ಚುನಾವಣೆ ನಂತರ ಬಿಎಂಟಿಸಿ 'ಬರೆ' ಏಕೆ?
ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಯನ್ನು ಬಿಎಂಟಿಸಿ ಪ್ರತಿ ಬಾರಿಯೂ ಚುನಾವಣಾ ನಂತರವೇ ಮಾಡುತ್ತದೆ ಏಕೆ? ಒಂದು ವೇಳೆ ದರ ಏರಿಸುವ ಅನಿವಾರ್ಯವಿದ್ದರೆ ಚುನಾವಣೆಗೂ ಮೊದಲೇ ಪ್ರಕಟಿಸಬಹುದಿತ್ತು. ಅಲ್ಲವೇ?
ಇದು ಮತದಾರರಿಗೆ ಮಾಡಿದ ವಂಚನೆ ತಾನೇ? ಬಿಎಂಟಿಸಿ ಪ್ರಯಾಣ ದರ ದಿಢೀರ್ ಹೆಚ್ಚಳದಿಂದ ಕಂಗಾಲಾದ ಪ್ರಯಾಣಿಕರು ಆಕ್ರೋಶದಿಂದ ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಆದರೆ ಪ್ರಶ್ನೆಗಳಿಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಗುವುದಿಲ್ಲ. ಏಕೆಂದರೆ, ಪ್ರತಿ ಬಾರಿ ಚುನಾವಣೆ ನಂತರ ಪ್ರಯಾಣ ದರ ಏರಿಕೆ ಹಿಂದೆ ಸರ್ಕಾರವೇ ನೇರವಾಗಿ ನಿಂತಿರುತ್ತದೆ. ಆದ್ದರಿಂದ ಪ್ರಯಾಣ ದರ ಏರಿಕೆ ಸುಳಿವನ್ನು ಸಚಿರಾಗಲಿ, ಶಾಸಕರಾಗಲಿ ಚುನಾವಣಾ ಪೂರ್ವದಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹೀಗಾಗಿಯೇ ಕಳೆದ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಿಎಂಟಿಸಿ ಪ್ರಯಾಣ ದರವನ್ನು ಶೇ.16ರಷ್ಟು ಹೆಚ್ಚಿಸಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿತ್ತು. ಇದರಿಂದ ಪ್ರಯಾಣಿಕರು ಚೇತರಿಸಿಕೊಳ್ಳುವ ಮುನ್ನ, ಅದೂ ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವ ಮುನ್ನ ಶೇ.15ರಷ್ಟು ದರ ಏರಿಸಿ ಪ್ರಯಾಣಿಕರನ್ನು ಪೆಚ್ಚಾಗಿಸಿದೆ.
ಅಂದಹಾಗೆ ಈಗ ಬಿಎಂಟಿಸಿ ಪ್ರಯಾಣ ದರವನ್ನು ಶೇ.15ರಷ್ಟು ಏರಿಸಿರುವ ಬಗ್ಗೆ ಜನವರಿಯಲ್ಲೇ ಪ್ರಸ್ತಾಪವಾಗಿತ್ತು. ಆದರೆ ಇದಕ್ಕೆ ನಗರದ ಸಚಿವರು, ಶಾಸಕರು ಅವಕಾಶ ನೀಡಿರಲ್ಲಿಲ್ಲ. ಅಷ್ಟೇ ಏಕೆ ಮುಖ್ಯಮಂತ್ರಿಯಾದಿಯಾಗಿ ಯಾವೊಬ್ಬ ರಾಜಕಾರಣಿಗಳೂ ಇದಕ್ಕೆ ಸಮ್ಮತಿಸಲಿಲ್ಲ. ಹೀಗಾಗಿ ದರ ಏರಿಸುವ ಕಡತ ಧೂಳಿನಲ್ಲಿತ್ತು.
ಚುನಾವಣೆ ಮುಗಿದು ನೀತಿ ಸಂಹಿತೆ ಬಹುತೇಕ ಸಡಿಲವಾಗುತ್ತಿದ್ದಂತೆ ಹಳೇ ಪ್ರಸ್ತಾಪಕ್ಕೆ ದಿಢೀರ್ ಜೀವ ಬಂತು. ರಾತ್ರೋರಾತ್ರಿ ದರ ಏರಿಕೆ ಘೋಷಣೆಯಾಗಿತು ಎಂದು ಸಂಸ್ಥೆ ಹಿರಿಯ ಅಧಿಕಾರಿಗಳೇ ಹೇಳುತ್ತಾರೆ. ಬಿಎಂಟಿಸಿ ಬಸ್ ದರ ಏರಿಸಿರುವುದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬಿಎಂಟಿಸಿ ನಾಲ್ಕು ಬಾರಿ ಏರಿಸಿದಂತಾಗಿದೆ.
ಪಾಸುಗಳೇ ದೊಡ್ಡ ಹೊರೆ
ಪೊಲೀಸರು, ಭದ್ರತಾ ಸಿಬ್ಬಂದಿ, ಎಲ್ಲಾ ರೀತಿಯ ವಿಕಲಚೇತನರು, ವಿದ್ಯಾರ್ಥಿಗಳು, ಹಿರಿಯ ಪತ್ರಕರ್ತರು ಹಾಗೂ ವಿಶೇಷ ಸೇವೆಗಳಿಗಾಗಿ ಗುರುತಿಸಿದವರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಬಸ್ಪಾಸ್ ವ್ಯವಸೆ ಕಲ್ಪಿಸಿದೆ. ಅದಕ್ಕೆ ತಗಲುವ ವೆಚ್ಚವನ್ನು ನಿಯಮದಂತೆ ಸರ್ಕಾರ ಭರಿಸಬೇಕು. ಆದರೆ ಅದು ಬಿಎಂಟಿಸಿಗೆ ಸಿಗುತ್ತಿಲ್ಲ.ಬಿಎಂಟಿಸಿಯ ರಿಯಾಯಿತಿ ಮತ್ತು ಉಚಿತ ಪಾಸ್ಗಳಿಗೆಂದು ವರ್ಷಕ್ಕೆ 380ಕೋಟಿ ವೆಚ್ಚವಾಗುತ್ತದೆ. ಇದರಲ್ಲಿ ಸರ್ಕಾರ ಈತನಕ ಭರಿಸಿಕೊಟ್ಟಿರುವುದು ಕೇವಲ 170ಕೋಟಿಗಳನ್ನು ಮಾತ್ರ. ಅಂದರೆ ಸರ್ಕಾರ ತನ್ನ ಪಾಲಿನ 210ಕೋಟಿ ನೀಡಿಲ್ಲ.
1 ವರ್ಷ ದರ ಏರಿಕೆ ಮಾಡಲ್ಲ
ಮುಂದಿನ ವರ್ಷ ಮಾರ್ಚ್ ಅಂತ್ಯದವರೆಗೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವುದಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಡೀಸೆಲ್ ದರ ಏರಿಕೆ ಮಾತ್ರವಲ್ಲದೆ ಉಳಿದ ಯಾವುದೇ ಸಂದರ್ಭದಲ್ಲೂ ಇನ್ನೊಂದು ವರ್ಷ ಪ್ರಯಾಣ ದರ ಏರಿಕೆ ಮಾಡುವುದಿಲ್ಲ. ಇದು ಪ್ರಯಾಣಿಕರಿಗೆ ಬಿಎಂಟಿಸಿ ನೀಡುವ ವಾಗ್ದಾನ ಎಂದು ಅವರು ತಿಳಿಸಿದ್ದಾರೆ. ಸಂಸ್ಥೆಯ ನಷ್ಟ ಭರಿಸಲು ದರ ಏರಿಕೆ ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ ಎಂದರು.
ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

