ಬೆಂಗಳೂರು ಗ್ರಾಮಾಂತರ

ಕೊನೆಗೂ ತಾ.ಪಂ ಅಧ್ಯಕ್ಷೆ ಪವಿತ್ರಾ ರಾಜಿನಾಮೆ

Published On :

ಚನ್ನಪಟ್ಟಣ: ತಾ.ಪಂ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ಮೀನಮೇಷ ಏಣಿಸುತ್ತಿದ್ದ ಪವಿತ್ರಾ ಕೊನೆಗೂ ಪಟ್ಟು ಸಡಿಲಿಸಿ, ಪಟ್ಟ ಬಿಟ್ಟುಕೊಡುವ ಮನಸ್ಸು ಮಾಡಿದ್ದು ಈ ಸಂಬಂಧ ಜಿಲ್ಲಾಧಿಕಾರಿಗೆ ತಮ್ಮ ರಾಜಿನಾಮೆ ಪತ್ರಸಲ್ಲಿಸಿದ್ದಾರೆ. ಒಪ್ಪಂದದಂತೆ ಒಂದು ತಿಂಗಳ ಹಿಂದೆಯೇ ರಾಜಿನಾಮೆ ನೀಡಬೇಕಿದ್ದ ಪವಿತ್ರಾ ತಿಂಗಳು ಕಳೆದರೂ ಗಾದಿ ಬಿಟ್ಟು ಕೊಡಲು ಮನಸ್ಸು ಮಾಡಲಿಲ್ಲ. ಹಿಂದಿನ ಅಧ್ಯಕ್ಷರಂತೆ ಇವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು 6 ತಿಂಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಮುಂದೇನು ಎಂಬು ಚಿಂತೆಗೀಡಾದರು. ಕಳೆದ ಬುಧವಾರ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಜೆಡಿಎಸ್ ಸದಸ್ಯರು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದಾಗಿ ಸಭೆ ರದ್ದಾಯಿತು. ಇದರಿಂದ ಎಚ್ಚೆತ್ತುಕೊಂಡ ಪವಿತ್ರಾ ಜಿಲ್ಲಾಧಿಕಾರಿಗಳಿಗೆ  ರಾಜಿನಾಮೆ ಸಲ್ಲಿಸಿದ್ದು ರಾಜಿನಾಮೆ ಅಂಗೀಕಾರಗೊಂಡ ಬಳಿಕ  ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಪಶು ಆರೋಗ್ಯ ತಪಾಸಣಾ ಶಿಬಿರ
ಕನಕಪುರ: ಲಯನ್ಸ್ ಮತ್ತು ಲಿಯೋಕ್ಲಬ್ ಕನಕಪುರ ವತಿಯಿಂದ ಸೋರೇಕಾಯಿದೊಡ್ಡಿ  ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಂತು ನಿವಾರಣಾ ಲಸಿಕೆ ನೀಡಿಕೆ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಜಿಪಂ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ ನೆರವೇರಿಸಿದರು. ಲಯನ್ಸ್ ಅಧ್ಯಕ್ಷ ಕೆ.ಜಿ.ಸತೀಶ್ ಅಧ್ಯಕ್ಷತೆ ವಹಿಸಿದ್ದರು.  ಶಿಬಿರದ ಅಂಗವಾಗಿ ಗ್ರಾಮದಲ್ಲಿನ 458 ಹಸುಗಳಿಗೆ ಹಾಗೂ 930 ಕುರಿ-ಮೇಕೆಗಳಿಗೆ ಜಂತು ನಿವಾರಣಾ ಲಸಿಕೆ ನೀಡಲಾಯಿತು.
ಭಾರತೀಯ ಜೀವವಿಮಾ ನಿಗಮದಿಂದ ಸಮಾಜಮುಖಿ ಕಾರ್ಯ: ಗೋಪಾಲಕೃಷ್ಣ
ಕ.ಪ್ರ.ವಾರ್ತೆ ,  ಕನಕಪುರ ,  ಫೆ.5
ವಿಶ್ವದ ಬೃಹತ್ ವಿಮಾಸಂಸ್ಥೆಗಳಲ್ಲಿ ಒಂದಾದ ಭಾರತೀಯ ಜೀವವಿಮಾ ನಿಗಮ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಿ ಗೌರವಿಸುತ್ತಿದೆ ಎಂದು ಎಲ್‌ಐಸಿ ಹಿರಿಯ ಅಧಿಕಾರಿ ಗೋಪಾಲಕೃಷ್ಣ ಹೇಳಿದ್ದಾರೆ.
 ಅವರು ಹಾರೋಹಳ್ಳಿ ಹೋಬಳಿ ದೊಡ್ಡಬಾದಗೆರೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ  ಭಾರತೀಯ ಜೀವವಿಮಾ ನಿಗಮದ ಕನಕಪುರ ಶಾಖೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರಾಂಶುಪಾಲ ಎಸ್. ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಜಿ.ಡಿ. ಸಂತೋಷ್, ಜಿ.ಎನ್. ಸಾಗರ್, ಕು.ಸುನಂದಾಬಾಯಿ, ಕು.ಆರ್.ರೇಣುಕಾ ಹಾಗೂ ಕು.ಲಲಿತಾಬಾಯಿ ಅವರನ್ನು ಪುರಸ್ಕರಿಸಲಾಯಿತು.
ಹಾಲು ಉತ್ಪಾದಕರ ಸಂಘ ಚುನಾವಣೆ: ಕೈ, ಜೆಡಿಎಸ್ ಸಮಪಾಲು
ವಿಜಯಪುರ: ಪಟ್ಟಣದ 2014ರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಸಮರ ಜೋರಾಗಿ ನಡೆಯಿತು. 11 ಸದಸ್ಯರ ಸ್ಥಾನಕ್ಕೆ, 22 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಇದರಲ್ಲಿ ಕಾಂಗ್ರೆಸ್ ಬೆಂಬಲಿತ 5, ಜೆಡಿಎಸ್ ಬೆಂಬಲಿತ 5, ಒಂದು ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ವಿ.ರವಿ (275), ಕೆ.ವೆಂಕಟೇಶ್ (240), ಟಿ. ವೆಂಕಟೇಶ್ (220), ಆರ್.ಅಮರ್ ನಾರಾಯಣ ಮೂರ್ತಿ (218), ಮಹಿಳಾ ಮೀಸಲಾತಿಯಿಂದ ಬಿ. ಶ್ವೇತಾ (265), ಕಾಂಗ್ರೆಸ್ ಬೆಂಬಲಿತ ಆರ್.ನಾಗರಾಜ್ (311) , ಎಸ್.ಮುನಿಸೊಣ್ಣೇಗೌಡ (251),
ಪಿ.ವಿಜಯಕುಮಾರ್ (232) ಪರಿಶಿಷ್ಟ ಜಾತಿ ಪಂಗಡ ಮೀಸಲಾತಿಯಿಂದ ಎಂ.ನಾರಾಯಣಸ್ವಾಮಿ, ಮಹಿಳಾ ಮೀಸಲಾತಿಯಿಂದ ಭಾಗ್ಯಮ್ಮ, ಪಕ್ಷೇತರ ಅಭ್ಯರ್ಥಿ ಕೆ.ವಿ. ಮುನಿರಾಜು ಗೆಲವು ಸಾಧಿಸಿದ್ದಾರೆ. ನಂತರ ಬೆಳವಣೆಯಲ್ಲಿ ಜೆಡಿಎಸ್ ಬೆಂಬಲಿತ ವಿ.ರವಿ ಹಾಗೂ ಬಿ.ಶ್ವೇತಾ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ವಿ.ಮುನಿರಾಜು, ಕಾಂಗ್ರೆಸ್ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಸಚಿವರ ದಿಢೀರ್ ಭೇಟಿ, ಪರಿಶೀಲನೆ
ಕ.ಪ್ರ.ವಾರ್ತೆ ,  ಆನೇಕಲ್ಲು ,  ಫೆ.5
ಗುಡ್ ಮಾರ್ನಿಂಗ್ ಡಾಕ್ಟರ್ಸ್. ಎಲ್ಲ ಚೆನ್ನಾಗಿದೆಯಾ. ಹೀಗೆಂದು ಮಂಗಳೂರು ಶೈಲಿಯಲ್ಲಿ ಮಾತನಾಡಿದವರು ಆರೋಗ್ಯ ಸಚಿವ ಯು.ಟಿ. ಖಾದರ್.
ಮಂಗಳವಾರ ಸರಿ ರಾತ್ರಿ 1 ಗಂಟೆಗೆ ಆನೇಕಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಹಾಜರಿದ್ದ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ ಹಾಗೂ ವೈದ್ಯರುಗಳಿಂದ ಬೊಕೆ ಸ್ವೀಕರಿಸಿದ ಕ್ಷಣದಲ್ಲಿ ಅಡಿದ ಮಾತುಗಳಿವು.
 ನಾರಾಯಣ ಹೃದಯಾಲಯಕ್ಕೆ ಬೆಳಗ್ಗೆ ಭೇಟಿ ನೀಡಿದ ಸಚಿವರು ಮಧ್ಯಾಹ್ನ 3 ಗಂಟೆಗೆ ಆನೇಕಲ್ಲಿಗೂ ಬರಬೇಕಿತ್ತು. ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಬೆಂಗಳೂರಿಗೆ ಬಂದ ಕಾರಣ ವಾಪಸಾದ ಸಚಿವರನ್ನು ಮತ್ತೆ ಆನೇಕಲ್ಲಿಗೆ ಕರೆತರುವಲ್ಲಿ ಶಾಸಕ ಬಿ. ಶಿವಣ್ಣ ಸಫಲರಾದರು.
ಆಸ್ಪತ್ರೆಗೆ ನೂತನವಾಗಿ ನೀಡಿರುವ ನಗು ಮೊಗು ಯೋಜನೆ  ವಾಹನವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿನಿಯರಿಗೆ ಸಹಾಯಧನದ ಚೆಕ್ ವಿತರಣೆ
ದೇವನಹಳ್ಳಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 20 ಮಂದಿ ವಿದ್ಯಾರ್ಥಿನಿಯರಿಗೆ ಮಲಬಾರ್ ಗೋಲ್ಡ್  ಅಂಡ್ ಡೈಮಡ್ ಕಂಪನಿಯವರಿಂದ ಪ್ರತಿ ವಿದ್ಯಾರ್ಥಿನಿಗೆ ಎರಡು ಸಾವಿರ ರು.ಗಳ ಚೆಕ್ ವಿತರಣಾ ಸಮಾರಂಭ ಬುಧವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಮಲಬಾರ್ ಗೋಲ್ಡ್ ಸಂಸ್ಥೆಯ ಮಾರಾಟ ಅಧಿಕಾರಿ ಮನೋಜ್ ಮಾತನಾಡಿ ತಮ್ಮ ಸಂಸ್ಥೆ ಕೇರಳ ಮೂಲದ್ದಾಗಿದ್ದರೂ ತನ್ನ ವ್ಯಾಪಾರದ ಜೊತೆಯಲ್ಲಿ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಯಾವುದೇ ಕಾರಣಕ್ಕೂ  ಕುಂಟಿತವಾಗಬಾರದು ಎಂಬ ದೃಷ್ಟಿಯಿಂದ ಸಹಾಯ ಧನ ನೀಡಲಾಗುತ್ತಿದೆ ಎಂದರು.   ಮಾರಾಟ ಅಧಿಕಾರಿ ಮುಸ್ತಾಖ್ ವಿದ್ಯಾರ್ಥಿನಿಯರಿಗೆ ಚೆಕ್ ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪುರಸಾಭೆ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್ ಮಾತನಾಡಿ ಮಲಬಾರ್ ಗೋಲ್ಡ್ ಸಂಸ್ಥೆ ಕೇವಲ ವಿದ್ಯಾರ್ಥಿನಿಯರಿಗಷ್ಟೆ ಸಹಾಯ ಧನ ನೀಡುತ್ತಿರುವುದು ಅಭಿನಂದನೀಯ. ಅಲ್ಲದೇ ಗಂಡುಮಕ್ಕಳಿಗೂ ಸಹಾಯ ಧನ ದೊರೆಯುವಂತಾಗಲಿ ಎಂದರು. ಉಪನ್ಯಾಸಕ ಗುರುರಾಜ್ ಸ್ವಾಗತ ಕೋರಿದರು. ಪ್ರಾಂಶುಪಾಲೆ ಹೇಮಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಭಾರತ ಯುವಕರಲ್ಲಿ ಶೇ.17 ರಷ್ಟು ಮಂದಿ ಏಡ್ಸ್‌ಗೆ ತುತ್ತು: ರೆಕ್ಸ್
ಕನಕಪುರ: ಭಾರತದ ಯುವಕರಲ್ಲಿ ಶೇ.17 ರಷ್ಟು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲೈಂಗಿಕ ರೋಗಗಳು ಹಾಗೂ ಏಡ್ಸ್‌ಗೆ ತುತ್ತಾಗಿರುವುದು ಆಘಾತಕಾರಿಯಾದ ಸಂಗತಿಯಾಗಿದೆ ಎಂದು ಪಯಣ ಸ್ವಯಂಸೇವಾ ಸಂಸ್ಥೆಯ ನಿರ್ದೇಶಕ ರೆಕ್ಸ್ ಹೇಳಿದ್ದಾರೆ.
 ಅವರು ಕನಕಪುರದ ರೂರಲ್ ಪದವಿ ಕಾಲೇಜು ಸಭಾಂಗಣದಲ್ಲಿ ಎನ್‌ಎಸ್‌ಎಸ್ ರೆಡ್ ರಿಬ್ಬನ್
ಕ್ಲಬ್ ವತಿಯಿಂದ ಆಯೋಜಿಸಿದ್ದ ಏಡ್ಸ್ ಜಾಗೃತಿ ಕಾರ್ಯಾಗಾರದಲ್ಲಿ ಸೋದಾಹರಣ ಉಪನ್ಯಾಸ ನೀಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಶಿವಬಸವೇಗೌಡ ಮಾತನಾಡಿ, ಮಾರಕ ಏಡ್ಸ್‌ನಿಂದ ಪಾರಾಗಲು ಸಚ್ಚಾರಿತ್ರದ ಗುಣಗಳನ್ನು ರೂಢಿಸಿಕೊಳ್ಳಬೇಕು, ರೋಗದ ಬಗ್ಗೆ ಮಾಹಿತಿ ತಿಳಿವಳಿಕೆಗಳೇ ನಮ್ಮನ್ನು ರೋಗದಿಂದ ರಕ್ಷಿಸುತ್ತವೆ. ಕಾಲೇಜಿನ ರೆಡ್ ರಿಬ್ಬನ್‌ಕ್ಲಬ್ ವಿದ್ಯಾರ್ಥಿಗಳಲ್ಲಿ ಲೈಂಗಿಕ ರೋಗಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ ಎಂದು ಹೇಳಿದರು. ಎನ್‌ಎಸ್‌ಎಸ್ ಸಂಚಾಲಕ ವಾಡೇದೊಡ್ಡಿ ಕಬ್ಬಾಳೇಗೌಡ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಕಾರ್ತೀಕ್ ತಂಡಕ್ಕೆ ಕರಿಯಪ್ಪ ಟ್ರೋಫಿ
ಕನಕಪುರ: ಕನಕಪುರದ ಎನ್‌ಎಸ್ ಯುಐ ಘಟಕದ ವತಿಯಿಂದ ತಾಲೂಕು ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಗಳಲ್ಲಿ ತಾಲೂಕಿನ ಹತ್ತಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.  ಕನಕಪುರದ ರೂರಲ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಷಟಲ್ ಬ್ಯಾಂಡ್ಮಿಟನ್ ಪಂದ್ಯಾವಳಿ ನಡೆದವು. ಎಂಟು ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾವಳಿಯ ವಿಜೇತರಾದ ಕಾರ್ತೀಕ್ ತಂಡದವರಿಗೆ ದಿ.ಎಸ್.ಕರಿಯಪ್ಪ ಟ್ರೋಫಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಮರ್, ಜಿತೇಂದ್ರ, ಇಮ್ರಾನ್, ಪ್ರವೀಣ್, ಷಣ್ಮುಖ ಪಾಲ್ಗೊಂಡಿದ್ದರು.
ಅಕ್ರಮ ಮದ್ಯ ನಾಶ
ಕನಕಪುರ: ಕನಕಪುರ ತಾಲೂಕಿನಲ್ಲಿ ಅಬಕಾರಿ ಇಲಾಖೆ ವಶಪಡಿಸಿಕೊಂಡಿರುವ ಅಕ್ರಮ ಮದ್ಯವನ್ನು ಅಬಕಾರಿ ಆಯುಕ್ತರ  ಆದೇಶದ ಮೇರೆಗೆ ಅಬಕಾರಿ ಜಿಲ್ಲಾಧಿಕಾರಿ ರೂಪಶ್ರೀ ನೇತೃತ್ವದಲ್ಲಿ ನಾಶ ಪಡಿಸಲಾಯಿತು.  ತಾಲೂಕಿನಲ್ಲಿ ವಶಪಡಿಸಿಕೊಂಡಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ 204 ಲೀ.ಮದ್ಯ, 34 ಲೀ.ಬಿಯರ್, 20 ಲೀ.ಸೇಂದಿ ಹಾಗೂ 15 ಲೀ.ಕೊಳೆಯನ್ನು ನಾಶಮಾಡಲಾಯಿತು. ಅಬಕಾರಿ ಅಧಿಕಾರಿಗಳಾದ ಡಿ.ಸಿ.ರೂಪಶ್ರೀ, ಡಿವೈಎಸ್ಪಿ ನರೇಂದ್ರಕುಮಾರ್, ಅಬಕಾರಿ ನಿಗಮದ ವ್ಯವಸ್ಥಾಪಕ ಪರಮಶಿವಯ್ಯ, ಅಬಕಾರಿ ನಿರೀಕ್ಷಕ ಸುರೇಶ್, ತಮ್ಮಯ್ಯ ಪಾಲ್ಗೊಂಡಿದ್ದರು.
ಅಂತೂ ಇಂತೂ ಬೆಟ್ಟಹಳ್ಳಿಗೆ ಬಂದೇ ಬಿಡ್ತು ಬಸ್...
ಸೂಲಿಬೆಲೆ: ಹೋಬಳಿಯ ಬೆಟ್ಟಹಳ್ಳಿದಲ್ಲಿ ಬುಧವಾರ ಶಾಸಕ ಎನ್. ನಾಗರಾಜ್  ಗ್ರಾಮಕ್ಕೆ ನೂತನ ಬಸ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ಈ ಗ್ರಾಮದ ಜನರ ಸಾರಿಗೆ ಕನಸನ್ನು ನನಸು ಮಾಡಿದ್ದಾರೆ.
ಸೂಲಿಬೆಲೆಗೆ ಹೊಂದಿಕೊಂಡಿರುವಂತೆ ಇರುವ ಬೆಟ್ಟಹಳ್ಳಿ ಗ್ರಾಮದ ಜನರು ಸಾರಿಗೆ ಸೌಲಭ್ಯಕ್ಕಾಗಿ ಸುಮಾರು 1 ಕಿ.ಮೀ ನಡೆಯಬೇಕಿತ್ತು.
 ಈ ಸಮಸ್ಯೆಯಿಂದ ಮುಕ್ತಿ ಕೊಡಿಸಲು ಗ್ರಾಮಕ್ಕೊಂದು ಸಾರಿಗೆ ಬಸ್ ಸೌಕರ್ಯವನ್ನು ಕಲ್ಪಿಸಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿತ್ತು. ನೂತನ ಬಸ್ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್. ನಾಗರಾಜ್ ಹೊಸಕೋಟೆ ತಾಲೂಕಿನ 20 ಮಾರ್ಗಗಳಿಗೆ ಹೊಸದಾಗಿ ಬಸ್ ಸೌಲಭ್ಯವನ್ನು ಕಲ್ಪಿಸಲು ಸಾರಿಗೆ ಮಂತ್ರಿಗಳು ಅನುಮತಿ ನೀಡಿದ್ದು, ಸದ್ಯ 5 ಮಾರ್ಗಗಳನ್ನು ಉದ್ಘಾಟನೆ ಮಾಡಲಾಗಿದೆ.  ಇನ್ನುಳಿದ 15 ಮಾರ್ಗಗಳನ್ನು ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ತಿಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪ್ರಸಾದ್, ಗ್ರಾಪಂ ಮಾಜಿ ಸದಸ್ಯ ರಾಮೇಗೌಡ, ಗ್ರಾಮದ ಮುಖಂಡರು ಹಾಜರಿದ್ದರು.
ಸಂಗೀತ ಕಛೇರಿ ಮೂಲಕ ಪ್ರತಿಭಟನಾ ಧರಣಿ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಜಿಲ್ಲಾ ಹೋರಾಟ ಸಮಿತಿಯವರು ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರಕ್ಕಾಗಿ ಕಳೆದ 16 ದಿನಗಳಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿದ್ದು ಬುಧವಾರ ವಿಜಯಪುರದ ನಾಯ್ಡು ತಂಡದವರಿಂದ ಸಂಗೀತ ಗಾಯನ ಆಯೋಜಿಸಿದ್ದರು.
ಸಂಗೀತ ತಂಡದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ವೆಂಕಟಗಿರಿಕೋಟೆ ಮುನಿರಾಜು ಹಾಗೂ ಮಹಾತ್ಮಾಂಜನೇಯ ಅವರು  ಜಾನಪದ ಮತ್ತು ಭಕ್ತಿಗೀತೆಗಳು, ಹೋರಾಟದ ಗೀತೆಗಳನ್ನು ಹಾಡಿ ರಂಜಿಸಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ, ರೈತ ಸಂಘದ ಗೋಪಾಲಸ್ವಾಮಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್. ರವಿಕುಮಾರ್, ಪುರಸಭಾ ಸದಸ್ಯ ಕುಮಾರ್ ಉಪಸ್ಥಿತರಿದ್ದರು. ಬೆಂಗಳೂರಿನಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಎಲ್ಲ ಶಾಸಕರ ಮತ್ತು ಮಾಜಿ ಶಾಸಕರು, ಪ್ರತಿನಿಧಿಗಳ ಸಭೆ ನಡೆದು ಜಿಲ್ಲಾ ಕೇಂದ್ರ ಸ್ಥಳಾಂತರ ಬಗ್ಗೆ ಸಂಪೂರ್ಣವಾಗಿ ಚರ್ಚೆ ನಡೆದು ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.