ಬೆಂಗಳೂರು ಗ್ರಾಮಾಂತರ

ಕೇಂದ್ರದಿಂದ ರು. 110 ಕೋಟಿ ಮಂಜೂರು

Published On :

ಕ.ಪ್ರ.ವಾರ್ತೆ ,  ಹೊಸಕೋಟೆ ,  ಫೆ.5
ಕೇಂದ್ರ ಸರಕಾರ ಪಟ್ಟಣದ ಸಮಗ್ರ ಅಭಿವೃದ್ಧಿಗೆ 110ಕೋಟಿ ರು.ಗಳನ್ನು ಮಂಜೂರು ಮಾಡಿದೆ ಎಂದು ಶಾಸಕ ಎನ್.ನಾಗರಾಜ್ ಹೇಳಿದರು.
ಅವರು ಪುರಸಭೆ ಆವರಣದಲ್ಲಿ ನಾನಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. 2012-13 ಮತ್ತು 2013-14ನೇ ಸಾಲಿನಲ್ಲಿ ಸರಕಾರದ ವತಿಯಿಂದ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಿರುವ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಮೀಸಲಿರುವ ನಿಧಿಗೂ ಮೀರಿ ಅರ್ಜಿಗಳನ್ನು ಸ್ವೀಕರಿಸಿದ್ದು ಮುಂದಿನ ಸಾಲಿನಲ್ಲಿ ಪರಿಗಣಿಸಲಾಗುವುದು. ಸರಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 5 ಎಕರೆ ಜಮೀನನ್ನು ಬಡಜನರಿಗೆ ನಿವೇಶನಗಳನ್ನು ವಿತರಿಸಲು ಮೀಸಲಿಡುವಂತೆ ಸೂಚಿಸಿದ್ದು ಲಭ್ಯತೆಯಿಲ್ಲದಿದ್ದಲ್ಲಿ ಸ್ವಾಧೀನಪಡಿಸಿಕೊಳ್ಳಲು  ಅವಕಾಶ ಕಲ್ಪಿಸಲಾಗಿದೆ. ಪಟ್ಟಣದಲ್ಲಿ ಹಿಂದೆ 15 ದಿನಗಳಿಗೊಮ್ಮೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಅವಧಿಯನ್ನು ಪ್ರಸ್ತುತ 4
ದಿನಗಳಿಗೆ ಇಳಿಸಲಾಗಿದೆ.ಇದಕ್ಕಾಗಿ ಕಳೆದ 8 ತಿಂಗಳ ಅವಧಿಯಲ್ಲಿ 12 ಕೊಳವೆಬಾವಿಗಳನ್ನು ಕೊರೆದು
ಅಗತ್ಯ ಪಂಪ್ ಅಳವಡಿಸಲು 60 ಲಕ್ಷ ರು.ಗಳನ್ನು ವೆಚ್ಚ ಮಾಡಲಾಗಿದೆ. 2006ರಲ್ಲಿ ಸರಕಾರ ಮಂಜೂರು ಮಾಡಿದ್ದ 3 ಕೋಟಿ ರು.ಗಳ ವೆಚ್ಚದಲ್ಲಿ ಎಲೆಮಲ್ಲಪ್ಪಶೆಟ್ಟಿ ಕೆರೆ ನೀರು ದೊಡ್ಡಕೆರೆಗೆ ಹರಿದುಬರುತ್ತಿರುವ ಕಾರಣದಿಂದಾಗಿ ಪಟ್ಟಣದ ನೀರಿನ ಸಮಸ್ಯೆ ಗಣನೀಯವಾಗಿ ಸುಧಾರಣೆಗೊಂಡಿದೆ. ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಪುರಸಭೆ ವ್ಯಾಪ್ತಿಯಲ್ಲಿ 16 ಕೊಳವೆ ಬಾವಿಗಳನ್ನು ಕೊರೆಯಲು ನಿಗದಿಪಡಿಸಲಾಗಿದೆ.
ಮಾದರಿ ಪುರಸಭೆ: ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಿ ಪಟ್ಟಣವನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಮಾದರಿ ಪುರಸಭೆಯನ್ನಾಗಿಸಲಾಗುವುದು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಮ್ಮ ನಿಧಿಯಿಂದ ತಾಲೂಕಿನ ಅಭಿವೃದ್ಧಿಗೆ 2 ಕೋಟಿ ರು.ಗಳನ್ನು ನೀಡಿದ್ದು, ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗಳಿಂದ 2.5 ಕೋಟಿ ರು.ಗಳ ವೆಚ್ಚದಲ್ಲಿ ಕೊಳವೆ ಬಾವಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ.ಗ್ರಾಮೀಣ ಪ್ರದೇಶದ 20 ರಸ್ತೆಗಳನ್ನು ಸಹ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಅರ್ಜಿ ಸ್ವೀಕಾರ: ತಾಲೂಕಿನಲ್ಲಿ ನೂತನ ಪಡಿತರ ಚೀಟಿಗಾಗಿ 18 ಸಾವಿರ, ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 6500ರಲ್ಲಿ 2500 ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪಡಿತರ ವಿತರಣೆ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳಿದ್ದು ತಪ್ಪಿತಸ್ಥ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾಜಪೇಯಿ ಆರೋಗ್ಯ ಯೋಜನೆಯಡಿ 57 ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಚೆಕ್‌ಗಳನ್ನು ವಿತರಿಸಲಾಗುವುದು. ಜನಪ್ರತಿನಿಧಿಗಳು ಬಡಜನರಿಗೆ ಸೌಲಭ್ಯಗಳನ್ನು ಒದಗಿಸಲು ಇಚ್ಛಾಶಕ್ತಿ ಹೊಂದಬೇಕಾದ್ದು ಅತ್ಯವಶ್ಯವಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.