ಚನ್ನಪಟ್ಟಣ ತಾಲೂಕನಲ್ಲಿ 8700 ಪಹಣಿ ತಿದ್ದುಪಡಿ ಅರ್ಜಿಗಳು ಬಾಕಿ
ಚನ್ನಪಟ್ಟಣ: ತಾಲೂಕಿನಲ್ಲಿ 8700 ಪಹಣಿ ತಿದ್ದುಪಡಿ ಅರ್ಜಿಗಳು ಬಾಕಿ ಉಳಿದಿದ್ದು, ಅದಾಲತ್ ಮೂಲಕ ತಿದ್ದುಪಡಿ ಕಾರ್ಯವನ್ನು ಆರಂಭಿಸಿದ್ದು 30ದಿನಗಳೊಳಗೆ ಈ ಅದಾಲತ್ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ತಿಳಿಸಿದರು.
ತಾಲೂಕಿನ ವಿರೂಪಾಕ್ಷಿಪುರ ನಾಡಕಚೇರಿ ಯಲ್ಲಿ ಪಹಣಿ ತಿದ್ದುಪಡಿ ಆಂದೋಲನ, ಹೋಬಳಿ ಮಟ್ಟದ ಜನಸಂಪರ್ಕಸಭೆ ಮತ್ತು ಪಿಂಚಿಣಿ ಅದಾಲತ್ಗೆ ಚಾಲನೆ ನೀಡಿ ಮಾತನಾಡಿ, ಮೊದಲ ಹಂತವಾಗಿ ಇಂದು ವಿರೂಪಾಕ್ಷಿಪುರ ಹೋಬಳಿಯ ಒಂದುಸಾವಿರ ಪಹಣಿ ತಿದ್ದುಪಡಿ ಅರ್ಜಿಗಳನ್ನು ವಿಲೇ ಮಾಡಲಾಗುವುದು ಎಂದರು.
ಪಹಣಿಯನ್ನು ಗಣಕೀಕರಣ ಗೊಳಿಸುವ ಸಮಯಲ್ಲಿ ಆದ ಲೋಪದಿಂದಾಗಿ ರೈತರು ಪಹಣಿ ತಿದ್ದುಪಡಿಗಾಗಿ ಪ್ರತಿದಿನ ತಾಲೂಕು ಕಚೇರಿ ಅಲೆದಾಡುವಂತಾಗಿದೆ. ಇದನ್ನು ನಾವು ಸರಿಪಡಿಸಿ ರೈತರು ತಮ್ಮ ಕೆಲಸ ಕಾರ್ಯಗಳನ್ನು ಕೈಬಿಟ್ಟು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ನಮ್ಮ ಇಲಾಖೆ ಹೋಬಳಿ ಮಟ್ಟದಲ್ಲಿ ತಿದ್ದುಪಡಿ ಕಾರ್ಯ ಕೈಗೊಂಡಿದೆ ಎಂದರು.
ಮೊದಲ ಹಂತವಾಗಿ ವಿರೂಪಾಕ್ಷಿ ಪುರ ಹೋಬಳಿ ಮಟ್ಟದಲ್ಲಿ ತಿದ್ದುಪಡಿ ಕಾರ್ಯ ಕೈಗೊಂಡಿದ್ದು, ಮುಂದಿನ ಹಂತವಾಗಿ ಉಳಿದ ಭಾಗಕ್ಕೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ತ್ವರಿತವಾಗಿ ಮುಗಿಸಿ ಕೊಡಲು ಶ್ರಮಿಸಬೇಕಿದ್ದು, ಸಿಬ್ಬಂದಿ ಇಲ್ಲ ಸಲ್ಲದ ಸಬೂಬು ಹೇಳದೆ ತ್ವರಿತವಾಗಿ ಕೆಲಸ ಮುಗಿಸಿ ಕೊಡುವ ಕಾರ್ಯಕ್ಕೆ ಮುಂದಾಗ ಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸ ಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ಶಿವರುದ್ರಪ್ಪ ಮಾತನಾಡಿ, ತಾಲೂಕಿನ ರೈತರು ಪಹಣಿ ತಿದ್ದುಪಡಿಗಾಗಿ ಪರದಾಡುತ್ತಿರುವ ಸಂಗತಿಯನ್ನು ಮನಗಂಡು ನಮ್ಮ ಇಲಾಖೆ ಈ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ ಎಂದರು.
ಸ್ಥಳದಲ್ಲೇ ಪರಿಹಾರ ಕಲ್ಪಿಸ ಬಹುದಾದ ಅರ್ಜಿಗಳಿಗೆ ಇಲ್ಲೆ ಪರಿಹಾರ ಕಲ್ಪಿಸಲಾಗುವುದು. ಸಾಧ್ಯವಾಗದ ಅರ್ಜಿಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದ ಅವರು ಈಕಾರ್ಯಕ್ರಮವನ್ನು ಸದ್ಬಳಕೆ ಮಾಡಿ ಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ತಿದ್ದುಪಡಿ ಕಾರ್ಯ ಪೂರ್ಣ ಗೊಂಡಿರುವ ಪಹಣಿಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ವಿವಿಧ ಮಾಶಾಸನ ಪತ್ರ ವನ್ನು ಜಿಲ್ಲಾಧಿಕಾರಿ ಫಲಾನುಭವಿಗಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಶಿವಸ್ವಾಮಿ, ವಿರೂಪಾಕ್ಷಿಪುರ ಹೋಬಳಿ ರಜಸ್ವ ನಿರೀಕ್ಷಕ ಯತೀಶ್, ಗ್ರಾಮ ಲೆಕ್ಕಾಧಿಕಾರಿ ಈಶ್ವರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

