆಡಿಎಸ್ನಿಂದ ನಾಲ್ಕು ಮಂದಿ ಸದಸ್ಯರು ಇದೀಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಸದ್ಯದಲ್ಲೇ ಇನ್ನೂ ಮೂರು ಮಂದಿ ನಗರಸಭಾ ಸದಸ್ಯರು ಕಾಂಗ್ರೆಸ್ನತ್ತ ಬರಲು ಸಿದ್ಧವಾಗಿದ್ದು ಅವರನ್ನೂ ಪಕ್ಷಕ್ಕೆ ಸ್ವಾಗತಿಸುವುದಾಗಿ ತಿಳಿಸಿದರು. ಈ ನಾಲ್ಕು ಮಂದಿ ಸದಸ್ಯರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ನಗರ ಮತ್ತು ಅವರ ವಾರ್ಡ್ಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಬಂದಿರುವ ಅವರನ್ನು ನಾವು ಸ್ವಾಗತಿಸುತ್ತೇನೆ. ಎಲ್ಲರ ಬೆಂಬಲದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲವು ನಿಶ್ಚಿತ ವೆನಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭಾ ಚುನಾವಣೆಯಲ್ಲಿ ಸಹಕಾರ: ನಗರಸಭಾ ಅಧ್ಯಕ್ಷ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯಲು ಕೆಲ ಜೆಡಿಎಸ್ ಸದಸ್ಯರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದಾರೆ. ಅವರ ಹೆಸರುಗಳನ್ನು ನಾನು ಬಹಿರಂಗ ಪಡಿಸುವುದಿಲ್ಲ, ಈಬಾರಿಯ ಚುನಾವಣೆಯಲ್ಲೂ ಈ ಸದಸ್ಯರು ಇದೇ ರೀತಿ ಸಹಕಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ 31ನೇ ವಾರ್ಡಿನ ಜೆಸಿಬಿ ಲೋಕೇಶ್, 26ವಾರ್ಡಿನ ಹಾಸಿಂ, 22 ವಾರ್ಡಿನ ಉಜ್ಮಾಇಷ್ರತ್, 7ನೇ 22 ವಿಷಕಂಠ ಮೂರ್ತಿ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕ ಸಾಧತ್ ಆಲಿಖಾನ್, ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ. ವೀರೇಗೌಡ, ನಗರಸಭಾ ಉಪಾಧ್ಯಕ್ಷ ಮುದ್ದುಕೃಷ್ಣ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಮುಖಂಡರಾದ ಟಿ.ಪಿ.ಪುಟ್ಟಸಿದ್ದೇಗೌಡ, ವಾಸೀಲ್ ಆಲಿಖಾನ್ ಇನ್ನೂ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

