ಬೆಂಗಳೂರು ಗ್ರಾಮಾಂತರ

ಜೆಡಿಎಸ್‌ನಲ್ಲಿ ಹೊಸ ಬಿಕ್ಕಟ್ಟು

Published On :

ವಿಶೇಷ ವರದಿ
ರಾಮನಗರ: ಜಿ.ಪಂ.ನ ಮೂರನೇ 20 ತಿಂಗಳ ಅವಧಿ ಅಧ್ಯಕ್ಷ ಗಾದಿಗಾಗಿ ಪ್ರಸಕ್ತ ಅವಧಿಯ ಅಧಿಕಾರ ವಂಚಿತೆ ಸುಧಾರಾಜು ಪಟ್ಟು ಹಿಡಿದಿದ್ದು, ಹೊಂಗನೂರು ಮೀಸಲು ಕ್ಷೇತ್ರದ ಸದಸ್ಯ ರಮೇಶ್ ಕೂಡ ರೇಸ್‌ಗೆ ಇಳಿದಿರುವುದು ಜೆಡಿಎಸ್‌ನಲ್ಲಿ ಹೊಸದೊಂದು ಬಿಕ್ಕಟ್ಟು ಮೂಡಿಸಿದೆ.  ಈವರೆಗೆ ಜೆಡಿಎಸ್ ಪಡಸಾಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಲ್.ಚಂದ್ರ, ವಿಜಯಕುಮಾರ್, ಧನಂಜಯ ಮತ್ತು ರಘುಕುಮಾರ್ ಹೆಸರು ಕೇಳಿ ಬರುತ್ತಿದ್ದವು. ಇದೀಗ ತಮಗೂ ಒಂದು ಪಾಲು ಇರಲಿ ಎಂದು ಸುಧಾರಾಜು, ರಮೇಶ್ ಹೊಸ ವರಸೆ ತೆಗೆಯಲಾರಂಭಿಸಿದ್ದಾರೆ.
ಸಮಾಧಾನಪಡಿಸಲು ಯತ್ನ
ಹಾಲಿ ಚಾಲ್ತಿಯಲ್ಲಿರುವ 2ನೇ 20 ತಿಂಗಳ ಅವಧಿಯಲ್ಲಿ ಕಡೆಯ 4 ತಿಂಗಳು ಸುಧಾರಾಜು ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಜೆಡಿಎಸ್ ಮುಖಂಡರು ವಾಗ್ದಾನ ನೀಡಿದ್ದರು. ಆದರೆ, ವಚನ ಪಾಲಿಸದ ಪಕ್ಷದ ಬಗ್ಗೆ ಸುಧಾರಾಜು ಅಸಮಾಧಾನ ಹೊಂದಿರುವುದು ಗುಟ್ಟಿನ ಸಂಗತಿಯಲ್ಲ.  ಈ ಬಾರಿ ಹೇಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆ ಹುದ್ದೆಯನ್ನು ಸುಧಾರಾಜು ಅವರಿಗೆ ಪೂರ್ಣ 20 ತಿಂಗಳು ಬಿಟ್ಟುಕೊಡುವುದು ಮತ್ತು ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನದ ಭರವಸೆ ನೀಡುವುದರೊಂದಿಗೆ ಸಮಾಧಾನಪಡಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.  ಕಳೆದ ಬಾರಿಯೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದ ಸುಧಾರಾಜು ಅಲ್ಪಾವಧಿಗಾದರೂ ಸರಿಯೇ ಅಧ್ಯಕ್ಷ ಸ್ಥಾನವೇ ಬೇಕೆಂದು ಪಟ್ಟು ಹಿಡಿದಿದ್ದರು. ಈಗಲೂ ಅವರ ಚಿತ್ತ ಅಧ್ಯಕ್ಷ ಹುದ್ದೆಯ ಮೇಲೆ ನೆಟ್ಟಿದ್ದು, ಅದಕ್ಕಾಗಿಯೇ ಪೈಪೋಟಿಗೆ ಇಳಿದಿದ್ದಾರೆನ್ನಲಾಗಿದೆ.
ಪೊಲೀಸಪ್ಪ ಪ್ರಯತ್ನ
ಮೊದಲ 20 ತಿಂಗಳ ಅವಧಿಯಲ್ಲಿ ಯು.ಪಿ.ನಾಗೇಶ್ವರಿ ರಾಮಚಂದ್ರ ಅಧ್ಯಕ್ಷೆಯಾದಾಗ ಅವರನ್ನು ಬೆಂಬಲಿಸಿ ರಮೇಶ್ ವಿಪ್ ಉಲ್ಲಂಘಿಸಿದ್ದರು. ನಂತರದಲ್ಲಿ ಅವರೂ ಪಕ್ಷನಿಷ್ಠೆ ಮೆರೆದಿದ್ದು, ತಮಗೂ ಅಧ್ಯಕ್ಷ ಸ್ಥಾನ ಕಲ್ಪಿಸಬೇಕೆನ್ನುವ ಬೇಡಿಕೆಯನ್ನು ವರಿಷ್ಠರ ಮುಂದಿಡಲು ನಿರ್ಧರಿಸಿದ್ದಾರೆ.  ನಿವೃತ್ತ ಡಿವೈಎಸ್ಪಿಯೂ ಆಗಿರುವ ರಮೇಶ್ ಅಧ್ಯಕ್ಷ ಹುದ್ದೆಗೆ ನಾನೂ ಒಂದು ಕೈ ನೋಡಿಯೇ ಬಿಡಬೇಕು ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ನಾಗೇಶ್ವರಿ ರಾಮಚಂದ್ರ ಬೆಂಬಲ ನೀಡುವರೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಹಲಗಿನ ಮೇಲಿನ ನಡಿಗೆ
ರಮೇಶ್ ಈಗಾಗಲೇ ಒಮ್ಮೆ ವರಿಷ್ಠರಿಗೆ ಸಡ್ಡು ಹೊಡೆದಿದ್ದವರು. ಸುಧಾರಾಜು ಅವರು  ತಮ್ಮ ಮಾತು ಕೇಳುತ್ತಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲವೆಂದು ಚನ್ನಪಟ್ಟಣದ ಜೆಡಿಎಸ್ ಮುಖಂಡರೇ ವರಿಷ್ಠರ ಬಳಿಗೆ ದೂರು ಹೊತ್ತೊಯ್ದಿದ್ದರು.  ಈ ಹಿನ್ನೆಲೆಯಲ್ಲಿ ರಮೇಶ್ ಮತ್ತು ಸುಧಾರಾಜು ವಿಷಯವನ್ನು ಜೆಡಿಎಸ್ ಹಗುರವಾಗಿ ಪರಿಗಣಿಸುವಂತಿಲ್ಲ.  ತಮಗೆ ಅವಕಾಶ ನಿರಾಕರಿಸುವ ಕಠಿಣ ನಿರ್ಧಾರವನ್ನು ಪಕ್ಷ ಕೈಗೊಂಡಿದ್ದೇ ಆದರೆ, ಅವರಿಬ್ಬರೂ ಟಾಂಗ್ ನೀಡಲೂಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.