ಕನಕಪುರ ತಾಲೂಕಿನ ವಿವಿಧೆಡೆ ಲಘು ಭೂಕಂಪ, ಹಾನಿ ಇಲ್ಲ
ರಾಮನಗರ: ಕನಕಪುರ ತಾಲೂಕಿನ ವಿವಿಧೆಡೆ ಲಘು ಭೂಕಂಪ ಸಂಭವಿಸಿದೆ.
ಭಾನುವಾರ ಮುಂಜಾನೆ 3.08ರ ಸಮಯದಲ್ಲಿ 6 ರಿಂದ 8 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಭಯ ಭೀತರಾಗಿ ಮನೆಯಿಂದ ಹೊರಗೋಡಿ ಬಂದಿದ್ದರು. ತಾಲೂಕಿನ ಕೆರಳಾಳು ಸಂದ್ರ, ಹೆಗ್ಗನೂರು, ಕುಪ್ಪೆದೊಡ್ಡಿ, ತೆರಸಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 20ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಲಘುವಾಗಿ ಕಂಪಿಸಿದ್ದರಿಂದ ಮನೆಯಲ್ಲಿದ್ದ ಪಾತ್ರೆ ಹಾಗೂ ಇನ್ನಿತರೆ ವಸ್ತುಗಳು ಚೆಲ್ಲಾಪಿಲ್ಲಿಯಾದವು. ಮುಂಜಾನೆಯ ಸವಿ ನಿದ್ರೆಯಲ್ಲಿದ್ದ ಜನರು ಆತಂಕಗೊಂಡಿದ್ದಾರೆ.
ಈ ಲಘು ಭೂಕಂಪನದಿಂದ ಗ್ರಾಮಸ್ಥರು ಆತಂಕದಿಂದ ತಮ್ಮತಮ್ಮಲ್ಲೇ ಚರ್ಚೆ ನಡೆಸುತ್ತಿದ್ದರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಭೂಕಂಪದ ಬಗ್ಗೆ ದೂರು ನೀಡಿದರು. ಕಂಪನದ ತೀವ್ರತೆ ಕಡಿಮೆ ಪ್ರಮಾಣದಲ್ಲಿದ್ದುದರಿಂದ ಆಸ್ತಿ ಅಥವಾ ಜೀವ ಹಾನಿ ಬಗ್ಗೆ ವರದಿಯಾಗಿಲ್ಲ.
ಜಿಲ್ಲಾಧಿಕಾರಿ ಸ್ಪಷ್ಟನೆ: ಗ್ರಾಮಸ್ಥರು ನೀಡಿದ ದೂರಿನ ಮೇಲೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಭೂಕಂಪನದ ಅನುಭವವಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಗ್ರಾಮಗಳಲ್ಲಿ ರಿಕ್ಟರ್ ಮಾಪಕದಲ್ಲಿ 1.4 ರಷ್ಟು ತೀವ್ರತೆ ಭೂಕಂಪನವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ. ಲಘು ಕಂಪನವಾದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಮೂಡಿಗೆರೆ ಬಳಿ ಪುಂಡಾನೆಗಳ ಹಾವಳಿ
ಮೂಡಿಗೆರೆ: ತಾಲೂಕಿನ ಮೇಕನಗದ್ದೆ, ಮೂಲರಹಳ್ಳಿ ಗ್ರಾಮಗಳಲ್ಲಿ ಮೂರು ಆನೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
6 ತಿಂಗಳ ಹಿಂದೆ ಸಕಲೇಶಪುರದಿಂದ ಮೂಡಿಗೆರೆ ತಾಲೂಕಿಗೆ ಆಗಮಿಸಿದ್ದ 3 ಪುಂಡಾನೆಗಳು ತಾಲೂಕಿನ, ಜೇನುಬೈಲ್, ಬಿದರಹಳ್ಳಿ, ಕೆಂಜಿಗೆ ಗ್ರಾಮಗಳಿಗೆ ಆಗಮಿಸಿ ರೈತರ ಗದ್ದೆ ತೋಟಗಳನ್ನು ಹಾಳುಗೆಡವಿ ಲಕ್ಷಾಂತರ ರು. ನಷ್ಟ ಮಾಡಿದ್ದವು. ಈ ಆನೆಗಳನ್ನು ಓಡಿಸಲು ಶಿವಮೊಗ್ಗದ ಸಕ್ರೆಬೈಲಿನಿಂದ ನ್ಯೂಟಸ್ಕರ್ ಮತ್ತು ಗೀತಾ ಎಂಬ ಹೆಸರಿನ ಆನೆಗಳನ್ನು ಕರೆಸಲಾಗಿತ್ತು. ಆದರೆ, ಕಾಫಿ ತೋಟದ ನಡುವೆ ಆನೆಗಳ ಓಡಾಟದಿಂದ ಗಿಡಗಳು ಹಾಳಾಗುವ ನಿಟ್ಟಿನಲ್ಲಿ ಆನೆಗಳ ಕಾರ್ಯಾಚರಣೆ ನಡೆಸದೇ, ಪಟಾಕಿ ಸಿಡಿಸುವುದರ ಮೂಲಕ ಅರಣ್ಯ ಸಿಬ್ಬಂದಿ ಸಕಲೇಶಪುರ ಕಾಡಿನತ್ತ ಆನೆಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದರು.
ಚುನಾವಣೆ ಕಾರ್ಯ ಮುಗಿಸಿ ನಿರಾಳವಾಗುತ್ತಿದ್ದ ಅಧಿಕಾರಿಗಳಿಗೀಗ ಈ ಪುಂಡಾನೆಗಳ ಉಪಟಳ ನಿಯಂತ್ರಿಸುವ ಜವಾಬ್ದಾರಿ ಹೆಗಲೇರಿದೆ. ಹಗಲು ರಾತ್ರಿ ಎನ್ನದೆ ಗ್ರಾಮಗಳಲ್ಲಿ ಆನೆಗಳು ತಿರುಗಾಡುತ್ತಿವೆ. ಅರಣ್ಯ ಸಿಬ್ಬಂದಿ ಪುಂಡಾನೆಗಳನ್ನು ಕಾಡಿಗಟ್ಟುವ ಯತ್ನ ನಡೆಸಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಸುದರ್ಶನ್ ತಿಳಿಸಿದ್ದಾರೆ.
3 ಆನೆಗಳ ಹಾವಳಿಗೆ ಮೇಕನಗದ್ದೆಯ ಕೃಷ್ಣೇಗೌಡರ ತೋಟ ಸೇರಿದಂತೆ ಮೇಕನಗದ್ದೆ ಮತ್ತು ಮೂಲರಹಳ್ಳಿ ಸುತ್ತಮುತ್ತಲ ತೋಟಗಳು ಹಾಗೂ ಗದ್ದೆಗಳು ಅಪಾರ ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

