ಬೆಂಗಳೂರು ಗ್ರಾಮಾಂತರ

'ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಿ'

Published On :

ಮಾಗಡಿ: ಪ್ರತಿಯೊಬ್ಬ ಭಾರತೀಯನ ರಕ್ತ ಕಣ ಕಣದಲ್ಲೂ ಈ ನೆಲದ ಸಂಸ್ಕೃತಿ ಹಾಸು ಹೊಕ್ಕಾಗಿರುತ್ತದೆ. ಅದು ಅನಾವರಣಗೊಳ್ಳಬೇಕಾದರೆ ನಾವು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಸಿದ್ಧಗಂಗಾ ಮಠದ ಕಿರಿಯ ಸಿದ್ಧಲಿಂಗಸ್ವಾಮೀಜಿ  ಕರೆ ನೀಡಿದರು.
   ಅವರು ತಾಲೂಕಿನ ಸೋಲೂರು ಹೋಬಳಿ ಕಂಚಗಲ್ ಬಂಡೇಮಠದಲ್ಲಿ ಮಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ಅವರ ಜನ್ಮದಿನ ಪ್ರಯುಕ್ತ  ಭಕ್ತರು ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಆಧುನಿತಕತೆಗೂ ಮತ್ತು ನಾಗರಿಕತೆಗೂ ತುಂಬ ವ್ಯತ್ಯಾಸವಿದೆ. ಸಂಸ್ಕಾರಯುತವಾದ ಬದುಕು ನಡೆಸಿ, ಆಧುನಿಕ ವಿಚಾರಧಾರೆಗಳನ್ನು ತಮ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಅಳವಡಿಸಿಕೊಂಡರೆ ವ್ಯಕ್ತಿಯ ಜತೆಗೆ ನಾಡು ಕೂಡ ಸಮೃದ್ಧಿಯಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
   ಶಿವಗಂಗೆ ಮೇಲಣ ಗವಿಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಾಡಿನ ಕವಿಪುಂಗವರು ಸಂತರ ಬದುಕಿನಲ್ಲಿ ಬರಹದಲ್ಲಿ ಸಾಧನೆಗಳ ಕುರಿತು ಅವರ ದಾರಿಗಳ ಬಗ್ಗೆ ತಿಳಿಸಿದ್ದಾರೆ.
 ಸಮರ್ಥ ಯುವಶಕ್ತಿಯಿಂದ ಮಾತ್ರ ಸುಭದ್ರ ಭಾರತ ನಿರ್ಮಾಣ ಸಾಧ್ಯವಿದೆ ಎಂದರು.
    ಸಮಾಜ ದಿಕ್ಕು ತಪ್ಪಿದಾಗ ಮಠಗಳು ಎಚ್ಚರಿಸುವ ಕೆಲಸ ಮಾಡುತ್ತದೆ. ಮಠಾಧಿಪತಿಗಳು ತಪ್ಪು ಮಾಡಿದರೆ ಎಚ್ಚರಿಸಬೇಕಾದುದು ಸಮಾಜದ ಕರ್ತವ್ಯವಾಗಬೇಕು. ಹೀಗೆ ಪರಸ್ಪರ ಜಾಗೃತಿಭಾವನೆಯುಳ್ಳ ಬದುಕು ನಡೆದಾಗ ಮಾತ್ರ ನವಭಾರತ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಕಂಚಗಲ್ ಬಂಡೇಮಠಾಧ್ಯಕ್ಷ ಬಸವಲಿಂಗಸ್ವಾಮೀಜಿ ತಿಳಿಸಿದರು.
  ಇದೇ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು  ಕಂಚಗಲ್ ಬಂಡೇಮಠದ ಬಸವಲಿಂಗಸ್ವಾಮಿಗಳ ಜನ್ಮ ದಿನವನ್ನು ಭಕ್ತಿಯಿಂದ ಆಚರಿಸುವ ಮೂಲಕ ಶ್ರೀಗಳನ್ನು  ಗೌರವಿಸಿದರು.
   ಚನ್ನಪಟ್ಟಣದ ಬೇವೂರು ಮಠದ ಮೃತ್ಯಂಜಯಸ್ವಾಮೀಜಿ, ಶಿವರುದ್ರಸ್ವಾಮೀಜಿ, ಬಸವರಮಾನಂದಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರಸ್ವಾಮೀಜಿ, ಕಂಬಾಳು ಮಠದ ಚನ್ನವೀರಯ್ಯ ಸ್ವಾಮೀಜಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ. ದಯಾನಂದ್, ನೆಲಮಂಗಲ ಪ್ರಾಧಿಕಾರದ ಮಾಜಿ ಅಧ್ಯಕ್ಷ  ಪಿ.ಆನಂದ್  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.