ಬೆಂಗಳೂರು ಗ್ರಾಮಾಂತರ

ಸ್ಥಳೀಯ ಸಂಸ್ಥೆಯಲ್ಲಿ ಸ್ತ್ರೀ ಸಬಲೀಕರಣ ಅಗತ್ಯ

Published On :

ಕ.ಪ್ರ. ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಏ. 30
ಕರ್ನಾಟಕ ಸ್ಥಳೀಯ ನಗರ ಸರ್ಕಾರಗಳ ಚುನಾಯಿತ ಮಹಿಳಾ ಸದಸ್ಯರ ನಿಯೋಗ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ ಅವರನ್ನು ಭೇಟಿ ಮಾಡಿ ಮಹಿಳಾ ಸಬಲೀಕರಣ ವಿಚಾರದಲ್ಲಿ ಹಲವು ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದೆ.
ಈ ಕುರಿತು ಮಾಹಿತಿ ನೀಡಿದ ಮಹಿಳಾ ಸದಸ್ಯರ ನಿಯೋಗದ ಸದಸ್ಯೆ ಪ್ರಮೀಳಾ ಮಹದೇವ್, ನಿಯೋಗದ ಮನವಿ ಸ್ವೀಕರಿಸಿದ ಸಚಿವರು, ಈ ಕುರಿತು ಸದನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದೇ ರೀತಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೂ ಸುತ್ತೋಲೆ ಕಳುಹಿಸಿ, ಚುನಾಯಿತ ಮಹಿಳಾ ಸದಸ್ಯರ ಸಂಪರ್ಕ ಸಂಖ್ಯೆಗಳನ್ನು ಅಧಿಕೃತವಾಗಿ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಪ್ರಕಟಿಸುವಂತೆ ಸೂಚಿಸಲು ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದರು.
ಅದೇ ರೀತಿ ಸ್ಥಳೀಯ ಸಂಸ್ಥೆಗಳಿಗೆ ನಿಗಧಿತ ಸಮಯದಲ್ಲಿ ಚುನಾವಣೆ ನಡೆಸುವುದು, ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚವನ್ನು ಆಯೋಗ ನಿಗಧಿಮಾಡಬೇಕು. 5 ವರ್ಷಗಳ ಪೂರ್ಣ ಪ್ರಮಾಣದ ವಾರ್ಡ್ ಮತ್ತು ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಚುನಾವಣೆಗೆ ಮುನ್ನ ಪ್ರಕಟಿಸಬೇಕು. ಆವರ್ತನದ ಪಟ್ಟಿ ಖಚಿತಪಡಿಸಿಪ್ರಕಟಿಸಬೇಕು. ಈ ಚುನಾವಣಾ ಪ್ರಕ್ರಿಯೆಗಳಲ್ಲಿ ನ್ಯಾಯಾಂಗ ಅಡ್ಡಿಬಾರದಂತೆ ಅವಶ್ಯಕ ಬದಲಾವಣೆ ತರಬೇಕು. ಸದಸ್ಯರು ರಾಜಿನಾಮೆ, ಪಕ್ಷಾಂತರ ಮಾಡಿದಾಗ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ನಿಷೇಧಿಸಲು ಕಾನೂನು ತಿದ್ದುಪಡಿ ಮಾಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಸಾಸಕರಿಗಿರುವ ಪದನಿಮಿತ್ತ ಸದಸ್ಯತ್ವ ರದ್ದು ಪಡಿಸಿ, ಬದಲಾಗಿ ಕನಿಷ್ಠ 3 ತಿಂಗಳಿಗೊಮ್ಮೆಯಾದರೂ ಜಂಟಿ ಸಮಾಲೋಚನಾ ಸಭೆ ನಡೆಸಲು ಯೋಚಿಸಬೇಕು ಎಂದು ಮನವಿ ಮಾಡಲಾಗಿದೆ.
ಮೇಲ್ಮನೆ-ಕೆಳಮನೆಗಳ ಆಸನ ವ್ಯವಸ್ಥೆಯಂತೆ ಸ್ಥಳೀಯ ಹಂತದಲ್ಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಾಧ್ಯಮಕ್ಕೆ ಪ್ರತ್ಯೇಕ ಆಸನ ವ್ಯವಸ್ಥೆ ಇರಬೇಕು. ಸಭೆಗಳಲ್ಲಿ ಸದಸ್ಯರಿಗೂ ಸ್ಥಾನ ನಿಗದಿ ಅಗತ್ಯ. ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ವಿಶ್ರಾಂತಿ ಹಾಗೂ ಚರ್ಚಾ ಕೊಠಡಿ ನೀಡಬೇಕು. ಮಹಿಳಾ ಪ್ರತಿನಿಧಿಗಳು ತಮ್ಮ ವಾರ್ಡುಗಳಲ್ಲಿ ಅವಶ್ಯಕತೆಯುಳ್ಳವರ ಸಹಾಯಕ್ಕೆ ಬೇಕಾಗುವ ವಾತಾವರಣ ಮತ್ತು ವ್ಯವಸ್ಥೆ ಬದಲಿಸುವ ಪ್ರಯತ್ನ ಮಾಡಬೇಕಿರುವುದರಿಂದ ಗೌರವಧನ ಹೆಚ್ಚಿಸಬೇಕು. ಮಾಸಿಕ ಸಭೆಗಳ ನಡಾವಳಿ ಪುಸ್ತಕದ ಕಾರ್ಯಸೂಚಿಯಲ್ಲಿ ನಮೂದಿಸಲಾದ ವಿಷಯದ ಬಗ್ಗೆ ನಡೆದ ಚರ್ಚೆಯನ್ನು ಸಂಕ್ಷಿಪ್ತವಾಗಿ ದಾಖಲಿಸಿದ ನಂತರ ಸಭೆ ಕೈಗೊಂಡ ನಿರ್ಣಯಗಳನ್ನು ಖಚಿತವಾಗಿ ದಾಖಲಿಸಬೇಕು. 7 ದಿನದೊಳಗೆ ಸದಸ್ಯರಿಗೆ ತಲುಪಿಸಬೇಕು. ಸಭೆಗಳಲ್ಲಿ ಆಡಳಿತ ಭಾಷೆ ಬಳಕೆ ಕಡ್ಡಾಯಗೊಳಿಸಬೇಕು. ಇತರ ಭಾಷೆ ಮಾತನಾಡುವಾಗ ಸಂಕ್ಷಿಪ್ತ ಅನುವಾದ ಸಭೆಗೆ ತಿಳಿಸಬೇಕು ಎಂದು ಆಗ್ರಹಿಸಲಾಗಿದೆ.
ಶೇ.50 ಮೀಸಲಾತಿಗೆ ಒತ್ತಾಯ: ರಾಜಕೀಯ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಕಾರ್ಯಯೋಜನೆಗಳ ಕಾರ್ಯಗತಕ್ಕೆ ಪೂರಕವಾಗಿ ತರಬೇತಿ ನೀಡಬೇಕು. ಅಧ್ಯಯನ ಪ್ರವಾಸ ಆಯೋಜಿಸಬೇಕು. ಗುಣಾತ್ಮಕ ಚರ್ಚೆ ಏರ್ಪಡಿಸಬೇಕು.
ಚುನಾಯಿತ ಮಹಿಳಾ ಸದಸ್ಯರು ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಎಲ್ಲ ಸ್ತರಗಳಲ್ಲಿ ಶೇ.50 ಮೀಸಲಾತಿ ನೀಡಬೇಕು. ಎಲ್ಲ ಸಮಿತಿಗಳಿಗೆ ಗುಪ್ತ ಮತದಾನ ಪದ್ಧತಿ ಮೂಲಕ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಪ್ರಾತಿನಿಧಿಕ ಮಹಿಳಾ ಸದಸ್ಯರು ನಿಯೋಗದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.