ಕನ್ನಡದಲ್ಲೇ ಶಿಕ್ಷಣ: ಆಯೋಗ ಅಗತ್ಯ
ಬೆಂಗಳೂರು: ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನೀಡುವಂತಾಗಬೇಕೆಂದು ವರದಿ ತಯಾರಿಸಲು ಆಯೋಗ ರಚಿಸಬೇಕೆಂದು ಹಿರಿಯ ಸಾಹಿತಿ ಕೋ. ಚನ್ನಬಸಪ್ಪ ಒತ್ತಾಯಿಸಿದ್ದಾರೆ.
ಅರವಿಂದೋ ಸೊಸೈಟಿ ರಾಜ್ಯ ಸಮಿತಿ ನಗರದಲ್ಲಿ ಭಾನುವಾರ ನಡೆದ ಎಂ.ಎಸ್. ನಾಗರಹಳ್ಳಿ ಅವರ 'ಯೋಗ ಸಮನ್ವಯ' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡದಲ್ಲಿ ಅಭ್ಯಾಸ ಮಾಡಿ ಅತ್ಯುನ್ನತ ಸಾಧನೆ ಮಾಡಿದವರು ಲಕ್ಷಾಂತರ. ಹಾಗೆಯೇ ಇಂಗ್ಲಿಷ್ನಲ್ಲಿ ಅಭ್ಯಾಸ ಮಾಡಿ ಏನನ್ನೂ ಸಾಧಿಸದವರೂ ಸಾಕಷ್ಟು ಜನ ಸಿಗುತ್ತಾರೆ. ಈ ಬಗ್ಗೆ ಒಂದು ಸಮೀಕ್ಷೆಯೇ ನಡೆಯಬೇಕಿದ್ದು, ಇದಕ್ಕಾಗಿ ಶಿಕ್ಷಣ ತಜ್ಞರನ್ನೊಳಗೊಂಡ ಆಯೋಗವನ್ನು ರಾಜ್ಯ ಸರ್ಕಾರ ರಚಿಸಬೇಕು ಎಂದು ಕೋ. ಚನ್ನಬಸಪ್ಪ ಸಲಹೆ ನೀಡಿದರು.
ಕನ್ನಡ ಭಾಷೆ ಉಳಿಸಿ, ಬೆಳೆಸುವುದು ಸರ್ಕಾರದ ಕೈಯಲ್ಲಿದೆ. ಹೇಗೆಂದರೆ, ತಜ್ಞರಿಂದ ಸಿದ್ಧವಾದ ವರದಿಯೊಂದನ್ನು ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಬೇಕು. ಆ ಮೂಲಕ ಮಕ್ಕಳ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕೆನ್ನುವುದನ್ನು ಕೋರ್ಟ್ಗೆ ಮನವರಿಕೆ ಮಾಡಬೇಕು. ಈ ಕೆಲಸವನ್ನು ಸರ್ಕಾರ ಬಿಡದೇ ಮಾಡಬೇಕು ಎಂದರು.
ಕನ್ನಡ ಮಾತೃಭಾಷೆಯಾಗುವಂತೆ ಸಮರ್ಥ ವರದಿ ಸಲ್ಲಿಸುವ ಆಯೋಗ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ಅದಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಆದ್ದರಿಂದ ಸರ್ಕಾರ ಈಗಲಾದರೂ ಗಮನ ಹರಿಸಬೇಕೆಂದು ಚನ್ನಬಸಪ್ಪ ಒತ್ತಾಯಿಸಿದರು.
ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಕನ್ನಡ ನಿಜವಾದ ಶಕ್ತಿ ಪುಸ್ತಕಗಳಲ್ಲಿದೆ. ಆದ್ದರಿಂದ ಕನ್ನಡ ಪುಸ್ತಕಗಳನ್ನು ಓದುವುದನ್ನು ಉತ್ತೇಜಿಸುವ ಅಗತ್ಯವಿದೆ ಎಂದರು. ಬೆಂಗಳೂರಿನಂಥ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರೇ ವಿರಳವಾಗಿ, ಭಾಷೆಯ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆದರೆ ಈಗ ಅಂಥ ವಾತಾವರಣವಿಲ್ಲ.
ಕಾಲ ಬದಲಾಗಿದ್ದು, ಏನೆಲ್ಲಾ ಮಹತ್ವದ ವಿಚಾರಗಳು ಕನ್ನಡದಲ್ಲೂ ಸಿಗುವಂತಾಗಿದೆ. ಅದರಲ್ಲೂ ಮಹರ್ಷಿ ಅರವಿಂದರ ಸಂದೇಶಗಳು, ಯೋಗ ಮಾಹಿತಿಗಳು ಕನ್ನಡದಲ್ಲಿ ಸಿಗುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

